ಇರಾನ್ ಅಧ್ಯಕ್ಷರ ನಿಧನದ ಪರಿಣಾಮ: ಚಿನ್ನ, ತೈಲ ಹೆಚ್ಚಳ; ಷೇರು ಪೇಟೆಗೂ ತೊಂದರೆಯಾದೀತೆ?

raisi-1
Published on

ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಆ ದೇಶದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದರು. ಭಾನುವಾರ ಅಜರ್​ಬೈಜಾನ್ ಗಡಿಯ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ರೈಸಿ ಸಾವನ್ನಪ್ಪಿದರು. ಈ ಸುದ್ದಿಯ ನಂತರ, ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ತೈಲ ಉತ್ಪಾದಿಸುವ ಈ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿನ ರಾಜಕೀಯ ಅನಿಶ್ಚಿತತೆಯ ಮಧ್ಯೆ ಕಚ್ಚಾ ತೈಲ ಬೆಲೆಗಳು ಏರಿಕೆ ಕಂಡವು. ಬೆಳ್ಳಿ ಬೆಲೆ ಕೂಡ 11 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ.

ಇರಾನ್ ಅಧ್ಯಕ್ಷರ ನಿಧನದ ವರದಿಯ ನಂತರ, ಸೋಮವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ಜಾಗತಿಕ ಅನಿಶ್ಚಿತತೆಗಳ ನಡುವೆ ಚಿನ್ನದ ಬೆಲೆ ಸಾಮಾನ್ಯವಾಗಿ ಏರಿಕೆಯಾಗುತ್ತದೆ. ಏಕೆಂದರೆ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಸ್ವತ್ತಾಗಿ ಬಳಸುತ್ತಾರೆ.

ಸ್ಪಾಟ್ ಚಿನ್ನವು ಶೇಕಡಾ 1ರಷ್ಟು ಏರಿಕೆಯಾಗಿ ಒಂದು ಔನ್ಸ್‌ಗೆ 2,438.44 ಡಾಲರ್​ ಮುಟ್ಟಿತು. ಹಿಂದಿನ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ ಮಟ್ಟವಾದ 2,449.89 ಡಾಲರ್ ತಲುಪಿದ ನಂತರ, ಅಮೆರಿಕದ ಚಿನ್ನ ಫ್ಯೂಚರ್ಸ್​ 1.1% ಏರಿಕೆಯಾಗಿ 2,442.60 ಡಾಲರ್​ಗೆ ತಲುಪಿತು.

ರೈಸಿಯ ಸಾವಿನ ಹೊರತಾಗಿ, ನಿಧಾನಗತಿಯ ಅಮೆರಿಕ ಹಣದುಬ್ಬರ ಪ್ರವೃತ್ತಿ ಕೂಡ ಸೋಮವಾರದ ಚಿನ್ನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಅಮೆರಿಕದ ಕೇಂದ್ರೀಯ ಬ್ಯಾಂಕ್​ ಅಗಿರುವ ಫೆಡರಲ್ ರಿಸರ್ವ್ ತನ್ನ ಮೊದಲ ಬಡ್ಡಿ ದರ ಕಡಿತವನ್ನು ಶೀಘ್ರದಲ್ಲೇ ಮಾಡಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.

ಇರಾನ್ ಅಧ್ಯಕ್ಷರ ಹೆಲಿಕಾಪ್ಟರ್ ಅಪಘಾತದ ವರದಿಯ ಹಿನ್ನೆಲೆಯಲ್ಲಿ, ಪ್ರಮುಖ ಉತ್ಪಾದನಾ ರಾಷ್ಟ್ರಗಳಲ್ಲಿ ರಾಜಕೀಯ ಅನಿಶ್ಚಿತತೆಯ ಮಧ್ಯೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಸೋಮವಾರ ಏರಿಕೆ ಕಂಡವು. ರಾಜನ ಆರೋಗ್ಯದ ಕಾರಣವನ್ನು ಉಲ್ಲೇಖಿಸಿ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಅವರು ಕೂಡ ಜಪಾನ್ ಪ್ರವಾಸವನ್ನು ರದ್ದುಗೊಳಿಸಿದ್ದು ಕೂಡ ತೈಲ ಬೆಲೆಗಳ ಏರಿಕೆಗೆ ಒಂದಿಷ್ಟು ಕಾರಣವಾಯಿತು. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ತಂದೆ ರಾಜ ಸಲ್ಮಾನ್ ಅವರ ಆರೋಗ್ಯ ಸಮಸ್ಯೆಯಿಂದಾಗಿ, ಸೋಮವಾರ ಪ್ರಾರಂಭವಾಗಬೇಕಿದ್ದ ಜಪಾನ್ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.

ಬ್ರೆಂಟ್ ತೈಲ ದರವು 41 ಸೆಂಟ್ಸ್ ಅಥವಾ 0.5%, ಏರಿಕೆಯಾಗಿ ಪ್ರತಿ ಬ್ಯಾರೆಲ್​ಗೆ 84.39 ಡಾಲರ್​ಗೆ ಮುಟ್ಟಿತು.

ಮಧ್ಯಪ್ರಾಚ್ಯ ಪ್ರದೇಶದಲ್ಲಿನ ರಾಜಕೀಯ ಅನಿಶ್ಚಿತತೆಯು ಷೇರು ಮಾರುಕಟ್ಟೆಗಳಲ್ಲಿ ಚಂಚಲತೆಗೆ ಕಾರಣವಾಗಬಹುದಾಗಿದೆ. ಆದರೂ, ಷೇರು ಬೆಲೆಗಳ ಮೇಲೆ ರೈಸಿಯ ಸಾವಿನ ವ್ಯತಿರಿಕ್ತ ಪರಿಣಾಮವನ್ನು ಮಾರುಕಟ್ಟೆಗಳು ಸದ್ಯ ನಿರಾಕರಿಸಿದಂತಿದೆ. ಸೋಮವಾರ, ಅಮೆರಿಕ ಸ್ಟಾಕ್ ಸೂಚ್ಯಂಕಗಳು ತಮ್ಮ ದಾಖಲೆಯ ಗರಿಷ್ಠ ಮಟ್ಟವನ್ನು ಸಮೀಪಿಸುವುದರೊಂದಿಗೆ ಜಾಗತಿಕ ಷೇರು ಪೇಟೆಯು ಸೋಮವಾರ ಏರಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net