ಯಡಿಯೂರಪ್ಪ ವಿರುದ್ಧ ಕ್ರಮವಿಲ್ಲವೇಕೆ? ಬಿಜೆಪಿಯನ್ನು ಪ್ರಶ್ನಿಸಿದ ದಿನೇಶ್ ಗುಂಡೂರಾವ್

dinesh-gundurao.webp
Published on

ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಈ ದಿಟ್ಟ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕ್ರಮಕೈಗೊಳ್ಳದೇ ದ್ವಂದ್ವ ಅನುಸರಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ನಾವು ಸಹನೆ ಇಟ್ಟುಕೊಳ್ಳಬಾರದು. ಅಂತಹವರ ವಿರುದ್ಧ ನಾವು ಸಾಧ್ಯವಾದಷ್ಟು ಹೆಚ್ಚಿನ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಒಂದು ಕಡೆಯಾದರೆ, ಪಕ್ಷ ಮಟ್ಟದ ವಿಚಾರದಲ್ಲಿ ಯಾಕೆ ದ್ವಂದ್ವ ನಿಲುವು ತಾಳಲಾಗಿದೆ? ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಯಾಗಿ ಜುಲೈ ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈಗ ವಿಚಾರಣೆ ನಡೆಯಬೇಕಾಗಿದೆ ಎಂದು ಹೇಳಿದರು.
ಸಿಐಡಿಯವರು ಯಡಿಯಬರಪ್ಪ ಹಾಗೂ ಮೂವರು ಸಹಚರರ ವಿರುದ್ಧ 700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಇವರು ಸಾಕ್ಷಿನಾಶ, ಪ್ರಕರಣ ಮುಚ್ಚಿಹಾಕುವ ವಿಚಾರ, ಸಂತ್ರಸ್ತ ಬಾಲಕಿ ಹೇಳಿಕೆಗಳನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು.
ಸಹಾಯ ಕೇಳಿ ಬಂದ ಬಾಲಕಿ ಮೇಲೆ ಇಂತಹ ಕೆಟ್ಟ ಅನುಭವ ಆಗಿರುವ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಲಾಗಿರುವುದು ದುರ್ದೈವ. ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಯಾಕೆ ಉಳಿಸಿಕೊಂಡಿದ್ದಾರೆ? ಕನಿಷ್ಠಪಕ್ಷ ಬಿಜೆಪಿಯು ಈ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ತೆಗೆದುಹಾಕುವ ನಿರ್ಧಾರ ಯಾಕೆ ಮಾಡುತ್ತಿಲ್ಲ? ಮಹಿಳೆಯರ ಪರವಾಗಿ ಅವರ ನಿಲುವೇನು? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net