

ನವದೆಹಲಿ: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ದೆಹಲಿಯ ಸ್ತಬ್ಧಚಿತ್ರವನ್ನು ಸೇರಿಸದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಭಾನುವಾರ(ಡಿಸೆಂಬರ್ 22) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ದೆಹಲಿಯ ಜನರನ್ನು ದ್ವೇಷಿಸುತ್ತಿದೆ ಮತ್ತು ರಾಷ್ಟ್ರರಾಜಧಾನಿಯ ಬಗ್ಗೆ ದೂರದೃಷ್ಟಿ ಹೊಂದಿಲ್ಲ ಎಂದಿದ್ದಾರೆ.
ಪ್ರತಿ ವರ್ಷ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಿಂದ ದೆಹಲಿಯ ಟ್ಯಾಬ್ಲೋವನ್ನು ಹೊರಗಿಡುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿಯು ಭಾರತದ ರಾಜಧಾನಿಯಾಗಿದ್ದು ಪ್ರತಿ ವರ್ಷ ಪರೇಡ್‌ನಲ್ಲಿ ಅದರ ಟ್ಯಾಬ್ಲೋವನ್ನು ಸೇರಿಸಬೇಕು. ಆದರೆ ಕಳೆದ ಹಲವು ವರ್ಷಗಳಿಂದ ದೆಹಲಿಯ ಟ್ಯಾಬ್ಲೋಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಇದು ಯಾವ ರೀತಿಯ ರಾಜಕೀಯ. ಅವರು ಏಕೆ ದೆಹಲಿ ಜನರನ್ನು ದ್ವೇಷಿಸುತ್ತಾರೆ? ದೆಹಲಿಯ ಜನರು ಅವರಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಯಾವುದೇ ಯೋಜನೆಯನ್ನು ಹೊಂದಿಲ್ಲ. ದೆಹಲಿ ಜನರ ಬಗ್ಗೆ ಅವರಿಗೆ ಯಾವುದೇ ದೂರದೃಷ್ಟಿ ಇಲ್ಲ. ಅವರು ಕೇಜ್ರಿವಾಲ್ ಮತ್ತು ಎಎಪಿಯನ್ನು ಮಾತ್ರ ನಿಂದಿಸುತ್ತಾರೆ. ಇದಕ್ಕಾಗಿ ನಾವು ಅವರಿಗೆ ಮತ ಹಾಕಬೇಕೇ? ಎಂದು ಹೇಳಿದರು.
ಇದರೊಂದಿಗೆ ಕೇಜ್ರಿವಾಲ್ ಎರಡು ಹೊಸ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಮೊದಲನೆಯದು 'ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ', ಇದರ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುವ ಮಹಿಳೆಯರಿಗೆ ತಿಂಗಳಿಗೆ 2,100 ರೂಪಾಯಿ ನೀಡಲಾಗುತ್ತದೆ. ಸೋಮವಾರದಿಂದ ಈ ಯೋಜನೆಗೆ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದ ಅವರು, ನೀವು ಎಲ್ಲಿಯೂ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ನಾವು ನಿಮ್ಮ ಬಳಿಗೆ (ನೋಂದಣಿ ಪ್ರಕ್ರಿಯೆಗಾಗಿ) ಬರುತ್ತೇವೆ. ನಾವು ದೆಹಲಿಯಾದ್ಯಂತ ತಂಡಗಳನ್ನು ರಚಿಸಿದ್ದೇವೆ. ಮಹಿಳೆಯರಿಗೆ ಯೋಜನೆಗಾಗಿ ನೋಂದಾಯಿಸಲು ಮತ್ತು ಅವರಿಗೆ ಕಾರ್ಡ್ಗಳನ್ನು ಒದಗಿಸಲು ನಾವು ಸಹಾಯ ಮಾಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.
ಎರಡನೇ ಯೋಜನೆ 'ಸಂಜೀವನಿ ಯೋಜನೆ', ಇದರ ಅಡಿಯಲ್ಲಿ ದೆಹಲಿ ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತದೆ. ಸೋಮವಾರದಿಂದ ಈ ಯೋಜನೆಯೂ ಆರಂಭವಾಗಲಿದೆ. ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಚಿಕಿತ್ಸಾ ವೆಚ್ಚವನ್ನು ದೆಹಲಿ ಸರ್ಕಾರ ಭರಿಸುವ ಸಂಜೀವನಿ ಯೋಜನೆಯನ್ನೂ ನಾವು ಘೋಷಿಸಿದ್ದೇವೆ ಎಂದು ಹೇಳಿದ ಕೇಜ್ರಿವಾಲ್ ಈ ಎರಡು ಯೋಜನೆಗಳ ಮೂಲಕ 35 ರಿಂದ 40 ಲಕ್ಷ ಮಹಿಳೆಯರು ಮತ್ತು ಸುಮಾರು 15 ಲಕ್ಷ ವೃದ್ಧರು ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.(ಏಜೆನ್ಸೀಸ್)