ಅಪರಾಧ ಲೋಕದತ್ತ ಯುವಕರ ಸೆಳೆತವೇಕೆ?

sakalika 24 mar
Published on

ನಮಗೆ ರಾಮನ ಕಥೆಯೂ ಗೊತ್ತು. ರಾವಣನ ವ್ಯಥೆಯೂ ಗೊತ್ತು. ಕೌರವರ ಬಗ್ಗೆಯೂ ಕೇಳಿದ್ದೇವೆ, ಪಾಂಡವರ ಬಗ್ಗೆಯೂ ಕೇಳಿದ್ದೇವೆ. ಸಿನಿಮಾಗಳಲ್ಲಿ ನಾಯಕ, ಖಳನಾಯಕರನ್ನ ನೋಡುತ್ತಲೇ ಇದ್ದೇವೆ. ಇವೆಲ್ಲದರಿಂದ ನಾವೇನಾಗಬೇಕು ಎಂಬುದನ್ನು ನಾವು ನಿರ್ಧರಿಸಬೇಕಿದೆ.

ಭಾರತೀಯ ಪೊಲೀಸ್ ಸೇವೆಗೆ ನಾನು ಸೇರಿದಾಗಿನಿಂದ ತರಬೇತಿ ಅವಧಿ ಯನ್ನೊಳಗೊಂಡಂತೆ ಸೇವೆ ಸಲ್ಲಿಸಿದ ಗುಲ್ಬರ್ಗಾ, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಕ್ಷುಲ್ಲಕ ಕಾರಣದಿಂದ ಹಿಡಿದು ಕ್ರೂರಾತಿಕ್ರೂರ ಅಪರಾಧಗಳನ್ನೂ ನೋಡಿದ್ದೇನೆ. ಭಾಗಿಯಾದ ಆಪಾದಿತರು, ನೊಂದ ವ್ಯಕ್ತಿ, ಕುಟುಂಬ, ಇವರನ್ನು ಕಳಕಳಿಯಿಂದ ಮಾತನಾಡಿಸಿದ್ದೇನೆ.

ಎಲ್ಲ ಅಪರಾಧ ಘಟನೆಗಳಲ್ಲಿ ಅರೋಪಿತರ ಮನೋಭಾವ, ಆಲೋಚನಾ ಲಹರಿ, ಆತನ ನಂಬುಗೆ, ಆಚಾರ-ವಿಚಾರ, ಬೆಳೆದು ಬಂದ ಹಿನ್ನೆಲೆ, ಪೋಷಣೆ, ಸಂಸ್ಕಾರವನ್ನು ಕೌತುಕದಿಂದ ವಿಶ್ಲೇಷಿಸಿದ್ದೇನೆ. ಇದರಲ್ಲಿ ನಾನು ಮನಗಂಡ ಒಂದು ಅಂಶವೇನೆಂದರೆ ಮನುಷ್ಯ ಪ್ರಕೃತಿಯ ಕೈಗೂಸು, ವ್ಯಕ್ತಿ ತನ್ನ ಆಲೋಚನೆಯ ಪ್ರತಿಫಲ ಎಂಬಂತೆ ಯಾವುದೇ ಅಪರಾಧ ಏಕಾಏಕಿ ಆಗಿಹೋಗುವುದಿಲ್ಲ. ಅದಕ್ಕೊಂದು ಕಾರಣವಿದೆ, ಅಪರಾಧ ಎಸಗುವ ಮೊದಲು ಆರೋಪಿಯ ಮನೋಭಾವದಲ್ಲಿ ಪ್ರಬಲವಾದ ಇಚ್ಛಾಶಕ್ತಿ ಇರುತ್ತದೆ. ಆತ ಆ ಅಪರಾಧ ಮಾಡಲು ಏಕೆ ಸನ್ನದ್ಧನಾದ ಎಂಬುದು ವಿಶ್ಲೇಷಣೆಯ ವಿಷಯ.

ಯುವಕರೇ ಅತಿ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಲು ಕಾರಣವೇನಿರಬಹುದೆಂದು ಹುಡುಕುತ್ತ ಹೊರಟರೆ ಮನುಷ್ಯನ ಬದುಕಿನಲ್ಲಿ ಬಾಲ್ಯಾವಸ್ಥೆಯೆಂಬುದು ಆತನ ಬದುಕೆಂಬ ಕಟ್ಟಡದ ಬುನಾದಿ. ಅದಕ್ಕೆ ಸಕಾಲಕ್ಕೆ ಸತ್-ಸಂಸ್ಕಾರ ದೊರೆತು ಪ್ರಯತ್ನಪೂರ್ವಕವಾಗಿ ಕುಸಂಸ್ಕಾರವನ್ನು ಕಳೆಯಂತೆ ಕಿತ್ತು, ಹುಲುಸಾದ ಭವಿಷ್ಯತ್ತಿನ ಫಲಕ್ಕೆ ಆದರ್ಶಗಳ ಗೊಬ್ಬರ ಹಾಕಿ, ತಂದೆ-ತಾಯಿ, ಶಿಕ್ಷಕರು, ಆ ಮಗುವಿಗೆ 25 ವರ್ಷದ ಯುವಕನಾಗುವವರೆಗೆ ರಕ್ಷಕರಾದರೆ, ಪ್ರತಿ ಯುವಕ ಮುಂದಿನ 75 ವರ್ಷಗಳು ಸಮಾಜದ ಆಸ್ತಿಯಾಗುತ್ತಾನೆ, ಇಲ್ಲವಾದರೆ ಮಾರಕವಾಗುತ್ತಾನೆ.

ಯುವಕರು ಅಪರಾಧ ಮಾಡಲು ಪ್ರೇರಿತವಾಗುವುದು ಆತನ ವಾತಾವರಣ ಹಾಗೂ ಬೆಳೆದ ರೀತಿ. ನೋಡಿದ ಘಟನೆ, ಅರ್ಥೈಸಿಕೊಂಡ ವಸ್ತು, ವಿಷಯ, ಸಂಗತಿಗಳ ಪ್ರಭಾವದಿಂದ. ಬಿತ್ತಿದಂತೆ ಬೆಳೆ, ಬೀಜದಂತೆ ವೃಕ್ಷ ಎಂಬಂತೆ ಒಬ್ಬ ವ್ಯಕ್ತಿಗೆ ಸಿಗಬೇಕಾದ ಶಿಕ್ಷಣ, ಸಂಸ್ಕಾರ ಸಿಗದಿದ್ದರೆ, ಅನುಕರಣೆ ಮಾಡಲು ಯೋಗ್ಯ ವ್ಯಕ್ತಿಗಳು, ಮನೆಯಲ್ಲಿ, ಸುತ್ತಮುತ್ತಲಿನ ವಾತಾವರಣದಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ, ಆತನ ಕಣ್ಣಿಗೆ ಬೀಳುವಂತೆ, ಸಂವಹನಕ್ಕೆ ಸಿಗುವಂತೆ, ಮಾರ್ಗದರ್ಶನಕ್ಕೆ ಲಭ್ಯವಿರುವಂತೆ ಆದಲ್ಲಿ, ಅಂತಹ ಯುವಕರು ಸಾಮಾನ್ಯವಾಗಿ ತಪ್ಪು ಮಾಡುವುದಿಲ್ಲ. ಆತನ ಬಾಲ್ಯಾವಸ್ಥೆಯಲ್ಲಿ ಸರಿಯಾದ ಪೋಷಣೆ, ಮಾರ್ಗದರ್ಶನ, ಆದರ್ಶಗಳ ಅರ್ಥವ್ಯಾಖ್ಯಾನ ಆಗದೇ ಹೋದಲ್ಲಿ ಆ ಯುವಕನಿಗೆ ತಾನು ಅಂದುಕೊಂಡಿದ್ದೇ ಆತನ ಪ್ರಪಂಚವಾಗಿಬಿಡಬಲ್ಲದು. ಇದು ನಮಗೆ ಋಷಿ ಹಾಗೂ ಕಟುಕನ ಮನೆಯಲ್ಲಿ ಬೆಳೆದ ಎರಡು ಗಿಣಿಮರಿಗಳ ಕಥೆಯಿಂದ ತಿಳಿದುಬಂದಿದೆ.

ಮನುಷ್ಯ ತನ್ನ ಆಲೋಚನೆಯ ಪ್ರತಿಫಲ, ಪ್ರಾಪಂಚಿಕ ವೈಭೋಗ, ಕ್ಷಣಿಕ ಸುಖ, ಸುಖಜೀವನಕ್ಕೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಹಣವನ್ನೇ ಅಳತೆಗೋಲಾಗಿಸಿಕೊಂಡಿರುವುದು, ಸಮಾಜದ ವೈರುಧ್ಯ, ಅಸಮತೋಲನ, ತಾರತಮ್ಯ, ಸಾಮಾಜಿಕ ನ್ಯಾಯ ದಾಖಲೆಗಳಿಗೆ ಸೀಮಿತವಾಗಿರುವುದು, ಬಡವ-ಬಲ್ಲಿದನ ಮಧ್ಯೆ ಇರುವ ಅಂತರ ಹೆಚ್ಚಾಗುತ್ತಿರುವುದು, ದೌರ್ಜನ್ಯ, ತಿರಸ್ಕಾರ, ಅವಹೇಳನ ಹೀಗೆ ಹಲವು ವಿಚಾರಗಳು ಯುವಕರು ಅಪರಾಧದ ಕಡೆ ಹೆಜ್ಜೆ ಹಾಕಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣವಾಗುತ್ತವೆ. ಕೆಲವಾರು ಬಾರಿ ಇವಾವು ಅಲ್ಲದ ವಿಶಿಷ್ಟ, ವಿಲಕ್ಷಣ ಕಾರಣಗಳಿಂದಲೂ ಅಪರಾಧ ಎಸಗುವುದುಂಟು.

ಮಾನವೀಯತೆಯ ಬಗ್ಗೆಯೇ ಸಂದೇಹ ಹುಟ್ಟುವಂತೆ ಮಾಡಿದ ಹಲವು ಪ್ರಕರಣಗಳನ್ನು ಕಂಡಿದ್ದೇವೆ. ದೆಹಲಿ ಮತ್ತು ಹೈದರಾಬಾದ್ ಅತ್ಯಾಚಾರ ಪ್ರಕರಣಗಳು, ಮಾನಗೇಡಿ ಹತ್ಯೆಗಳು (ಮರ್ಯಾದೆ ಹತ್ಯೆ), ಯಾರೋ ಎಲ್ಲೋ ಮಾಡಿದ ಭಾಷಣದಿಂದ ನಡೆದ ಗಲಭೆ, ನರಹತ್ಯೆ, ವಿರೂಪಗೊಳಿಸಿದ ಒಂದು ಚಿತ್ರದಿಂದಾದ ದಂಗೆ, ಸಾಮಾಜಿಕ ಜಾಲತಾಣದ ತಪ್ಪು ಸಂದೇಶದಿಂದ ಭಾವೋದ್ವೇಗಕ್ಕೊಳಗಾಗಿ ಮಾಡಿದ ಅಪರಾಧ, ತಮ್ಮ ಇತಿಹಾಸವನ್ನರಿಯದೇ ಯಾರೋ ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ಮಾಡಿದ ಅರ್ಥವ್ಯಾಖ್ಯಾನವನ್ನ ದೇವವಾಣಿಯೆಂದು ನಂಬಿ, ಕಂಬಿ ಎಣಿಸುತ್ತಿರುವ ಕೈಗಳು, ವಾಸ್ತವವನ್ನು ವಿಶ್ಲೇಷಿಸದೆ, ಕಟ್ಟುಕಥೆಗಳನ್ನೇ ನಂಬಿ ಮಾಡಿದ ಕೃತ್ಯಗಳು ಒಂದೇ! ಎರಡೇ! ಇದರಿಂದ, ಇತಿಹಾಸವೇ ರಕ್ತಸಿಕ್ತವಾಗುತ್ತಿದೆ.

ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡು ಸ್ವಂತ ಅಜ್ಜಿಯನ್ನೇ ಹಣಕ್ಕಾಗಿ ಕೊಲೆ ಮಾಡಿದ ಯುವಕ, ಪಿಎಚ್​ಡಿ ಪದವೀಧರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಕೇವಲ ಒಂದು ಹೊತ್ತಿನ ಊಟ, ಮದ್ಯ, 500 ರೂಪಾಯಿಗಾಗಿ ದೊಂಬಿ-ಅರಾಜಕತೆಯಲ್ಲಿ ಪಾಲ್ಗೊಳ್ಳುವ ದಾರಿತಪ್ಪಿದ ಯುವಕರ ಗುಂಪು, ಒಂದು ಮೊಬೈಲ್​ಗಾಗಿ ಹತ್ಯೆ, ಪ್ರಿಯತಮನಿಗಾಗಿ, ತಂದೆ-ತಾಯಿ ಕೊಲೆಗೆ ಮಗಳೇ ಸುಫಾರಿ ಕೊಟ್ಟ ಘಟನೆ ಇವೆಲ್ಲವನ್ನೂ ನಾನು ವಿಚಾರಣೆಗೊಳಪಡಿಸಿದ್ದುಂಟು.

ನಾನು ಕಂಡದ್ದು ಇಷ್ಟೇ: ಅಂತಮುಖವಾಗಿ ಆಲೋಚಿಸದೆ, ಅಂತಃಶಕ್ತಿಯನ್ನು ಅರಿಯದೆ, ಬಾಹ್ಯ ವಾತಾವರಣಕ್ಕೆ ಮನಸೋತು, ಅರಿಷಡ್ವರ್ಗಗಳಿಗೆ ದಾಸರಾಗಿ, ಸೋಮಾರಿತನ, ಆಲಸ್ಯ, ವಿಕೃತ ಮನಸ್ಸಿನಿಂದ ಪ್ರಾಪಂಚಿಕ ಸುಖ ಬಯಸಿದ್ದು. ‘ಸಾವಿದ್ಯಾ ಯಾ ವಿಮುಕ್ತಯೇ’ ಎಂಬಂತೆ, ಎಲ್ಲ ಇತಿ-ಮಿತಿಗಳಿಂದ ಪಾರು ಮಾಡಬಲ್ಲ ಶಿಕ್ಷಣ ಪಡೆಯುವ ಅವಕಾಶವನ್ನು ಅರಿಯದೆ, ತಪ್ಪು ಕಲ್ಪನೆ ಹಾಗೂ ನಕರಾತ್ಮಕ ಆಲೋಚನೆಗಳಿಂದಲೇ ದೇಹ ಮತ್ತು ಮನಸ್ಸನ್ನು ತುಂಬಿಕೊಂಡಿದ್ದು. ಸಮಸ್ಯೆಗೆ ಪರಿಹಾರ ಇರುವುದು ಮನುಷ್ಯನನ್ನು ನಿರ್ಮಾಣ ಮಾಡಬೇಕಾದ ಮನೆಗಳಲಿ, ಮಕ್ಕಳ ಬಗ್ಗೆ ಕನಸನ್ನು ಹೊಂದಬೇಕಾದ ಪಾಲಕರಲ್ಲಿ, ಶಾಲೆಗೆ ಬರುವ ಮಗುವಿನಲ್ಲಿ ಸಂಸ್ಕಾರವನ್ನು ತುಂಬಬೇಕಾದ ಶಿಕ್ಷಕರಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿ, ಈ ಎರಡು ಆಯಾಮಗಳನ್ನು ದಾಟಿ, ಒಂದು ವೇಳೆ ವ್ಯಕ್ತಿ ತಪ್ಪನ್ನು ಮಾಡಿದಾಗ ಆತನನ್ನು ಸರಿದಾರಿಗೆ ತರಲಿಕ್ಕೆಂದೇ ಇರುವ ಸಾಮಾಜಿಕ ವ್ಯವಸ್ಥೆಯಲ್ಲಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 60ರಷ್ಟು ಯುವಕರಿರುವುದು ಹೆಮ್ಮೆಯ ಸಂಗತಿ. ಆದರೆ, ಪರಿಪೂರ್ಣ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ಬಹುದೊಡ್ಡ ಅವಕಾಶ ಪ್ರತಿ ತಂದೆ-ತಾಯಿಗಿದೆ. ಗಡಿಭಾಗದ ಒಂದು ಸಣ್ಣ ಶಾಲೆಯಲ್ಲಿ ಕೇವಲ 4 ಜನ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರಿಗಿದೆ. ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಯಲ್ಲಿ ನೋಡಬಯಸುವ, ಸರ್ವರಿಗೂ ಸಮಬಾಳು, ಸರ್ವರಿಗೆ ಸಮಪಾಲು ಎಂದು ನಂಬುವ, ‘ವಸುದೈವ ಕುಟುಂಬಕಂ’ ಪರಂಪರೆಯಲ್ಲಿ ಬೆಳೆದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನಿಗಿದೆ. ಈ ಕೆಲಸ ಸಮಷ್ಠಿ ಯತ್ನದ ಮೂಲಕ ಆಗಬೇಕಿದೆ.

ನನ್ನದೇ ಉದಾಹರಣೆ ನೋಡುವುದಾದರೆ, ನನ್ನೂರು ಗದಗ ಜಿಲ್ಲೆಯ ಗಡಿಭಾಗವಾದ ನೀಲಗುಂದ, ಕುಮಾರವ್ಯಾಸ ಹುಟ್ಟಿದ ಕೋಳಿವಾಡದ ಪಕ್ಕದೂರು. ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ನನ್ನಲ್ಲಿ, ನನ್ನಮ್ಮ ತುಂಡು ಬಟ್ಟೆಯಲ್ಲಿ ಹೊಲಿದ ಪಾಟಿ ಚೀಲ (ಸ್ಕೂಲ್ ಬ್ಯಾಗ್), ಒಂದು ಪಾಟಿ (ಸ್ಲೇಟ್), ಯಾರೋ ಉಪಯೋಗಿಸಿ ಕೊಟ್ಟ ಪುಸ್ತಕ, ಚಿಕ್ಕ ಬಳಪವಿರುತ್ತಿತ್ತು. ಮಾಸ್ತರ್ (ಟೀಚರ್) ಹೇಳಿದ ಎಲ್ಲ ಪಾಠವನ್ನು ಅರಿಯಬೇಕೆಂಬ ನನ್ನ ಹಂಬಲ, ಎಲ್ಲರಿಗಿಂತಲೂ ಮುಂದಿರಬೇಕೆಂಬ ಹಠ, ಮಾಸ್ತರ್ ಹೇಳಿದ ಗದ್ಯ-ಪದ್ಯ ಬರೆಯುವಾಗ ಬಳಪ ಖಾಲಿಯಾಗುತ್ತಿತ್ತು. ಬಳಪ ಇಲ್ಲದ ಪರಿಸ್ಥಿತಿಯಲ್ಲಿ ನಾನೊಂದು ದಿನ ಮಧ್ಯಾಹ್ನ, ಸರ್ಕಾರಿ ಶಾಲೆಯ ಕೊಠಡಿಯ ಮೂಲೆಯಲ್ಲಿದ್ದ ನನ್ನ ಕೋಣೆಗೆ ಕಿಟಕಿಯಿಂದ ಒಳಹೋಗಿ, ಎಲ್ಲ ಬಳಪಗಳನ್ನು ತೆಗೆದುಕೊಂಡು ಕಿಟಕಿಯಿಂದ ಹೊರಬಂದೆ, ಆ ದಿನ ರಾತ್ರಿ ನನ್ನ ಪಾಟಿ ಚೀಲದಲ್ಲಿದ್ದ ಬಹಳಷ್ಟು ಬಳಪಗಳನ್ನು ನೋಡಿದ ನನ್ನ ತಾಯಿ ನನಗೆ ಊಟ ಕೊಡದೆ ಹೊರ ಹಾಕಿ, ‘ಹಿಂಗ್ ಮಾಡಿದ್ಯಂದ್ರ ನಿನ್ನ ಮುಖ ನಾನ್ ನೋಡ್ಹಂಗಿಲ್ಲ’, ನಾನು ಅದಕ್ಕೆ ಉತ್ತರವಾಗಿ ‘ನನ್ನ ಹತ್ರ ಇರಲಿಲ್ಲ ಅದಕ್ ತೊಗಂಡೆ’ ಎಂದೆ. ‘ನೀ ತೊಗೊಂಡಿಲ್ಲ ಅದನ್ನ, ನೀ ಕದ್ದಿದೀ, ನೀ ಕದ್ದಿದೀ’ ಎಂದು ಹೇಳಿ ಆತ್ಮವಂಚನೆ, ನಿನಗೆ ಅಭ್ಯಾಸವಾದರೆ, ಆತ್ಮಸಾಕ್ಷಿಯೇ ಸತ್ತು ಹೋಗುತ್ತೆ ಎನ್ನುವ ದಾಟಿಯಲ್ಲಿ ಹೇಳಿದ್ದಳು.

ಹಾಗೆಯೇ, ನಾನು ಪಿಯುಸಿ ಓದುವಾಗ, ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ, ನನಗಿರುವ ಕಷ್ಟಗಳಿಗೆ ವ್ಯವಸ್ಥೆಯನ್ನೇ ದೂರುತ್ತಿದ್ದೆ. ಸುತ್ತಲಿನ ಅಸಮಾನತೆಯನ್ನು ಎತ್ತಿ ತೋರುತ್ತಿದ್ದೆ. ನನ್ನ ಪರಿಸ್ಥಿತಿಗೆ ನನ್ನ ಅವಸ್ಥೆಗೆ, ನನ್ನೊಬ್ಬನನ್ನ ಹೊರತುಪಡಿಸಿ ಇಡೀ ಜಗತ್ತೇ ಕಾರಣವೆಂಬಂತೆ ಆಲೋಚಿಸುತ್ತಿದ್ದೆ. ಹೀಗೊಮ್ಮೆ, ಗದಗ ರಾಮಕೃಷ್ಣ ಆಶ್ರಮದಲ್ಲಿ ನನ್ನ ಗುರುಗಳಾದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರೊಂದಿಗೆ ವಾದ ಮಾಡಿದ್ದೆ. ಅದಕ್ಕವರು ನನಗೆ ‘ನೋಡು ರವಿ, ಪ್ರತಿ ಮಗುವಿಗೂ ಜಗತ್ತಾಳುವ ಶಕ್ತಿಯಿದೆ. ನಿನ್ನಲ್ಲಿ ನಿನ್ನ ಎಲ್ಲ ಸಮಸ್ಯೆಗೂ ಪರಿಹಾರವಿದೆ. ಮನುಷ್ಯನನ್ನ ಸೋಲಿಸುವ ವಸ್ತು ಜಗತ್ತಿನಲ್ಲಿ ಇನ್ನು ಸೃಷ್ಟಿಯಾಗಿಲ್ಲ. ಈ ವ್ಯವಸ್ಥೆಯಿಂದ ನಿನಗೆ ತೊಂದರೆಯಾಗಿದೆಯೇ? ಹಾಗಿದ್ದಲ್ಲಿ ವ್ಯವಸ್ಥೆಯನ್ನೇ ಬದಲಾಯಿಸು, ಬದಲಾಯಿಸಿ, ವ್ಯವಸ್ಥೆಯ ಸಮಸ್ಯೆಯನ್ನು ಆಲಿಸು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಗೆ ಬೆಳೆದರು? ಎಂಥ ಚರಿತ್ರೆಯನ್ನು ಸೃಷ್ಟಿಸಿದರು, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್ ಎಂಥ ಬದುಕನ್ನು ಬದುಕಿದ್ದರು, ಅಬ್ರಹಾಂ ಲಿಂಕನ್, ಮೇಡಮ್ ಕ್ಯೂರಿ, ವಿಲ್ಮ ರುಡಾಲ್ಪ್ ಅವರಿಗಿಂತ ಹೆಚ್ಚು ಕಷ್ಟಗಳನ್ನು ನೀನು ಅನುಭವಿಸುತ್ತಿದ್ದೀಯಾ?’ ಎಂದು ನನ್ನಲ್ಲಿದ್ದ ಅಂತಃಶಕ್ತಿಯನ್ನು ಪ್ರಚೋದನೆಗೊಳಿಸಿದರು.

ಹೀಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳಿ ಆಕ್ರೋಶಭರಿತ ಆಲೋಚನೆ ಗಳಿಂದ ಕೂಡಿದ್ದ ನನ್ನನ್ನ ಸರಿಪಡಿಸಿ ಸಮ-ಸಮಾಜದ ಕನಸನ್ನ ಕಂಡು ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಿದರು. ಅರ್ಥ ವಿಷ್ಟೆ. ಅಂದು ನನ್ನ ತಾಯಿ, ಬಳಪಗಳನ್ನು ನಾನು ತೆಗೆದುಕೊಂಡೆ ಎಂದು ಭಾವಿಸಿದ್ದನ್ನ, ‘ನೀನು ಕದ್ದಿದ್ದೀಯಾ, ನೀನು ಕದ್ದಿದ್ದೀಯಾ’ ಎಂದು ಅಪರಾದಿ ಪ್ರಜ್ಞೆಯನ್ನು ಮೂಡಿಸದೆ ಹೋಗಿದ್ದರೆ? ನನ್ನ ಎಲ್ಲ ಅವಸ್ಥೆಗಳಿಗೆ, ಕಷ್ಟಗಳಿಗೆ ಸಮಾಜವನ್ನೇ ದೂರುತ್ತಿದ್ದ ನನ್ನನ್ನ ಗುರುಗಳು ತಿದ್ದಿ-ತೀಡಿ ಮುನ್ನಡೆಸದಿದ್ದರೆ, ನಾನೇನಾಗುತ್ತಿದ್ದೇನೋ? ಹೀಗೆ, ಎಲ್ಲ ಯುವಕರ ಬದುಕಿನಲ್ಲಿ ಅವರಿಗೆ ಆಯ್ಕೆಗಳಿವೆ.

ನಮಗೆ ರಾಮನ ಕಥೆಯೂ ಗೊತ್ತು. ರಾವಣನ ವ್ಯಥೆಯೂ ಗೊತ್ತು. ಕೌರವರ ಬಗ್ಗೆಯೂ ಕೇಳಿದ್ದೇವೆ, ಪಾಂಡವರ ಬಗ್ಗೆಯೂ ಕೇಳಿದ್ದೇವೆ. ಸಿನಿಮಾಗಳಲ್ಲಿ ನಾಯಕ, ಖಳನಾಯಕರನ್ನ ನೋಡುತ್ತಲೇ ಇದ್ದೇವೆ. ಇವೆಲ್ಲದರಿಂದ ನಾವೇನಾಗಬೇಕು ಎಂಬುದನ್ನು ನಾವು ನಿರ್ಧರಿಸಬೇಕಿದೆ. ನಾಯಕನಾಗಬೇಕೋ? ಖಳನಾಯಕನಾಗಬೇಕೋ? ಅಪರಾಧ ಮಾಡಬೇಕೋ? ಉಪಕಾರ ಮಾಡಬೇಕೋ?, ನನ್ನನ್ನ ಇತರರ ಬದುಕಿಗಾಗಿ ಸವೆಸಬೇಕೋ? ಸಾದಾಮಾನವನಾಗಿ ವಿರಮಿಸಬೇಕೋ? ಈ ಆಲೋಚನೆಯೇ ನಮ್ಮ ಬದುಕಿನ ದಿಕ್ಸೂಚಿಯಾಗುತ್ತದೆ. ಯಾರೂ ಹುಟ್ಟುತ್ತಲೇ ಅಪರಾಧಿಗಳಲ್ಲ, ನಮ್ಮ ಆಲೋಚನೆ ಮತ್ತು ಆಯ್ಕೆಗಳೇ ಭವಿಷ್ಯವನ್ನು ನಿರ್ಧರಿಸುತ್ತವೆ. ಪ್ರಲೋಭನೆಗೆ, ಪ್ರಚೋದನೆಗೆ, ಕ್ಷಣಿಕ ಸುಖಕ್ಕೆ, ಅಜ್ಞಾನದಿಂದ ಎಸಗುವ ಕೃತ್ಯಕ್ಕೆ ಆ ಮೂಲಕ ಆಗುವ ಅಪರಾಧಕ್ಕೆ ಶರಣಾಗಿ, ಅಪರಾಧ ಲೋಕದಲ್ಲಿ ಕೈದಿಯಾಗುವುದಕ್ಕಿಂತ ಸ್ವಯಂಪ್ರಜ್ಞೆಯಿಂದ, ಆತ್ಮಜಾಗೃತಿಯಿಂದ, ಸ್ವಯಂ ಶ್ರಮದಿಂದ, ಸದಾಚಾರ, ಸನ್ನಡತೆಯಿಂದ ಸಮೃದ್ಧ ಊರು ನಿರ್ವಿುಸೋಣ, ಆ ಮೂಲಕ ಸದೃಢ ನಾಡು, ಸದೃಢ ಸಮಾಜ, ಸದೃಢ ದೇಶ, ಹಾಗೆಯೇ ಸಮೃದ್ಧ ವಿಶ್ವ ನಿರ್ವಣಕ್ಕೆ ನಿಜ ಶರಣರಾಗಿ ದುಡಿಯೋಣ.

ಸತ್ಯ ಮೇವ ಜಯತೆ

(ಲೇಖಕರು ಹಿರಿಯ ಐಪಿಎಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net