ಸಿಎಂ, ಡಿಸಿಎಂ ಗೆ ರಾತ್ರಿ ವೇಳೆ ಬಿಜೆಪಿ ಶಾಸಕರು ಭೇಟಿ ಮಾಡುವುದೇಕೆ: ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನೆ

st somashekhar
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ರಾತ್ರಿ 10.30ರ ನಂತರ, ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಮಧ್ಯರಾತ್ರಿ ಬಿಜೆಪಿ ಶಾಸಕರು ಭೇಟಿಯಾಗುತ್ತಾರೆ. ಸಿಎಂ, ಡಿಸಿಎಂ ಅವರನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ 15 ನಿಮಿಷ ಹೊಗಳಿ ಮಾತನಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯವೋ ? ಕಮಿಷನ್ ಹೊಡೆಯಲಿಕ್ಕೋ ? ಎಂದು ಮಾಜಿ ಸಚಿವ, ಬಿಜೆಪಿ ಬಂಡಾಯ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ರಾಜಕೀಯ ಅಧಿಕಾರದ ಆಶ್ರಯ ಹಾಗೂ ಕಮಿಷನ್ ಗಾಗಿ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನತ್ತ ಹೋಗಿದ್ದಾರೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆಗೆ ಪ್ರತ್ಯುತ್ತರವಾಗಿ ಹೀಗೆ ಪ್ರಶ್ನಿಸಿದರು.

ಬದ್ಧತೆ ತೋರಿಸಲಿ

ಶೋಭಾ ಕರಂದ್ಲಾಜೆಯವರು ಹಿಂದೆ ರಾಜ್ಯದ ಸಚಿವರಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಎರಡನೇ ಬಾರಿ ಮಂತ್ರಿಯಾಗಿದ್ದಾರೆ. ಅವರು ಕಮಿಷನ್ ಹೊಡೆದೇ ಇಲ್ಲವಾ ? ಕೇಂದ್ರ ಮಂತ್ರಿಯಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ಕ್ಷೇತ್ರಕ್ಕೆ ಕೇಂದ್ರದ ವಿಶೇಷ ಯೋಜನೆ ತಂದು ಅಭಿವೃದ್ಧಿ ಬಗೆಗಿನ ಬದ್ಧತೆ ತೋರಿಸಬೇಕು ಎಂದು ಒತ್ತಾಯಿಸಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಹೋದರು. ಅಲ್ಲಿನ ಜನರು ಛೀಮಾರಿ ಹಾಕಿದ ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಂದಿದ್ದಾರೆ. ಕ್ಷೇತ್ರದಿಂದ ಕ್ಷೇತ್ರ ಸುತ್ತಾಡಿದವರು ‌ನನ್ನ ತಾಕತ್ತನ್ನು ಪ್ರಶ್ನಿಸುತ್ತಿದ್ದಾರೆ ಎಂದು ಛೇಡಿಸಿದರು‌‌.

ಯಶವಂತಪುರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬೆಂಗಳೂರು ಉತ್ತರ ಲೋಕಸಭಾ ಸದಸ್ಯತ್ವ ರಾಜೀನಾಮೆ ನೀಡಿ ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ತಾಕತ್ತು ತೋರಿಸಲಿ ಎಂದು ಎಸ್.ಟಿ.ಸೋಮಶೇಖರ್ ಸೆಡ್ಡು ಹೊಡೆದರು.

ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ವಿಶೇಷ ಗೌರವವಿದೆ. ಆದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ‌.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದ್ದಾರೆ. ಮತ್ತೊಬ್ಬರತ್ತ ಬೊಟ್ಟು ತೋರಿಸುವ ಮುನ್ನ ಅವರ ಮೊಮ್ಮಕ್ಕಳಿಬ್ಬರು ಹಾಸನದಲ್ಲಿ ಏನು ಮಾಡಿದರೆಂಬುದನ್ನೂ ಹೇಳಲಿ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net