

Mangalasutra : ಎಲ್ಲಾ ಧರ್ಮಗಳಲ್ಲಿ ಮದುವೆ ಎಂಬುದು ಒಂದು ಸಾಮಾನ್ಯ ಸಂಪ್ರದಾಯ. ಆದರೆ, ಆಚರಣೆ ಮಾತ್ರ ವಿಭಿನ್ನವಾಗಿರುತ್ತದೆ. ಹಿಂದೂ ಧರ್ಮದ ಮದುವೆಯಲ್ಲಿ ಮಂಗಳಸೂತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪವಿತ್ರ ಮಂಗಳಸೂತ್ರವೂ ಮದುವೆಯ ಪ್ರಾಥಮಿಕ ಸಂಕೇತ ಮತ್ತು ಮುದ್ರೆಯಾಗಿದೆ.
ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ವಧುವಿನ ಕುತ್ತಿಗೆಗೆ ಈ ಮಂಗಳಸೂತ್ರವನ್ನು ವರ ಕಟ್ಟುತ್ತಾನೆ. ಆರಂಭದಲ್ಲಿ ಹಳದಿ ಹಗ್ಗದಿಂದ ಕಟ್ಟಲಾಗುತ್ತದೆ. ಬಳಿಕ ಚಿನ್ನದ ಮಾಂಗಲ್ಯವನ್ನು ಅಳವಡಿಸಿಕೊಳ್ಳುತ್ತಾರೆ. ಕೆಲವರು ನೇರವಾಗಿ ಚಿನ್ನದ ಮಂಗಳಸೂತ್ರವನ್ನೇ ಕಟ್ಟುತ್ತಾರೆ. ನೀವು ಗಮನಿಸಿರಬಹುದು ಮಂಗಳಸೂತ್ರದಲ್ಲಿ ಕೆಂಪು ಮತ್ತು ಕಪ್ಪು ಮಣಿಗಳಿರುತ್ತವೆ. ಅವುಗಳನ್ನು ಏಕೆ ಧರಿಸಲಾಗುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಇಂದಿನ ಪೀಳಿಗೆಯ ಬಹುತೇಕ ಮಂದಿಗೆ ಮಂಗಳಸೂತ್ರದಲ್ಲಿ ಕಪ್ಪು ಮಣಿಗಳು ಮತ್ತು ಕೆಂಪು ಮಣಿಗಳನ್ನು ಏಕೆ ಅಳವಡಿಸುತ್ತಾರೆ ಎಂಬುದು ತಿಳಿದಿಲ್ಲ. ಈ ಕೆಂಪು ಹವಳವು ನೈಸರ್ಗಿಕವಾಗಿ ರಕ್ತ ಪರಿಚಲನೆ ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
ಇನ್ನು ಜ್ಯೋತಿಷ್ಯದ ಪ್ರಕಾರ ಕೆಂಪು ಹವಳವನ್ನು ಪ್ರತಿನಿಧಿಸುವ ಗ್ರಹ ಮಂಗಳ. ಮಂಗಳ ಗ್ರಹವನ್ನು ಕೆಂಪು ಗ್ರಹವೆಂದೂ ಕರೆಯಲಾಗುತ್ತದೆ. ಮಹಿಳೆಯ ಜಾತಕದಲ್ಲಿ ಮಂಗಳ ಗ್ರಹವು ಆಕೆಯ ಪತಿಯನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿಯೇ ಆಕೆಯ ಪತಿ ಸದಾ ತನ್ನೊಂದಿಗೆಯೇ ಇರಬೇಕೆಂದು ಮತ್ತು ಆರೋಗ್ಯವಾಗಿ ಇರಬೇಕೆಂದು ಖಚಿತಪಡಿಸಿಕೊಳ್ಳಲು ಮಹಿಳೆ ತನ್ನ ಮಂಗಳಸೂತ್ರದದಲ್ಲಿ ಹವಳವನ್ನು ಧರಿಸುತ್ತಾಳೆಂದು ನಂಬಲಾಗಿದೆ.
ಇನ್ನು ಕೆಂಪು ಹವಳವಲ್ಲದೆ, ಕಪ್ಪು ಮಣಿಯನ್ನು ಸಹ ಧರಿಸುತ್ತಾರೆ. ಇದಕ್ಕೆ ಕಾರಣ ಯಾರ ಕೆಟ್ಟ ಕಣ್ಣುಗಳು ಬೀಳಬಾರದೆಂದು. ತಮ್ಮ ಸಂಸಾರದ ಮೇಲೆ ವಕ್ರದೃಷ್ಟಿ ಬೀಳದಿರಲೆಂದು ಕಪ್ಪು ಮಣಿ ಧರಿಸುತ್ತಾರೆ. ಚಿನ್ನವು ಗುರು ಗ್ರಹವನ್ನು ಪ್ರತಿನಿಧಿಸುತ್ತದೆ, ಕೆಂಪು ಹವಳವು ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಕಪ್ಪು ಹವಳ ಶನಿ ಗ್ರಹವನ್ನು ಪ್ರತಿನಿಧಿಸುತ್ತದೆ.
ಆದ್ದರಿಂದ, ಈ ಮೂರನ್ನೂ ತಾಳಿಯ ಮೇಲೆ ಇರಿಸಿ, ದೇವರನ್ನು ಪೂಜಿಸಿದರೆ, ನಮ್ಮ ಕರ್ಮಫಲಗಳು ದೂರವಾಗುತ್ತವೆ ಮತ್ತು ಆರೋಗ್ಯ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಅಂದಹಾಗೆ, ಮಹಿಳೆಯರು ತಮ್ಮ ತಾಳಿಯನ್ನು ಆಗಾಗ್ಗೆ ತೆಗೆಯಬಾರದು. ಹಾಗೆ ಮಾಡುವುದರಿಂದ ಅವರ ಪತಿ ಪಾವಿತ್ರ್ಯದ ಮಾರ್ಗದಿಂದ ದೂರ ಸರಿದಿದ್ದಾರೆ ಎಂದು ಪರಿಗಣಿಸಬೇಕಾಗುತ್ತದೆ. ಈ ಸಮಯದಲ್ಲಿ ಗಂಡ ಹೆಂಡತಿ ಇಬ್ಬರೂ ಕೇತುವಿನ ಪ್ರಭಾವಕ್ಕೆ ಒಳಗಾಗುತ್ತಾರೆ. ಇದರಿಂದಾಗಿಯೇ ವಿಚ್ಛೇದನಗಳು ಸಹ ಸಂಭವಿಸುತ್ತವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.