

ನವದೆಹಲಿ: ನನ್ನ ಎದೆ ಬಗೆದರೆ ಪ್ರಧಾನಿ ಮೋದಿಯವರೇ ಕಾಣಿಸುತ್ತಾರೆ ಎಂದು ಹೇಳಿಕೆ ನೀಡಿದ್ದ ಚಿರಾಗ್ ಪಾಸ್ವಾನ್, ಇಂದು ಮತ್ತೊಮ್ಮೆ ಮೋದಿಯವರ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಐಸಿಯುನಲ್ಲಿ ಇದ್ದಾಗ ಮೋದಿಯವರು ಮಾತ್ರ ನನಗೆ ಕರೆ ಮಾಡಿ ಸಮಾಧಾನ ಹೇಳಿದ್ದರು. ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಹೀಗಿರುವಾಗ ನಾನ್ಯಾಕೆ ನರೇಂದ್ರ ಮೋದಿಯವರನ್ನು ಗೌರವಿಸದೆ ಇರಬೇಕು ಎಂದು ಪ್ರಶ್ನಿಸಿದ್ದಾರೆ.
ಹಾಗೇ ಇನ್ನೊಂದೆಡೆ ಜೆಡಿಯು ಅಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದರು. ಬಿಜೆಪಿ ನಾಯಕರು..ಅಷ್ಟೇ ಏನು ಪ್ರಧಾನಿ ಮೋದಿಯವರು ನನ್ನ ವಿರುದ್ಧ ಟೀಕೆ ಮಾಡಿದರೆ ಅದನ್ನೂ ಸ್ವೀಕರಿಸುತ್ತೇನೆ. ಆದರೆ ಬಿಹಾರ ಮುಖ್ಯಮಂತ್ರಿ ಯುವ ನಾಯಕರನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ಕೇಳಿದರೆ ಅವರಿಗೆ ಅನುಭವ ಸಾಲದು ಎನ್ನುತ್ತಿದ್ದಾರೆ. ಆದರೆ ಅವರೂ ಸಹ ಯುವನಾಯಕನಾಗಿಯೇ ಅನುಭವ ಪಡೆದವರು ಎಂದು ಚಿರಾಗ್ ಹೇಳಿದ್ದಾರೆ. ಈ ರಾಜ್ಯ ಅವರಿಗೆ 15 ವರ್ಷ ಅವಕಾಶ ನೀಡಿದೆ. ನಮಗೂ ಕೂಡ ಬಿಹಾರದ ಬಗ್ಗೆ ಕಾಳಜಿ, ಯೋಚನೆ ಇದೆ ಎಂದಿದ್ದಾರೆ.