

ಬೆಂಗಳೂರು: ಮೋದಿಯವರು ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್‌ಇನ್ ಇಂಡಿಯಾ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಪಾಪ ಇದನ್ನು ಬಿಜೆಪಿಯವರೇ ಹಾಳು ಮಾಡುತ್ತಿದ್ದಾರೆ. ಸ್ಥಳೀಯವಾಗಿ ಪಿಪಿಇ ಕಿಟ್‌ಗಳನ್ನು ತಯಾರು ಮಾಡುತ್ತಿದ್ದರೂ ಸಹ ಯಡಿಯೂರಪ್ಪನವರು ಏಕೆ ಚೈನಾದಿಂದ ತರಿಸಿಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ನ್ಯಾ.ಕುನ್ಹಾ ಮಧ್ಯಂತರ ವರದಿಯಲ್ಲಿದೆ ಎಂದರು.
ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ವರದಿ ಪ್ರಕಾರ 2020ರ ಮಾ.14ರಂದು ಸುಮಾರು 1.2 ಲಕ್ಷ ಪಿಪಿಇ ಕಿಟ್‌ಗಳನ್ನು 330.40 ರೂ.ಗೆ ಅಂದರೆ ಒಂದು ತಿಂಗಳ ಹಿಂದೆಯೇ ಖರೀದಿ ಮಾಡಿತ್ತು. ನಂತರ ಸುಮಾರು 1,900 ರೂಪಾಯಿ ದರ ವ್ಯತ್ಯಾಸದಲ್ಲಿ ಖರೀದಿ ಮಾಡಲಾಗಿದೆ. ಈ ಹಣ ಯಾರ ಜೇಬಿಗೆ ಹೋಯಿತು ಎಂದು ಪ್ರಶ್ನಿಸಿದರು.
21 ಕೋಟಿಗೆ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಲಾಗಿರುತ್ತದೆ. ಆಗ ಪೂರೈಕೆದಾರ ಕಂಪನಿಗಳು ಹಾಂಕಾಂಗ್‌ನಲ್ಲಿ ಲಭ್ಯವಿಲ್ಲದ ಕಾರಣ ಶಾಂಗೈನಿಂದ ತರಿಸಿಕೊಳ್ಳುವುದಾಗಿ ಹೇಳುತ್ತವೆ. ಕೇವಲ ಸಾಗಾಣಿಕ ವೆಚ್ಚವಾಗಿ ಸರ್ಕಾರ 12 ಕೋಟಿ ಖರ್ಚು ಮಾಡುತ್ತದೆ. ಇದು ವಿಪರ್ಯಾಸವಲ್ಲವೇ? ಎಂದರು.
ಪೂರೈಕೆ ದಾರ ಕಂಪನಿಗಳು ತಾವು ಒಪ್ಪಿಕೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆ ಸರ್ಕಾರದಿಂದ ಪಾವತಿಯಾಗಬೇಕು. ಆದರೆ ಯಡಿಯೂರಪ್ಪನವರ ಸರ್ಕಾರ ತಲೆಬುಡವಿಲ್ಲದ ಚೀನಾ ಕಂಪನಿಗೆ ಶೇ. ನೂರರಷ್ಟು ಮುಂಗಡ ಹಣ ಪಾವತಿ ಮಾಡಿದೆ ಎಂದು ಟೀಕಿಸಿದರು.
ಕಳಪೆ ಮಾತ್ರೆಗಳು, ಕಳಪೆ ವ್ಯಾಕ್ಸಿನ್, ಪಿಪಿಇ ಕಿಟ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ತಂದು ಜನರ ಜೀವ ತೆಗೆಯಲಾಗಿದೆ. ಅನೇಕ ಮಕ್ಕಳು ತಂದೆ ತಾಯಿಗಳನ್ನು ಕರೆದುಕೊಂಡಿದ್ದಾರೆ. ಕುಟುಂಬದ ಆಧಾರವೇ ಬಿದ್ದು ಹೋಗಿದೆ. ಮಾಧ್ಯಮ ವರ್ಗವೇ ಸಂಕಷ್ಟದಲ್ಲಿದೆ. ಅನೇಕ ಉದ್ದಿಮೆಗಳು ಬಿದ್ದು ಹೋಗಿದ್ದು, ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಎಂದರು.