ಆಪರೇಷನ್ ಸಿಂಧೂರ: ಪಾಕ್ ವಾಯುನೆಲೆಗಳು, ಉಗ್ರರ ಶಿಬಿರಗಳು ಧ್ವಂಸ; ಉಪಗ್ರಹ ಚಿತ್ರಗಳೇ ಸಾಕ್ಷಿ! Operation sindoor

Operation sindoor
Published on

Operation sindoor : ಭಾರತೀಯ ವಾಯುಪಡೆ (IAF) ಮೇ 10 ರಂದು ಕನಿಷ್ಠ 8 ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಸಂಘಟಿತ ನಿಖರ ದಾಳಿಗಳನ್ನು ನಡೆಸಿತು. ಇದೀಗ ಉಪಗ್ರಹ ಸೆರೆಹಿಡಿದ ಚಿತ್ರಗಳು ದಾಳಿ ನಡೆದಿರುವುದನ್ನು ದೃಢಪಡಿಸಿವೆ.

ಭಾರತೀಯ ವಾಯಪಡೆಯ ದಾಳಿಯಲ್ಲಿ ಪಾಕ್​ ಸೇನಾ ನೆಲೆಗಳ ಮೂಲಸೌಕರ್ಯ ಮತ್ತು ಆಸ್ತಿಗಳಿಗೆ ಹಾನಿಯುಂಟಾಗಿರುವುದನ್ನು ಉಪಗ್ರಹದ ಚಿತ್ರಗಳು ದೃಢಪಡಿಸಿವೆ. ದಾಳಿಗೆ ಒಳಗಾದ ರಫೀಕಿ, ಮುರಿಯದ್, ಚಾಕ್ಲಾಲಾ, ರಹೀಮ್ ಯಾರ್ ಖಾನ್​, ಸುಕ್ಕೂರ್, ಚುನಿಯನ್, ಪಸ್ರೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮ್ಯಾಂಡ್​ ಮತ್ತು ನಿಯಂತ್ರಣ ಕೇಂದ್ರಗಳು ಹಾಗೂ ಮದ್ದುಗುಂಡು ಡಿಪೋಗಳು ಧ್ವಂಸವಾಗಿವೆ. ಈ ದಾಳಿಗಳನ್ನು ಸುಧಾರಿತ ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಗಳನ್ನು (ALCM ಗಳು), ಬಹುಶಃ ಬ್ರಹ್ಮೋಸ್ ಬಳಸಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಉಪಗ್ರಹದ ಚಿತ್ರಗಳು ಎರಡು ಪ್ರಮುಖ ಟಾರ್ಗೆಟ್​ ಆದ ಪಾಕಿಸ್ತಾನದ ಮುರಿಡ್ಕೆ ಮತ್ತು ಭವಾಲ್ಪುರದ ದಾಳಿಗೂ ಮುನ್ನ ಮತ್ತು ದಾಳಿಯ ನಂತರದ ಹೋಲಿಕೆಗಳನ್ನು ತೋರಿಸುತ್ತದೆ. ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವಾಯುನೆಲೆಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಪಾಕ್​ ನೆಲೆಗಳು ಧ್ವಂಸಗೊಂಡಿರುವುದು ಗೋಚರಿಸುತ್ತವೆ.

ಅಂದಹಾಗೆ, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಾದ್ಯಂತ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತು. ಲಷ್ಕರ್-ಇ-ತೊಯ್ಬಾ (ಎಲ್‌ಇಟಿ), ಜೈಶ್-ಇ-ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಸಂಘಟನೆಗಳ ಕಾರ್ಯಾಚರಣಾ ಕೇಂದ್ರಗಳೇ ಸೇನೆಯ ಪ್ರಮುಖ ಟಾರ್ಗೆಟ್​ ಆಗಿದ್ದವು. ಪಾಕಿಸ್ತಾನದಲ್ಲಿ ನಾಲ್ಕು (ಭವಲ್ಪುರ್, ಮುರಿಯ್ಕೆ, ಸರ್ಜಲ್ ಮತ್ತು ಮೆಹಮೂನಾ ಜೋಯಾ) ಮತ್ತು ಪಿಒಕೆಯ ಸವಾಯಿ ನಲಾ, ಮುಜಫರಾಬಾದ್, ಸೈಯದ್ನಾ ಬಿಲಾಲ್, ಮುಜಫರಾಬಾದ್, ಗುಲ್ಪುರ್, ಕೋಟ್ಲಿ, ಬರ್ನಾಲಾ, ಭಿಂಬರ್ ಮತ್ತು ಅಬ್ಬಾಸ್, ಕೋಟ್ಲಿ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಕ್ಷಿಪಣಿ ದಾಳಿ ನಡೆಸಿದವು.

ಉಗ್ರರ ಪ್ರಮುಖ ವಾಣಿಜ್ಯ ಕೇಂದ್ರವಾದ ಮುರ್ಡಿಕೆ, ಲಷ್ಕರ್-ಇ-ತೊಯ್ಬಾದ ಪ್ರಧಾನ ಕಚೇರಿಗೆ ನೆಲೆಯಾಗಿದೆ. ಇದನ್ನು ಪಾಕಿಸ್ತಾನದ "ಭಯೋತ್ಪಾದಕ ನರ್ಸರಿ" ಎಂದು ಕರೆಯಲಾಗುತ್ತದೆ. ಎಲ್‌ಇಟಿಯ ಪ್ರಧಾನ ಕಚೇರಿಯು ಸುಮಾರು 200 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ ಮತ್ತು ಭಯೋತ್ಪಾದಕ ತರಬೇತಿ ಶಿಬಿರ ಮತ್ತು ಇತರ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಮುರ್ಡಿಕೆ ಪಾಯಿಂಟ್ 1 ಮತ್ತು 2ರಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲು ಮತ್ತು ನಂತರದ ಚಿತ್ರಗಳು

Muridke 1
Muridke 2

ಮುರ್ಡಿಕೆ - ಪಾಯಿಂಟ್ 3 ಮತ್ತು 4 ರಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮೊದಲು ಮತ್ತು ನಂತರದ ಚಿತ್ರಗಳು

Muridke 3
Muridke 4

ಭಾರತದ ದಾಳಿಗಳು ಪಾಕಿಸ್ತಾನದ ಪಂಜಾಬ್‌ನ ಬಹವಾಲ್‌ಪುರವನ್ನು ಗುರಿಯಾಗಿಸಿಕೊಂಡವು. ಇದು ಜೈಶ್-ಇ-ಮೊಹಮ್ಮದ್‌ನ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. 2008 ರಲ್ಲಿ ಮುಂಬೈನಲ್ಲಿ ನಡೆದ 26/11 ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಮಸೂದ್ ಅಜರ್ ನೇತೃತ್ವದ ಭಯೋತ್ಪಾದಕ ಸಂಘಟನೆಯಾಗಿದೆ.

ಬಹಾವಲ್​​​ಪುರದಲ್ಲಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲು ಮತ್ತು ನಂತರದ ಚಿತ್ರಗಳು ಇಲ್ಲಿವೆ...

Bhawalpur 1
Bhawalpur 2
Bhawalpur 3
Bhawalpur 4
Bhawalpur 5

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ಕ್ರೂಸ್ ಕ್ಷಿಪಣಿ ದಾಳಿಗಳನ್ನು ನಡೆಸಿದ ನಂತರ, ಪಾಕಿಸ್ತಾನವು ಡ್ರೋನ್‌ಗಳೊಂದಿಗೆ ಭಾರತದ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಪಾಕಿಸ್ತಾನದ ಪ್ರದೇಶದೊಳಗಿನ ಆಯ್ದ ಮಿಲಿಟರಿ ಗುರಿಗಳಾದ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ರಫಿಕಿ, ಚಾಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿನ ಮದ್ದುಗುಂಡು ಡಿಪೋಗಳ ಮೇಲೆ ದಾಳಿ ಮಾಡಿತು. ನೂರ್ ಖಾನ್, ರಫೀಕಿ, ಮುರಿದ್, ಸುಕ್ಕೂರ್, ಸಿಯಾಲ್‌ಕೋಟ್, ಪಸ್ರೂರ್, ಚುನಿಯನ್, ಸರ್ಗೋಧಾ, ಸ್ಕರು, ಭೋಲಾರಿ ಮತ್ತು ಜಾಕೋಬಾಬಾದ್ ಸೇರಿದಂತೆ 11 ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಪರೇಷನ್ ಸಿಂಧೂರ ನಂತರದ ಪಾಕ್​ ವಾಯುನೆಲೆಗಳ ಮೊದಲು ಮತ್ತು ನಂತರದ ಚಿತ್ರಗಳು ಇಲ್ಲಿವೆ...

ಪಸ್ರೂರ್ ವಾಯು ರಕ್ಷಣಾ ರಾಡಾರ್

Pasrur 1
ಚುನಿಯಾನ್​ ವಾಯು ರಕ್ಷಣಾ ರಾಡಾರ್
Pasrur 2
ಅರಿಫ್‌ವಾಲಾ ವಾಯು ರಕ್ಷಣಾ ರಾಡಾರ್
Arifwala
ಸರ್ಗೋಧಾ ಏರ್​​ಫೀಲ್ಡ್​
Sargodha
ರಹೀಮ್ ಯಾರ್ ಖಾನ್ ಏರ್​ಫೀಲ್ಡ್​
Rahim Yar
ಚಾಕ್ಲಾಲಾ ಏರ್​ಫೀಲ್ಡ್​ (ನೂರ್ ಖಾನ್)
Chaklala
ಸುಕ್ಕೂರ್ ಏರ್​ಫೀಲ್ಡ್​
Sukkur
ಭೋಲಾರಿ ಏರ್​ಫೀಲ್ಡ್​
Bholari
ಜಾಕೋಬಾಬಾದ್ ಏರ್​ಫೀಲ್ಡ್​
Jacobabad

ಭಾರತ ಆಪರೇಷನ್​​ ಸಿಂಧೂರ ಹೆಸರಿನಲ್ಲಿ ಕಳೆದ ವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ 25 ನಿಮಿಷಗಳಲ್ಲಿ 24 ಕ್ಷಿಪಣಿ ದಾಳಿಗಳನ್ನು ನಡೆಸಿ 100 ಭಯೋತ್ಪಾದಕರನ್ನು ಕೊಂದಿತು. ಭಾರತದ ಆಪರೇಷನ್ ಸಿಂಧೂರ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಅಂದಿನಿಂದ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿರುವ ಭಾರತೀಯ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ಸೇನೆ ಪ್ರಬಲವಾಗಿ ಹಿಮ್ಮೆಟ್ಟಿಸಿತು. ಶನಿವಾರ, ಪಾಕಿಸ್ತಾನದ ಅನೇಕ ವಾಯುನೆಲೆಗಳಲ್ಲಿ ಅನೇಕ ಸ್ಫೋಟಗಳ ಶಬ್ದಗಳು ವರದಿಯಾಗಿವೆ. ಇತ್ತ ಕಾಶ್ಮೀರದ ಶ್ರೀನಗರದಲ್ಲಿಯೂ ಸ್ಫೋಟಗಳು ಕೇಳಿಬಂದಿವೆ.

ಶನಿವಾರ (ಮೇ 10) ಸಂಜೆ ಪಾಕಿಸ್ತಾನವು ಕದನ ವಿರಾಮಕ್ಕೆ ಕರೆ ನೀಡಿತು. ಆದರೆ ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿತು. ಇತ್ತೀಚಿನ ದಿನಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾನುವಾರ (ಮೇ 11) ರಾತ್ರಿ "ಮೊದಲ ಶಾಂತಿಯುತ" ರಾತ್ರಿಯಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭಾನುವಾರ ರಾತ್ರಿ ಬಹುತೇಕ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸುಮಾರು 19 ದಿನಗಳ ಬಳಿಕ ಮೊದಲ ಶಾಂತಿಯುತ ರಾತ್ರಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net