

ನವದೆಹಲಿ: ಮೊದಲ ಬಾರಿಗೆ 2023-24 ರ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯವು 3 ಲಕ್ಷ ಕೋಟಿ ರೂಪಾಯಿಗಳ ಲಾಭವನ್ನು ಸಾಧಿಸಿದೆ. ಈ ಗಮನಾರ್ಹ ಸಾಧನೆಗಾಗಿ ಬ್ಯಾಂಕ್‌ಗಳನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ದಶಕದಲ್ಲಿ ಬ್ಯಾಂಕ್‌ಗಳ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದಿದ್ದಾರೆ.
ಈ ಪ್ರಗತಿಯು ಬಡವರು, ರೈತರು ಮತ್ತು ಎಂಎಸ್‌ಎಂಇಗಳಿಗೆ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ) ಸಾಲದ ಲಭ್ಯತೆಯನ್ನು ಸುಲಭಗೊಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತದ ಬ್ಯಾಂಕಿಂಗ್ ವಲಯದ ನಿವ್ವಳ ಲಾಭವು ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯು ಬ್ಯಾಂಕ್‌ಗಳ ಗಮನಾರ್ಹ ನಷ್ಟಕ್ಕೆ ಕಾರಣವಾಯಿತು. ಅಲ್ಲದೆ, ಬ್ಯಾಂಕ್‌ಗಳ ಎನ್‌ಪಿಎ (ನಾನ್ಪರ್ಫಾಮಿಂಗ್ ಅಸೆಟ್- ಅನುತ್ಪಾದಕ ಆಸ್ತಿ) ಹೆಚ್ಚಳಕ್ಕೆ ಕಾರಣವಾಯಿತು ಎಂದು ಪ್ರಧಾನಿ ಆಪಾದಿಸಿದರು.
“ನಾವು ಅಧಿಕಾರಕ್ಕೆ ಬಂದಾಗ, ಹಿಂದಿನ ಯುಪಿಎ ಸರ್ಕಾರದ ಫೋನ್ ಬ್ಯಾಂಕಿಂಗ್ ನೀತಿಯಿಂದಾಗಿ ನಮ್ಮ ಬ್ಯಾಂಕ್‌ಗಳು ನಷ್ಟ ಮತ್ತು ಹೆಚ್ಚಿನ ಎನ್‌ಪಿಎಗಳಿಂದ ತತ್ತರಿಸಿದ್ದವು. ಬಡವರಿಗೆ ಬ್ಯಾಂಕ್‌ಗಳ ಬಾಗಿಲು ಮುಚ್ಚಿತ್ತು. ಬ್ಯಾಂಕ್‌ಗಳ ಆರೋಗ್ಯದಲ್ಲಿನ ಈ ಸುಧಾರಣೆಯು ನಮ್ಮ ಬಡವರು, ರೈತರು ಮತ್ತು ಎಂಎಸ್‌ಎಂಇಗಳಿಗೆ ಸಾಲ ಲಭ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಮೊದಲ ಬಾರಿಗೆ, ಬ್ಯಾಂಕ್‌ಗಳ ಲಾಭವು 2023-24 ರ ಹಣಕಾಸು ವರ್ಷದಲ್ಲಿ 3 ಲಕ್ಷ ಕೋಟಿ ರೂಪಾಯಿ ಮೀರಿದೆ. ಇದು ವರ್ಷದಿಂದ ವರ್ಷಕ್ಕೆ 39% ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಲಾಭವು 1.4 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ 32% ಹೆಚ್ಚಳವಾಗಿದೆ. ಆದರೆ, ಖಾಸಗಿ ಬ್ಯಾಂಕ್‌ಗಳು ರೂ 1.7 ಲಕ್ಷ ಕೋಟಿ ಲಾಭವನ್ನು ವರದಿ ಮಾಡಿವೆ. ಇದು ಕಳೆದ ಹಣಕಾಸು ವರ್ಷಕ್ಕಿಂತ 42% ಹೆಚ್ಚಳವಾಗಿದೆ.