ಅಮಿತ್​ ಷಾ ಹೇಳಿಕೆಗೆ ಕೇಜ್ರಿವಾಲ್​ ಟಕ್ಕರ್​​; ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್‌ಶಿಪ್ | Arvind Kejriwal

Untitled design - 2024-12-21T173730.013
Published on

ನವದೆಹಲಿ: ರಾಜ್ಯಸಭೆಯಲ್ಲಿ ಡಾ.ಬಿ.ಆರ್​ ಅಂಬೇಡ್ಕರ್​​ ಕುರಿತ ಗೃಹ ಸಚಿವ ಅಮಿತ್​ ಷಾ ಹೇಳಿಕೆ ವಿವಾದದ ಮಧ್ಯೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್(Arvind Kejriwal) ಅವರು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ದಲಿತ ವಿದ್ಯಾರ್ಥಿಗಳಿಗೆ ಡಾ ಬಿಆರ್ ಅಂಬೇಡ್ಕರ್ ಹೆಸರಿನಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ಶನಿವಾರ(ಡಿಸೆಂಬರ್​ 21) ಘೋಷಿಸಿದ್ದಾರೆ.

ಸಂವಿಧಾನ ರಚನಾಕಾರನ ಬಗ್ಗೆ ಅಮಿತ್​ ಷಾ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ಡಾ.ಅಂಬೇಡ್ಕರ್ ಸಮ್ಮಾನ್ ಸ್ಕಾಲರ್‌ಶಿಪ್ ಯೋಜನೆಯನ್ನು ಆರಂಭಿಸಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ದಲಿತ ಸಮುದಾಯದ ಯಾವುದೇ ವ್ಯಕ್ತಿ ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ನಾನು ಬಯಸುತ್ತೇನೆ. ಇದಕ್ಕಾಗಿ ನಾನು ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನವನ್ನು ಘೋಷಿಸುತ್ತಿದ್ದೇನೆ. ಈಗ ವಿಶ್ವದಾದ್ಯಂತ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಬಯಸುವ ದಲಿತ ಸಮುದಾಯದ ಯಾವುದೇ ವಿದ್ಯಾರ್ಥಿ, ಪ್ರವೇಶದ ನಂತರ ವಿದ್ಯಾರ್ಥಿಗಳ ವೆಚ್ಚವನ್ನು ದೆಹಲಿ ಸರ್ಕಾರ ಭರಿಸುತ್ತದೆ. ಈ ಸ್ಕಾಲರ್‌ಶಿಪ್ ದಲಿತ ಸಮುದಾಯದ ಸರ್ಕಾರಿ ನೌಕರರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.

ಅಮಿತ್ ಷಾ ಅವರು ಅಂಬೇಡ್ಕರ್ ಅವರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸ್ವತಂತ್ರ ಭಾರತದಲ್ಲಿ ಯಾರಾದರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ಗೇಲಿ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕೇಂದ್ರ ಗೃಹ ಸಚಿವರ ಹೇಳಿಕೆಯಿಂದ ನನಗೆ ಮತ್ತು ದಲಿತ ಐಕಾನ್‌ ಅಂಬೇಡ್ಕರ್​​ ಅವರ ಕೋಟ್ಯಂತರ ಅನುಯಾಯಿಗಳಿಗೆ ನೋವಾಗಿದೆ ಎಂದು ಹೇಳಿದರು. ಅಮಿತ್ ಷಾ ಅವರ ಅವಹೇಳನಕಾರಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಏನಿದು ಅಂಬೇಡ್ಕರ್ ವಿವಾದ?

ಡಿಸೆಂಬರ್ 17ರಂದು, ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಹೆಸರು ಕಾಂಗ್ರೆಸ್‌ಗೆ ಫ್ಯಾಷನ್ ಆಗಿ ಬಿಟ್ಟಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುತ್ತಿದ್ದಾರೆ. ಹೀಗೆ ಅವರು ದೇವರ ನಾಮಸ್ಮರಣೆ ಮಾಡಿದ್ದರೆ ಏಳೇಳು ಜನ್ಮದಲ್ಲಿ ಸ್ವರ್ಗ ಸಿಗುತ್ತಿತ್ತು ಎಂದಿದ್ದರು.

ಈ ಹೇಳಿಕೆಯ ನಂತರ ಕಾಂಗ್ರೆಸ್ ಅಮಿತ್ ಷಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ. ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಮಿತ್ ಷಾ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದೆ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅಮಿತ್ ಷಾ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಮತ್ತು ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net