

ಬೆಂಗಳೂರು: ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿಯವರೇ, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್ ಗಾಂಧಿ ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದ್ದೀರಲ್ಲಾ ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ ಎಂದಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ. ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ? ದಯವಿಟ್ಟು ತಿಳಿಸಿ ಇಲ್ಲವಾದರೆ ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ ಎಂದು ಸವಾಲು ಹಾಕಿದ್ದಾರೆ.
ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ. ಸ್ಯಾಮ್ ಪಿತ್ರೋಡಾ ಅವರು ಇದನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿರುವುದು ನಿಜ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು ಎಂದು ಹೇಳಿದ್ದಾರೆ.
ಕಾನೂನು ಪ್ರಕಾರ ಶಿಕ್ಷಾರ್ಹವಾಗಿರುವ ನಿಮ್ಮ ಸುಳ್ಳುಗಳ ಬಗ್ಗೆ ಯಾರೂ, ಯಾವುದೇ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನಮಗೂ ಗೊತ್ತಾಗಿದೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋರುತ್ತೇನೆ ಎಂದಿದ್ದಾರೆ.