ಯುವಕನನ್ನು ನಂಬಿ ಮೋಸ ಹೋದ ವಿಧವೆ; ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ

Suicide 3-11
Published on

ಮಂಡ್ಯ: ಯುವಕನಿಂದ ಮೋಸ ಹೋದ ವಿಧವೆ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ನಡೆದಿದೆ.

ತಾಯಿ ನೇತ್ರಾವತಿ (30), ಮಕ್ಕಳಾದ ಶೋಭಿತಾ (9), ನಂದೀಶ್ (7) ಸಾವಿಗೀಡಾದವರು. ನೇತ್ರಾವತಿ ತನ್ನ ಪತಿ ಸೋಮನನ್ನು ಕಳೆದುಕೊಂಡು, ಇಬ್ಬರು ಮಕ್ಕಳ ಜತೆ ಇದ್ದರು. ಅದೇ ಗ್ರಾಮದ ಆನಂದ್​ ಎಂಬಾತ ನೇತ್ರಾವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಅದನ್ನೇ ನಂಬಿಕೊಂಡಿದ್ದ ನೇತ್ರಾವತಿಗೆ ಬಳಿಕ ಆತ ಮೋಸಮೋಡಿದ್ದ. ಬೇರೆ ಮದುವೆಯಾಗಲು ಸಿದ್ಧತೆ ನಡೆಸಿದ್ದ.

ಇದೇ ವಿಚಾರವಾಗಿ ಗ್ರಾಮದ ಕೆಲವು ಹಿರಿಯರು ಸೇರಿ ಆನಂದ್​ ಮತ್ತು ನೇತ್ರಾವತಿ ನಡುವೆ ರಾಜಿ ಪಂಚಾಯಿತಿ ನಡೆಸಿದ್ದರು. ಆದರೆ ತನಗೆ ನ್ಯಾಯಸಿಗಲಿಲ್ಲ, ಮೋಸ ಹೋದೆ ಎಂದು ನೊಂದ ನೇತ್ರಾವತಿ ಇಬ್ಬರೂ ಮಕ್ಕಳಿಗೆ ವಿಷ ಉಣಿಸಿ, ತಾನೂ ಸೇವಿಸಿದ್ದರು.

ನೇತ್ರಾವತಿ ಹಾಗೂ ಶೋಭಿತಾ ಮಂಡ್ಯ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಮೃತರಾಗಿದ್ದರೆ, ನಂದೀಶ್ ಮೈಸೂರು ಕೆ.ಆರ್​. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net