ಅಮೆರಿಕಾ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ :ಕಾರಣ ಇಲ್ಲಿದೆ..

vivek
Published on

ನ್ಯೂಯಾರ್ಕ್: ಭಾರತೀಯ ಮೂಲದ ಅಮೆರಿಕಾದ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ ಯುಎಸ್ ಅಧ್ಯಕ್ಷೀಯ ರೇಸ್‌ನಿಂದ ಹೊರಬಂದಿದ್ದು, ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ. ಅಯೋವಾ ಕಾಕಸ್​ಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ನಂತರ 2024ರ ಅಧ್ಯಕ್ಷೀಯ ರೇಸ್‌ನಿಂದ ಹೊರಬಿದ್ದಿದ್ದಾರೆ,

ಅಯೋವಾ ಕಾಕಸ್‌ನಲ್ಲಿ ನಿರೀಕ್ಷಿತ ಬೆಂಬಲ ಸಿಗದ ಕಾರಣ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ, ರಾಜಕಾರಣಿ ವಿವೇಕ್ ರಾಮಸ್ವಾಮಿ ಸೋಮವಾರ ತಮ್ಮ ಅಧ್ಯಕ್ಷೀಯ ಪ್ರಚಾರವನ್ನು ಸ್ಥಗಿತಗೊಳಿಸಿದ್ದಾರೆ. ಇದರೊಂದಿಗೆ ನವೆಂಬರ್‌ನಲ್ಲಿ ಶ್ವೇತಭವನಕ್ಕೆ ಮತ್ತೆ ಲಗ್ಗೆ ಇಡಲು ಯತ್ನಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಕ್ಷದಲ್ಲಿ ಹಾದಿ ಸುಗಮವಾದಂತಾಗಿದೆ. ಅಯೋವಾ ಕಾಕಸ್ ನಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸಭೆಯ ಫಲಿತಾಂಶದ ನಂತರ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ವಿವೇಕ್ ರಾಮಸ್ವಾಮಿ, ನಾನು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದೆ. ನಾನು ಬಯಸಿದ ರೀತಿಯಲ್ಲಿ ಗೆಲವು ಸಾಧಿಸಲಾಗಲಿಲ್ಲ ಎಂದು ಭಾವಿಸುತ್ತೇನೆ. ಈ ಕ್ಷಣದಿಂದ ನನ್ನ ಅಧ್ಯಕ್ಷೀಯ ಪ್ರಚಾರವನ್ನು ಸ್ಥಗಿತಗೊಳಿಸುತ್ತೇನೆ. ಮುಂದಿನ ಅಧ್ಯಕ್ಷನಾಗಲು ಬೇರೆ ಮಾರ್ಗವಿಲ್ಲ ಎಂದು ಹೇಳಿದರು.

ಮಾಜಿ ಅಧ್ಯಕ್ಷ ಟ್ರಂಪ್ ಅವರು ಅಯೋವಾ ಕಾಕಸ್ ಗೆಲ್ಲುವ ಮೂಲಕ ನವೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆಗಳಿಗೆ ಪಕ್ಷದ ನಾಮನಿರ್ದೇಶನ ಪಡೆಯಲು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು 21.2 ಶೇಕಡಾ ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದರು, ಅಮೆರಿಕಾದ ಸೌತ್ ಕೆರೊಲಿನಾ ಮಾಜಿ ಗವರ್ನರ್ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರು 19.1 ರಷ್ಟು ಮತಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಮಸ್ವಾಮಿ ಶೇ.7.7ರಷ್ಟು ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಗಳಿಸಿದರು.

ಪ್ರಚಾರ ಈಗ ನ್ಯೂ ಹ್ಯಾಂಪ್‌ಶೈರ್‌ ಕಡೆಗೆ ಸಾಗಿದ್ದು, ರಾಮಸ್ವಾಮಿ ಈ ರಾಜ್ಯದಲ್ಲಿ ಟ್ರಂಪ್ ಜತೆಗೆ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ರಾಮಸ್ವಾಮಿ ಪೂರ್ವಿಕರು ಕೇರಳದಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಾಗಿದ್ದು, ಓಹಿಯೋದಲ್ಲಿ ನೆಲೆಸಿದ್ದಾರೆ. ನಿಕ್ಕಿ ಹ್ಯಾಲೆ ನಂತರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ರೇಸ್ ಪ್ರವೇಶಿಸಿದ ಎರಡನೇ ಭಾರತೀಯ-ಅಮೆರಿಕನ್ ಅವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net