

ನವದೆಹಲಿ: ಶಾಲೆಗಳಲ್ಲಿ ಪಠ್ಯಕ್ರಮದ ಕೇಸರಿಕರಣದ ಆರೋಪವನ್ನು ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ತಿರಸ್ಕರಿಸಿದ್ದಾರೆ. ಹಾಗೂ ಶಿಕ್ಷಣದ ಉದ್ದೇಶವು ಹಿಂಸಾತ್ಮಕ ಮತ್ತು ಅಸಡ್ಡೆ ನಾಗರಿಕರನ್ನು ಸೃಷ್ಟಿಸುವುದಲ್ಲ ಎಂದು ಅವರು ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪಠ್ಯಕ್ರಮದಲ್ಲಿನ ಬದಲಾವಣೆ ಹಾಗೂ ಗುಜರಾತ್ ಗಲಭೆ, ಬಾಬರಿ ಮಸೀದಿ ಸೇರಿದಂತೆ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ವಿದ್ಯಾರ್ಥಿಗಳಿಗೆ ಗಲಭೆಗಳ ಬಗ್ಗೆ ಏಕೆ ಕಲಿಸಬೇಕು? ಪಠ್ಯಪುಸ್ತಕಗಳಲ್ಲಿನ ತಿದ್ದುಪಡಿ ಜಾಗತಿಕ ಅಭ್ಯಾಸವಾಗಿದೆ, ಇದು ಶಿಕ್ಷಣದ ಹಿತಾಸಕ್ತಿಯಾಗಿದೆ. ಇತಿಹಾಸದಲ್ಲಿ ಹಿಂಸಾತ್ಮಕ ಮತ್ತು ಅನಾಗರಿಕ ಘಟನೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸುವ ಅಗತ್ಯವಿಲ್ಲ. ಆದ್ದರಿಂದ ಸಾಕ್ಷ್ಯ ಮತ್ತು ಸತ್ಯಗಳ ಆಧಾರದ ಮೇಲೆ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಪಠ್ಯಗಳಲ್ಲಿ ಏನಾದರೂ ಅಪ್ರಸ್ತುತವಾದರೆ ಅದನ್ನು ಬದಲಾಯಿಸಬೇಕಾಗುತ್ತದೆ. ಶಾಲೆಗಳಲ್ಲಿ ಇತಿಹಾಸವನ್ನು ಕಲಿಸುವುದು ಸತ್ಯಗಳನ್ನು ತಿಳಿಸಲೇ ಹೊರತು ಅದನ್ನು ಯುದ್ಧಭೂಮಿಯನ್ನಾಗಿ ಮಾಡಲು ಅಲ್ಲ. ಹೀಗಿರುವಾಗ ಬದಲಾವಣೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು, ವಿವಾದ ಮಾಡುವುದು ಸರಿಯಲ್ಲ ಎಂದಿದ್ದಾರೆ.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪುಸ್ತಕದ ಭಾಗಗಳಲ್ಲಿನ ಬದಲಾವಣೆಗಳ ಬಗ್ಗೆ, ದ್ವೇಷ ಮತ್ತು ಹಿಂಸೆ ಶಾಲೆಗಳಲ್ಲಿ ಕಲಿಸುವ ವಿಷಯಗಳಲ್ಲ. ಎನ್ಸಿಇಆರ್ಟಿಯಂತಹ ಸಂಶೋಧನಾ ಆಧಾರಿತ ಪಠ್ಯಪುಸ್ತಕಗಳು ಈ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಬಾರದು. ವಿಷಯ ತಜ್ಞರಿಂದ ಎನ್ಸಿಇಆರ್ಟಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು, ಅಲ್ಲದೆ ಪಠ್ಯಪುಸ್ತಕದಲ್ಲಿನ ಬದಲಾವಣೆ ಪ್ರಕ್ರಿಯೆಯಲ್ಲಿ ನಾನು ನಿರ್ದೇಶನ ಅಥವಾ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)