ಚಿಕ್ಕಬಳ್ಳಾಪುರ: ಮದುವೆ ಬಯಸಿ ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿದ್ದ ವ್ಯಕ್ತಿಗೆ ಮಹಿಳೆ ಲಕ್ಷಾಂತರ ರೂ ವಂಚಿಸಿದ್ದಾಳೆ. ಇನ್ನೂ ಪೊಲೀಸರ ತನಿಖೆಯಲ್ಲಿ ಈಕೆ ಅನೇಕ ಪುರುಷರಿಗೆ ಮದುವೆ ಹೆಸರಿನಲ್ಲಿ ಹಣ ಪಡೆದುಕೊಂಡು ಕೈ ಕೊಟ್ಟಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು ನಗರದ ಕೋಮಲ (42) ಆರೋಪಿ. ಇಬ್ಬರ ಮಕ್ಕಳ ತಾಯಿ. ಈಕೆಯ ಗಂಡ ಶಿವಮೊಗ್ಗದಲ್ಲಿ ಕೆಪಿಟಿಸಿಎಲ್ ನೌಕರ. ಈತ ಕಳೆದ 2017 ರಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೂ ಕೋಮಲ ವಿಲಾಸಿ ಜೀವನ ನಡೆಸುವ ಖಯ್ಯಾಲಿಯಿಂದ ಗಂಡಸರನ್ನು ಮದುವೆ ಹೆಸರಿನಲ್ಲಿ ವಂಚಿಸುವುದನ್ನೆ ರೂಢಿಸಿಕೊಂಡಿದ್ದಾಳೆ. ಈಕೆಯಿಂದ 20,940 ರೂ, ಐ ಫೋನ್, ಆ್ಯಪಲ್ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ.
*ಪ್ರಕರಣದ ಹಿನ್ನೆಲೆ*
ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ರಾಘವೇಂದ್ರ (35) ಮ್ಯಾಟಿಮೋನಿ.ಕಾಮ್ ನಲ್ಲಿ ಮದುವೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಇದಾದ ಬಳಿಕ ಕೋಮಲ ಆನ್ ಲೈನ್ ನಲ್ಲಿ ಸಂಪರ್ಕಕ್ಕೆ ಬಂದಿದ್ದು ಗಂಡ ತೀರಿ ಹೋಗಿದ್ದು ಮಕ್ಕಳು ಇರುವುದಿಲ್ಲ. ಮದುವೆಯಾಗಲು ಬಯಸುವುದಾಗಿ ಆಕೆ ತಿಳಿಸಿದ್ದಾಳೆ. ಇಬ್ಬರು ಹೀಗೆ ಆನ್ ಲೈನ್ ಚಾಟಿಂಗ್ ಮಾಡಿಕೊಟ್ಟು ಖುಷಿಪಟ್ಟಿದ್ದು ಇದರ ನಡುವೆ ಕೋಮಲ ವಂಚನೆಗೆ ಬಲೆ ಬೀಸಿದ್ದಾಳೆ. ಪತಿಗೆ ಮೃತಪರಿಹಾರ ಹಣ 6 ಕೋಟಿ ರೂ ಬರುತ್ತಿದೆ. ಇದಕ್ಕೆ 7.40 ಲಕ್ಷ ರೂ ತೆರಿಗೆ ಪಾವತಿಸಬೇಕಾಗಿದೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾಳೆ. ಕೊನೆಗೆ ಆನ್ ಲೈನ್ ಸಂಪರ್ಕ ಕಡಿದುಕೊಂಡಿದ್ದು ಇದರಿಂದ ರಾಘವೇಂದ್ರಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
*ಅನೇಕರಿಗೆ ವಂಚನೆ*
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಸಂಖ್ಯೆ, ಸಾಮಾಜಿಕ ಜಾಲತಾಣಗಳ ಖಾತೆಯ, ಚಾಟಿಂಗ್ ಮಾಹಿತಿಯನ್ನಾಧಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೆಯೇ ವಿಚಾರಣೆ ನಡೆಸಿದಾಗ ಗುಜರಾತ್ ನಲ್ಲಿ ನೆಲೆಸಿರುವ ಕುಂದಾಪುರ ರಾಘವೇಂದ್ರ ಎಂಬುವರಿಗೆ 25 ಸಾವಿರ ರೂ, ಬೆಂಗಳೂರು ನಗರದ ನಾಗರಾಜು ಎಂಬುವರಿಗೆ 1.50 ಲಕ್ಷ ರೂ ಸೇರಿದಂತೆ ಅನೇಕರಿಗೆ ಹಣ ವಂಚಿಸಿರುವುದು ಗೊತ್ತಾಗಿದೆ.
*ಕಾರ್ಯಾಚರಣೆ ಕೈಗೊಂಡ ಪೊಲೀಸರು*
ಪ್ರಕರಣದ ತನಿಖೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ.ಖಾಸೀಂ, ಅಪರಾಧ ಪತ್ತೆ ದಳದ ಡಿವೈಎಸ್ಪಿ ಕೆ.ವೈ.ರವಿಕುಮಾರ್ ನೇತೃತ್ವದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು. ಇದು ವಂಚಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.