

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ಮೈಸೂರು ಸ್ಯಾಂಡಲ್ ಸೋಪ್ ಈಗ ಭಾರಿ ಸುದ್ದಿಯಲ್ಲಿದೆ. ನಟಿ ತಮನ್ನಾ ಭಾಟಿಯಾ ಅವರನ್ನು 6.20 ಕೋಟಿ ರೂ. ಕೊಟ್ಟು, 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದೇ ಇದಕ್ಕೆ ಕಾರಣ. ಸರ್ಕಾರದ ಈ ನಡೆಯ ವಿರುದ್ಧ ಕೆಲವು ಕನ್ನಡಪರ ಸಂಘಟನೆಗಳು ಮತ್ತು ವಿಪಕ್ಷ ನಾಯಕರು ವಾಗ್ದಾಳಿ ಮಾಡುತ್ತಿದ್ದಾರೆ. ಆದರೆ, ಈ ಹಿಂದೆಯೂ ಉತ್ತರ ಭಾರತದವರಾದ ‘ಟಿವಿ ರಾಮಾಯಣ’ದ ಸೀತೆ ದೀಪಿಕಾ ಚಿಖಾಲಿಯಾ ಮತ್ತು ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರನ್ನು ಕೆಎಸ್ಡಿಎಲ್ ಬ್ರಾ್ಯಂಡ್ ಅಂಬಾಸಿಡರುಗಳನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆಗ ಕೇಳಿಬರದ ಕನ್ನಡ ಅಸ್ಮಿತೆಯ ಪ್ರಸ್ತಾಪ ಈಗ ಸದ್ದು ಮಾಡುತ್ತಿದೆ.
ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಸಂಕಲ್ಪದಿಂದ ಅಸ್ತಿತ್ವಕ್ಕೆ ಬಂದ, 109 ವರ್ಷಗಳ ಇತಿಹಾಸವುಳ್ಳ ಸಂಸ್ಥೆ. ಈಗಿನಂತೆ ವ್ಯಾಪಾರಿ ತಂತ್ರಗಳಿಲ್ಲದ ಕಾಲದಲ್ಲೂ ಮೈಸೂರು ಸ್ಯಾಂಡಲ್ ಸೋಪ್, ತನ್ನ ಗುಣಮಟ್ಟ ಮತ್ತು ಪರಿಮಳದಿಂದ ತಾನೇತಾನಾಗಿ ಒಂದು ಬ್ರಾ್ಯಂಡ್ ಆಗಿತ್ತು. ಇದಕ್ಕೆ ಪ್ರಚಾರ ರಾಯಭಾರಿಗಳನ್ನು ನೇಮಿಸಿಕೊಳ್ಳುವ ಪರಿಪಾಠ ಶುರುವಾಗಿದ್ದು, 1992-93ರಲ್ಲಿ. ಆಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರರ ‘ರಾಮಾಯಣ’ ಧಾರಾವಾಹಿಯಲ್ಲಿ ದೀಪಿಕಾ ಚಿಖಾಲಿಯಾ ಸೀತೆಯಾಗಿ ಮನೆಮಾತಾಗಿದ್ದರು. ಜತೆಗೆ ‘ಶೃಂಗಾರ್’ ಹಣೆಬೊಟ್ಟಿಗೂ ಅವರು ರೂಪದರ್ಶಿಯಾಗಿದ್ದರು. 1991-96ರ ನಡುವೆ ಗುಜರಾತಿನ ಬರೋಡಾದಿಂದ ಬಿಜೆಪಿ ಲೋಕಸಭಾ ಸದಸ್ಯೆಯೂ ಆಗಿದ್ದರು. ಆಗ ಕರ್ನಾಟಕದಲ್ಲಿದ್ದುದು ಕಾಂಗ್ರೆಸ್ ಸರ್ಕಾರ.
ಅದು ಸಂದಾಯ ಮಾಡಿದ ಸಂಭಾವನೆ 25 ಲಕ್ಷ ರೂ. ಆಗಿನ್ನೂ ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದ ಗಡಿ ದಾಟಿರಲಿಲ್ಲ. ಆದರೂ ಪ್ರಚಾರಕ್ಕೆ ಮಾತ್ರ ಹೊರರಾಜ್ಯದವರಿಗೇ ಮಣೆ ಹಾಕಿದ್ದೇಕೋ ಗೊತ್ತಿಲ್ಲ. ಆಮೇಲೆ 10 ವರ್ಷ ಕೆಎಸ್ಡಿಎಲ್ ಪ್ರಚಾರ ರಾಯಭಾರಿಗಳ ಬಗ್ಗೆ ಚಿಂತಿಸಲಿಲ್ಲ. ಕ್ರಿಕೆಟಿಗ ಗಣೇಶ್ ಅವರನ್ನು 2003-04ಕ್ಕೂ ಅನ್ವಯವಾಗುವಂತೆ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಂಡಿತು. ದೀಪಿಕಾರಂತೆಯೇ ಇವರಿಗೂ 25 ಲಕ್ಷ ರೂ. ಸಂದಾಯ ಮಾಡಿತು. ಗಣೇಶ್ರನ್ನು ಹೀಗೆ ನೇಮಿಸಿಕೊಳ್ಳುವ ಹೊತ್ತಿಗಾಗಲೇ ಅವರ ಕ್ರಿಕೆಟ್ ಜೀವನ ಮುಗಿದುಹೋಗಿತ್ತು. ನಂತರ ಒಂದು ವರ್ಷ ಪುನಃ ವಿರಾಮ. 2005-06ಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಿಕೊಂಡಿತು. ಆಗ ಅದು ಕೊಟ್ಟಿದ್ದು 84 ಲಕ್ಷ ರೂ. ಕ್ರಿಕೆಟ್ನಲ್ಲಿ ಮುಳುಗಿದ್ದ ಧೋನಿಗೆ, ಕೆಎಸ್ಡಿಎಲ್ ಕೆಲಸಕ್ಕೆ ಸಮಯ ಕೊಡಲಾಗಲಿಲ್ಲ. ಹೀಗಾಗಿ, ಸಂಸ್ಥೆಗೆ ಆದ ಉಪಯೋಗ ಅಷ್ಟಕ್ಕಷ್ಟೇ. ಕೊನೆಗೆ ವಿವಾದ ಕೋರ್ಟ್ ಮೆಟ್ಟಿಲು ಕೂಡ ಹತ್ತಿತು.
ಈಗ 2 ವರ್ಷಗಳಿಂದ ಸಂಸ್ಥೆಯ ಉತ್ಪಾದನೆ, ವಹಿವಾಟು, ಲಾಭಾಂಶ ಎಲ್ಲವೂ ಸಾರ್ವತ್ರಿಕ ದಾಖಲೆ ಮಾಡಿವೆ. ಜತೆಗೆ, ಸಂಸ್ಥೆಯ ವಹಿವಾಟನ್ನು ಉತ್ತರ ಭಾರತ, ಯೂರೋಪ್ ಮತ್ತು ಸೌದಿ ಅರೇಬಿಯಾಗಳಲ್ಲಿ ಕೂಡ ಆರಂಭಿಸಬೇಕೆಂದು ಮತ್ತು 2028ರ ಹೊತ್ತಿಗೆ ವಾರ್ಷಿಕ 5,000 ಕೋಟಿ ರೂ.ಗಳಿಗೆ ಕೊಂಡೊಯ್ಯಬೇಕೆಂದು ತೀರ್ವನಿಸಲಾಗಿದೆ. ಈ ಮಧ್ಯೆ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳದಲ್ಲಿ ಸದ್ಯಕ್ಕೆ ಸಂಸ್ಥೆಯ ವಹಿವಾಟಿನ ಪಾಲು ಶೇ. 82ರಷ್ಟಿದೆ. ಉಳಿದ ಶೇ. 18ರಷ್ಟು ಮಾತ್ರ ಕರ್ನಾಟಕದಲ್ಲಿದೆ. ಹೀಗಾಗಿ, ರಾಷ್ಟ್ರಮಟ್ಟದಲ್ಲಿ ವರ್ಚಸ್ಸಿರುವ ನಟಿ ತಮನ್ನಾ ಭಾಟಿಯಾರನ್ನು ಸರ್ಕಾರ ಈಗ 6.20 ಕೋಟಿ ರೂ. ಸಂಭಾವನೆ ಮೂಲಕ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಂಡಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಇವರಿಗೆ 28 ಮಿಲಿಯನ್ ಫಾಲೋಯರ್ಸ್ ಇದ್ದಾರೆ. ಈ ಹಿಂದೆ ದೀಪಿಕಾ ಚಿಖಾಲಿಯಾ ಬಂದು ಹೋದರು, ಧೋನಿಯೂ ಏನೂ ಮಾಡಲಿಲ್ಲ. ಆಗೆಲ್ಲ ಸುಮ್ಮನಿದ್ದವರು ಈಗ, ಕನ್ನಡದ ಹೆಸರಿನಲ್ಲಿ ವಿರೋಧಿಸುತ್ತಿರುವುದು ಸರಿಯೇ? ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಮ್ಮೆಯ ಉತ್ಪನ್ನವೊಂದನ್ನು ಪ್ರಚಾರ ಮಾಡಲು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಟಿಯೊಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ತಪ್ಪೇ?