ನಾನೇಕೆ ಬುದ್ಧಳಾಗಲಿಲ್ಲ…!

Buddha
Published on
ಸತ್ಸಂಗ
ದುಃಖದ ಅನೇಕ ಮುಖಗಳನ್ನು ಕಂಡ ಸಿದ್ದಾರ್ಥನಿಗೆ ಆ ಎಲ್ಲ ದುಃಖಗಳಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳ ಬೇಕೆಂದೆನಿಸಿತು. ನಡುರಾತ್ರಿಯಲ್ಲಿ ನಿದ್ದೆಯಲ್ಲಿದ್ದ ಪತ್ನಿ ಯಶೋಧರೆ ಮತ್ತು ಮಗ ರಾಹುಲನನ್ನು ಬಿಟ್ಟು ಸತ್ಯಶೋಧನೆಗಾಗಿ ನಡೆದ. ಜೀವನದ ಸತ್ಯವನ್ನು ಕಂಡು ದುಃಖದ ನಿಮೂಲನೆಯ ಮಾರ್ಗವನ್ನು ಮನಗಂಡು ‘ಗೌತಮಬುದ್ಧ’ನಾಗಿ ಹಿಂದಿರುಗಿದ. ಇದು ಎಲ್ಲರಿಗೂ ತಿಳಿದ ಇತಿಹಾಸ. ‘ಬುದ್ಧ’ ಎಂದರೆ ನಿದ್ದೆಯಿಂದ ಎದ್ದವ. ಎಲ್ಲವನ್ನೂ ಗೆದ್ದವ. ಜೀವನದ ಸತ್ಯವನ್ನು ಕಂಡವ.

ಆದರೆ ಭಾರತೀಯ ನಾರಿಗೆ ಇಲ್ಲೊಂದು ಜಿಜ್ಞಾಸೆ ಮೂಡಿತು. ಸತ್ಯದ ಇನ್ನೊಂದು ಮುಖ ಕಂಡಿತು. ನಾನೊಬ್ಬ ಸ್ತ್ರೀ. ನಾನು ಮಗಳಾದೆ. ತಾಯಿಯಾದೆ. ಸೋದರಿಯಾದೆ. ಜೀವನದ ಎಲ್ಲಾ ಅವಸ್ಥೆಗಳಲ್ಲಿಯೂ ನಾನಾ ರೂಪಗಳಿಂದ ಹೊರ ಹೊಮ್ಮಿದೆ. ಆದರೆ ಈ ಜೀವನದ ಪಯಣದಲ್ಲಿ ನಾನೆಂದಿಗೂ ಬುದ್ದಳಾಗಲಿಲ್ಲ.. ಏಕಿರಬಹುದು? ಎಂಬುದು. ತಾಯಿಯೊಬ್ಬಳು ಹೀಗೆ ಜೀವನದ ಸತ್ಯವನ್ನು ಕಂಡುಕೊಳ್ಳುವೆ, ಸಾಂಸಾರಿಕ ದುಃಖ ಗಳಿಂದ ಹೊರಬರುವ ರಹಸ್ಯ ತತ್ವವನ್ನು ಮನಗಾಣುವೆ ಎಂಬ ಸಂಕಲ್ಪದೊಂದಿಗೆ, ಮನೆಯಲ್ಲಿ ಮಲಗಿದ ಗಂಡ-ಮಕ್ಕಳನ್ನು ಹಿರಿಯರನ್ನು ಪರಿವಾರವನ್ನು ತೊರೆದು ನಡುರಾತ್ರಿಯಲ್ಲಿ ಸಾಧನೆಯ ಮಾರ್ಗಕ್ಕೆ ತೆರಳುವಳೇ? ಹಾಗೇನಾದರೂ ಹೋಗಿದ್ದರೆ ಅವಳೂ ಸಹ ಹಿಂದಿರುಗಿ ಬಂದಾಗ ಬುದ್ದಳೆನಿಸುತ್ತಿದ್ದಳೆ?

ಆದರೆ ವಿಪರ್ಯಾಸವೋ ವಿಚಿತ್ರವೋ ಗೊತ್ತಿಲ್ಲ. ಯಾವ ಸ್ತ್ರೀಯೂ ಹಾಗೆ ಬುದ್ಧಳಾಗಲಿಲ್ಲ. ಅವಳಿಗೆ ತನ್ನ ಕರ್ತವ್ಯ ಪಥವೇ ಸಾರ್ಥಕ ಸಾಧನೆಯ ಹಾದಿ. ಗೃಹಸ್ಥ ಧರ್ಮವೇ ಅವಳಿಗೆ ಮಹಾನ್ ಬೋಧಿವೃಕ್ಷವೆನಿಸಿತು. ತನ್ನನ್ನೆ ಅವಲಂಬಿಸಿದ ಪರಿವಾರದ ಸುಖಕ್ಕಾಗಿ ನಿರಂತರ ಶ್ರಮಪಡುವುದು, ಸಮಯದ ಅರಿವಿಲ್ಲದೆ ದುಡಿಯುವುದೇ ಅವಳ ತಪಸ್ಸು.

ನಂಬಿದವರನ್ನು ನಡುನೀರಿನಲ್ಲಿ ತ್ಯಜಿಸಿ ಕರ್ತವ್ಯ ಕರ್ಮಗಳಿಂದ ಪಲಾಯನ ಮಾಡುವುದು ಬಹುಶಃ ಇಂತಹ ಸ್ತ್ರೀಯರ ಸ್ವಭಾವಕ್ಕೆ ಸ್ವಲ್ಪ ವಿಪರೀತವೆನಿಸೀತು. ಅವಳು ಕರ್ತವ್ಯದ ಹಾದಿಯಲ್ಲಿ ಸುಖ-ದುಃಖ, ನಿರಾಸೆ - ತಿರಸ್ಕಾರ, ಅವಮಾನಗಳ ಮಳೆಯಲ್ಲಿ ನೆನೆದರೂ ಹಿಂಜರಿಯುವ ಸ್ವಭಾವವನ್ನು ಹೊಂದಲಿಲ್ಲ.

ಮಹಾಭಾರತದಲ್ಲಿ ಪಾಂಡವರು ವನವಾಸಕ್ಕೆ ತೆರಳುವ ಸಂದರ್ಭ. ಆಗ ಅತ್ತೆ ಕುಂತಿದೇವಿ ಸೊಸೆ ದ್ರೌಪದಿಗೆ- ನನ್ನ ಮಕ್ಕಳು ಕಾಡಿನಲ್ಲಿದ್ದರೂ ನನಗೆ ಚಿಂತೆ ಇಲ್ಲ ದ್ರೌಪದಿ..!ಏಕೆಂದರೆ ಜೊತೆಗೆ ನೀನಿರುವೆ. ನಿನ್ನ ಕಾರ್ಯ ಸಾಮರ್ಥ್ಯ, ನಿನ್ನ ವಿವೇಚನಾ ಶಕ್ತಿ, ನಿನ್ನ ಧೈರ್ಯ ಇವೆಲ್ಲದರ ಮೇಲೆ ನನಗೆ ಪರಿಪೂರ್ಣ ನಂಬಿಕೆ ಇದೆ ಎನ್ನುತ್ತಾಳೆ. ತನ್ನ ಮಕ್ಕಳಿಗೆ ಹೇಳದ ಇಂತಹ ಮಾತುಗಳನ್ನು ಸೊಸೆಗೆ ಹೇಳಿದಳು. ಇದು ಭಾರತೀಯ ನಾರಿಯರ ಸ್ವ ಸಾಮರ್ಥ್ಯಕ್ಕೆ ಸಾಕ್ಷಿ.

ಸಿದ್ಧಾರ್ಥನಿಗೂ ಯಶೋಧರೆಯ ಬಗ್ಗೆ ಬಹುಶಃ ಇದೇ ನಂಬಿಕೆ ವಿಶ್ವಾಸ ಗಟ್ಟಿಯಾಗಿ ಇದ್ದಿರಬಹುದು. ತನ್ನ ಪತ್ನಿ ತನ್ನ ಅನುಪಸ್ಥಿತಿಯಲ್ಲಿ ಮನೆಯ ಹಾಗೂ ಪರಿವಾರದ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಸಶಕ್ತಳೆಂದು ತಿಳಿದಿದ್ದನೇನೋ..!

ಸಂಸಾರ ಜೀವನದಲ್ಲಿಯೂ ಇಂತಹ ಅನೇಕ ಸಿದ್ದಾರ್ಥರು ಸಾರ್ಥಕ ಬುದ್ಧರಾಗುತ್ತಾರೆ. ಆದರೆ ಅವರ ಹಿಂದೆ ಬೆನ್ನೆಲುಬಾಗಿ ಒಬ್ಬ ಯಶೋಧರೆ ಪತ್ನಿಯಾಗಿಯೋ, ತಾಯಿಯಾಗಿಯೋ, ಮಗಳಾಗಿಯೋ ಸದಾ ಇದ್ದೇ ಇದ್ದಾಳೆ ಎಂಬುದು ಸಂಸಾರದ ಸತ್ಯ. ‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’ -ಇದು ಭಾರತೀಯ ಸನಾತನ ಧರ್ಮದ ಅಡಿಯಲ್ಲಿ ಬೆಳೆದು ಬಂದ ಸ್ತ್ರೀ ತನ್ನ ಜೀವನದಲ್ಲಿ ಅನುಸರಿಸಿದ ಧ್ಯೇಯ. ಪರಿವಾರದ ಸಂತಸ ತುಂಬಿದ ನಗುವೇ ಅವಳಿಗೆ ತನ್ನೆಲ್ಲ ದುಃಖಗಳಿಗೆ ಪರಿಹಾರವೆನಿಸುತ್ತದೆ. ಪರಿವಾರಕ್ಕಾಗಿ ಸಂಪೂರ್ಣ ಜೀವನ ತಪಸ್ಸನ್ನು ಮಾಡುತ್ತಾಳೆ. ಆದರೆ ಆ ತಪಸ್ಸಿಗೆ ಫಲದ ಅಪೇಕ್ಷೆ ಮಾಡುವುದಿಲ್ಲ.

ಕರ್ತವ್ಯ ಕರ್ಮಗಳನ್ನು ತ್ಯಜಿಸಿ ಇನ್ನೇನನ್ನೋ ಕಂಡುಕೊಳ್ಳುವ ಹಂಬಲ ಇವಳಿಗೆ ಇಲ್ಲ. ಇವಳು ದೇವತೆಯಾಗಿ ಪೂಜೆಗೊಂಡಳು. ಇವಳು ವೇದವಿದುಷಿ ಗಾರ್ಗಿಯೂ ಆದಳು. ಸರ್ಪ¤ಗಳ ಮಂಡಲ ಸೇರಿದ ಅರುಂಧತಿಯೂ ಆದಳು. ಇವಳು ಶಿವಾಜಿಯ ಪ್ರೇರಕ ಶಕ್ತಿ ಜೀಜಾಬಾಯಿಯೂ ಆದಳು. ಖಡ್ಗ ಹಿಡಿದು ರಣಾಂಗಣದಲ್ಲಿ ಯುದ್ದಗಳನ್ನು ಗೆದ್ದ ವೀರಯೋಧೆ ಲಕ್ಷ್ಮಿಬಾಯಿಯೂ ಆದಳು. ಲಕ್ಷಾಂತರ ಜನರಿಗೆ ಜೀವನೋಪಾಯ ಮಾರ್ಗ ಕೊಟ್ಟ ಸುಧಾ ಮೂರ್ತಿಯೂ ಆದಳು. ಭೂಮಿಯಲ್ಲಿ ಕುಳಿತು ಯಾನ ಒಂದನ್ನು ಅಲಂಕರಿಸಿ ಚಂದ್ರನಿಗೆ ಉಡುಗೊರೆಯನ್ನೂ ಕೊಟ್ಟಳು. ಆದರೆ ಅವಳೊಬ್ಬ ತಾಯಿಯಾದಳಷ್ಟೇ, ಬುದ್ಧಳಾಗಲಿಲ್ಲ. ಅನ್ಯ ಎಲ್ಲಾ ಸಾಧನೆಗಳನ್ನು ತನ್ನ ಗೃಹಸ್ಥ ಧರ್ಮದ ವೃಕ್ಷದಡಿಯಲ್ಲಿಯೇ ತನ್ನ ಕರ್ತವ್ಯದೊಂದಿಗೆ ಸಾಧಿಸುತ್ತಾಳೆ. ಅವಳು ಅವಳಾಗಿಯೇ ಇದ್ದು ಎಲ್ಲವನ್ನೂ ಗೆದ್ದು ಬರುತ್ತಾಳೆ.

ಆದರೂ ಆಗಾಗ ಅನಿಸುತ್ತದೆ ‘ಹೇ ಭಾರತೀಯ ನಾರಿ ನೀನೇಕೆ ಬುದ್ಧಳಾಗಲಿಲ್ಲ’ ಎಂದು...!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net