

ನವದೆಹಲಿ: ಇದೇ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳವರೆಗೆ ಲೈಟ್‌ಗಳನ್ನು ಆಫ್ ಮಾಡಿಕೊಂಡು ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆ ಏನು ಎಂಬ ಬಗ್ಗೆ ಖ್ಯಾತ ಹೃದ್ರೋಗ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ. ಕೆ. ಅಗರ್‌ವಾಲ್ ಅವರು ವಿವರಿಸಿದ್ದಾರೆ.
ಮೋದಿ ಅವರು ದೀಪ ಬೆಳಗಿಸುವಂತೆ ಹೇಳಿದ ಕೂಡಲೇ ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಮಂದಿ ಈ ಬಗ್ಗೆ ವಿವಿಧ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಕರೆಯ ಹಿಂದೆ ವೈಜ್ಞಾನಿಕ ಕಾರಣವಿರುವುದಾಗಿ ಅಗರ್‌ವಾಲ್ ಹೇಳಿದ್ದಾರೆ.
‘ ತತ್ವಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವ ‘ಯೋಗ ವಸಿಷ್ಠ’ದಲ್ಲಿ ತಿಳಿಸಿರುವ 'ಸಾಮೂಹಿಕ ಪ್ರಜ್ಞೆ' ತತ್ವದ ಆಧಾರದ ಅಡಿ ಪ್ರಧಾನಿಯವರು ಈ ಕರೆ ನೀಡಿದ್ದಾರೆ. ನಮ್ಮ ದೇಹಕ್ಕೆ ಆಗಿರುವ ತೊಂದರೆಗಳನ್ನು ಗುಣಪಡಿಸಿ ಚೈತನ್ಯ ನೀಡುವ ಶಕ್ತಿ ಸಾಮೂಹಿಕ ಪ್ರಜ್ಞೆಯಲ್ಲಿದೆ. ಇದು ಉನ್ನತ ವಿಜ್ಞಾನವಾದ ಕ್ವಾಂಟಂ ಫಿಸಿಕ್ಸ್‌ನಲ್ಲಿರುವ ರಿತಂಬರ ಪ್ರಜ್ಞಾ ಸಿದ್ಧಾಂತದ ತತ್ವದ ಆಧಾರಿತವಾಗಿದೆ. ಸಾಮೂಹಿಕ ಪ್ರಜ್ಞೆ ಸಿದ್ಧಾಂತವೂ ಈ ತತ್ವದ ಆಧಾರದಲ್ಲಿಯೇ ಇದೆ ಎಂದು ಅವರು ಹೇಳಿದ್ದಾರೆ.
ಸರಳವಾಗಿ ಹೇಳುವುದಾದರೆ, ಮನಸ್ಸಿನ ಶಕ್ತಿಗಿಂತ ಬೇರೊಂದು ಶಕ್ತಿ ಇಲ್ಲ. ಆದ್ದರಿಂದ ಇಡೀ ದೇಶದ ಜನತೆ ಸಾಮೂಹಿಕವಾಗಿ 'ನಮ್ಮ ದೇಹದೊಳಗೆ ಕೊರೊನಾ ವೈರಸ್ ಪ್ರವೇಶಿಸುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ಅದಕ್ಕೆ ಮಾನಸಿಕವಾಗಿ ಸಿದ್ಧ ಮಾಡಿಕೊಂಡರೆ, ನಮ್ಮ ದೇಹದ ಜೀವಕೋಶಗಳು ಈ ವೈರಸ್ ಅನ್ನು ಒಳಗೆ ಬಿಟ್ಟುಕೊಳ್ಳಲಾರವು ಎಂಬುದೇ ಈ ತತ್ವದ ಸಾರಾಂಶ. ನಾವು ಕೊನೆಯ ಪಕ್ಷ ಶೇ 5ರಷ್ಟನ್ನು ಸಕಾರಾತ್ಮಕವಾಗಿ ಯೋಚನೆ ಮಾಡಿದರೆ ಶೇ 95ರಷ್ಟನ್ನು ನಮ್ಮ ಮನಸ್ಸು ಸ್ವೀಕರಿಸುತ್ತದೆ. ಈ ಹಿನ್ನೆಲೆಯಲ್ಲಿ ದೀಪ ಬೆಳಗಿ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವುದು ಮೋದಿ ಅವರ ಮಾತಿನ ತಾತ್ಪರ್ಯ ಎಂದಿದ್ದಾರೆ. (ಏಜೆನ್ಸೀಸ್)