ಪರಿಚಯವೇ ಇಲ್ಲದವರನ್ನ ನೋಡಿ ಮುಖ ಸಿಂಡರಿಸೋದ್ಯಾಕೆ? ಇದು ನಿಮ್ಮ ತಪ್ಪಲ್ಲ, ಮನಸಿನ ಗ್ರಹಗತಿ! | Psychology

Psychology
ಪರಿಚಯವೇ ಇಲ್ಲದವರ ಮೇಲೆ ಸುಮ್ಮನೆ ಸಿಟ್ಟು ಯಾಕೆ?
Published on: 

Psychology: ಪರಿಚಯವೇ ಇಲ್ಲದವರ ಮೇಲೆ ಸುಮ್ಮನೆ ಸಿಟ್ಟು ಯಾಕೆ? ಕಾರಣಗಳೇನು ಅಂತ ಮನಃಶಾಸ್ತ್ರ ಏನು ಹೇಳುತ್ತೆ? ನಮ್ಮ ಊರಲ್ಲಿಯೋ, ಇಲ್ಲಾ ನಾವು ಕೆಲ್ಸ ಮಾಡೋ ಆಫೀಸ್‌ನಲ್ಲೋ ನಾವೇನೂ ಮಾತಾಡಿಸದೆ ಇರೋ ಒಬ್ಬರನ್ನ ನೋಡಿದ ತಕ್ಷಣ ಸುಮ್ಮನೆ ಸಿಟ್ಟು ಬರುತ್ತೆ, ಮುಖ ಸಿಂಡರಿಸಿಕೊಳ್ಳೋದು ಅಂತೂ ಮಾಮೂಲು. ಗೊತ್ತೇ ಇಲ್ಲದಿದ್ರೂ, ಇಲ್ಲಾ ಕಡಿಮೆ ಪರಿಚಯ ಇದ್ರೂ ಕೆಲವರು ನಮ್ಮನ್ನ ವಿನಾಕಾರಣ ಇಷ್ಟಪಡಲ್ಲ ಅಂದ್ರೆ ಅದರ ಹಿಂದೆ ಮನಃಶಾಸ್ತ್ರದ ಪ್ರಕಾರ ಹಲವು ಕಾರಣಗಳಿರುತ್ತವೆ

ಸಾಮಾನ್ಯವಾಗಿ ಇಂಥದಕ್ಕೆ ನಮ್ಮ ಸ್ವಭಾವಕ್ಕಿಂತ ಹೆಚ್ಚಾಗಿ ಎದುರಿಗಿರೋ ವ್ಯಕ್ತಿಯ ಒಳಗಿನ ಭಾವನೆಗಳೇ ಕಾರಣವಾಗಿರುತ್ತವೆ. ಇದಕ್ಕೆ ಮುಖ್ಯ ಕಾರಣಗಳು ಹೀಗಿವೆ

1. ಪ್ರೊಜೆಕ್ಷನ್

ಒಬ್ಬ ವ್ಯಕ್ತಿ ತನ್ನಲ್ಲಿರುವ ಕೀಳರಿಮೆ, ಭಯ ಅಥವಾ ತನಗೇ ಇಷ್ಟವಿಲ್ಲದ ಗುಣಗಳನ್ನು ಇತರರ ಮೇಲೆ ಆರೋಪಿಸುವುದನ್ನು ಮನಃಶಾಸ್ತ್ರದಲ್ಲಿ 'ಪ್ರೊಜೆಕ್ಷನ್' (Projection) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ತಮ್ಮ ಜೀವನದ ಬಗ್ಗೆ ಅಸಮಾಧಾನ ಹೊಂದಿರುವ ಕೆಲವರು, ಆ ನೋವು ಮತ್ತು ಹತಾಶೆಯನ್ನು ಬೇರೆಯವರ ಮೇಲೆ ಕೋಪ ಅಥವಾ ದ್ವೇಷದ ರೂಪದಲ್ಲಿ ವ್ಯಕ್ತಪಡಿಸುತ್ತಾರೆ.

2. ಅಸೂಯೆ ಮತ್ತು ಹೋಲಿಕೆ

ನಮ್ಮ ನಡವಳಿಕೆ, ಆತ್ಮವಿಶ್ವಾಸ, ರೂಪ, ಸಾಧನೆ ಅಥವಾ ಇತರರೊಂದಿಗೆ ಬೆರೆಯುವ ರೀತಿಯನ್ನು ಕಂಡು ಕೆಲವರಲ್ಲಿ ಅಸೂಯೆ ಮೂಡಬಹುದು. ತಮಗೆ ಸಿಗದಿರುವುದು ನಮಗೆ ಸಿಕ್ಕಿದೆ ಅಥವಾ ನಾವು ತಮಗಿಂತ ಉತ್ತಮವಾಗಿ ಬದುಕುತ್ತಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡಿದಾಗ, ಯಾವುದೇ ಪರಿಚಯ ಅಥವಾ ಕಾರಣವಿಲ್ಲದಿದ್ದರೂ ನಮ್ಮ ಮೇಲೆ ದ್ವೇಷ ಬೆಳೆಸಿಕೊಳ್ಳಬಹುದು.

3. ಹಳೆಯ ನೆನಪುಗಳ ಹೋಲಿಕೆ

ಮನಃಶಾಸ್ತ್ರದ 'ಟ್ರಾನ್ಸ್‌ಫರೆನ್ಸ್' (Transference) ಸಿದ್ಧಾಂತದ ಪ್ರಕಾರ, ನಮ್ಮ ಮುಖಚಹರೆ, ಮಾತನಾಡುವ ಶೈಲಿ ಅಥವಾ ನಡವಳಿಕೆ ಅವರಿಗೆ ಹಿಂದೆ ನೋವುಂಟುಮಾಡಿದ ಅಥವಾ ಇಷ್ಟವಾಗದ ವ್ಯಕ್ತಿಯ ನೆನಪನ್ನು ತರಬಹುದು. ಇದರಿಂದ ಅರಿವಿಲ್ಲದೆಯೇ ಆ ವ್ಯಕ್ತಿಯ ಬಗ್ಗೆ ಹೊಂದಿದ್ದ ನಕಾರಾತ್ಮಕ ಭಾವನೆಗಳನ್ನು ನಮ್ಮ ಮೇಲೂ ತೋರಿಸಲು ಆರಂಭಿಸಬಹುದು.

4. ಮೊದಲ ನೋಟದ ನಕಾರಾತ್ಮಕ ಪೂರ್ವಾಗ್ರಹ

ಒಬ್ಬ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾದಾಗ ಅವರಲ್ಲಿನ ಯಾವುದೋ ಒಂದು ಸಣ್ಣ ಗುಣ, ಉದಾಹರಣೆಗೆ ಗಂಭೀರ ಮುಖಭಾವ, ಉಡುಗೆ ಅಥವಾ ಮಾತನಾಡುವ ಧಾಟಿ ಇಷ್ಟವಾಗದಿದ್ದರೆ, ಅದನ್ನೇ ಆಧಾರವಾಗಿಟ್ಟುಕೊಂಡು ಅವರ ವ್ಯಕ್ತಿತ್ವದ ಬಗ್ಗೆಯೇ ನಕಾರಾತ್ಮಕ ಅಭಿಪ್ರಾಯ ರೂಪಿಸಿಕೊಳ್ಳಬಹುದು. ವ್ಯಕ್ತಿಯ ಇತರ ಗುಣಗಳನ್ನು ತಿಳಿದುಕೊಳ್ಳುವ ಮೊದಲೇ ಅವರನ್ನು ತಪ್ಪಾಗಿ ಅರ್ಥೈಸುವ ಈ ಮನೋಭಾವವನ್ನೇ ಮನಃಶಾಸ್ತ್ರದಲ್ಲಿ 'ಹಾರ್ನ್ ಎಫೆಕ್ಟ್' (Horn Effect) ಎಂದು ಕರೆಯುತ್ತಾರೆ.

5. ಗುಂಪು ಮನಸ್ಥಿತಿ ಮತ್ತು ಗಾಳಿಸುದ್ದಿ

ನಮ್ಮ ಬಗ್ಗೆ ಯಾವುದೇ ನೇರ ಪರಿಚಯವಿಲ್ಲದಿದ್ದರೂ, ಬೇರೆಯವರು ನಮ್ಮ ಕುರಿತು ಹಬ್ಬಿಸುವ ನಕಾರಾತ್ಮಕ ಮಾತುಗಳನ್ನು ನಂಬಿ ಕೆಲವರು ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಳ್ಳಬಹುದು. ಗುಂಪಿನ ಪ್ರಭಾವಕ್ಕೆ ಒಳಗಾಗಿ, ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ನಮ್ಮ ವಿರುದ್ಧ ದ್ವೇಷ ಬೆಳೆಸಿಕೊಳ್ಳುವ ಸಾಧ್ಯತೆಯಿರುತ್ತದೆ.

6. ಒತ್ತಡ ಮತ್ತು ಅಸಹಾಯಕತೆ

ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳು ಅಥವಾ ವೈಯಕ್ತಿಕ ಜೀವನದ ಸೋಲುಗಳಿಂದ ಮಾನಸಿಕವಾಗಿ ಬಳಲುತ್ತಿರುವ ಕೆಲವರು, ತಮ್ಮೊಳಗಿನ ಅಸಮಾಧಾನ ಮತ್ತು ಕೋಪವನ್ನು ಸೂಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗದೆ, ಅದನ್ನು ಯಾವುದೇ ಸಂಬಂಧವಿಲ್ಲದ ಇತರರ ಮೇಲೆ ಸಿಟ್ಟು ಅಥವಾ ದ್ವೇಷದ ರೂಪದಲ್ಲಿ ಹೊರಹಾಕಬಹುದು.

ಇದನ್ನೂ ಓದಿ: ಆದಿಲ್-ಸೋಮಿ ದಾಂಪತ್ಯ ಅಂತ್ಯವಾಯ್ತಾ? ವೈರಲ್ ಪೋಸ್ಟ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಜೋಡಿ! | Adil Khan Durrani

ಇಂಥ ಟೈಮ್‌ನಲ್ಲಿ ಏನು ಮಾಡ್ಬೇಕು?

ಇಂಥ ಸಂದರ್ಭದಲ್ಲಿ ಬೇರೆಯವರ ಕೋಪ ಇಲ್ಲಾ ದ್ವೇಷವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಅವರ ನಕಾರಾತ್ಮಕ ಮನಸ್ಥಿತಿಗೆ ನಾವು ಕಾರಣ ಅಲ್ಲ ಅನ್ನೋದನ್ನ ಅರ್ಥಮಾಡಿಕೊಳ್ಳಿ. ಅವರಿಗೆ ನಮ್ಮನ್ನ ಸಾಬೀತು ಮಾಡೋಕೆ ಹೋಗೋ ಅವಶ್ಯಕತೆ ಇಲ್ಲ. ಮರ್ಯಾದೆಯಿಂದ, ಸೌಜನ್ಯದಿಂದ ಇದ್ದು, ನಮ್ಮ ಸ್ವಾಭಿಮಾನಕ್ಕೆ ಏನೂ ತೊಂದರೆ ಆಗದಂಗೆ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳೋದೇ ಒಳ್ಳೇದು.