

ನವದೆಹಲಿ: ಇಲ್ಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 960 ಮಂದಿ ವಿದೇಶಿಗರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈಗಾಗಲೇ ಇವರೆಲ್ಲರನ್ನೂ ಕಪ್ಪು ಪಟ್ಟಿಗೆ ಕೂಡ ಸೇರಿಸಲಾಗಿದೆ. ಈ ವಿದೇಶಿಗರು ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ವೀಸಾ ರದ್ದತಿ ಕುರಿತಂತೆ ಗೃಹ ಸಚಿವಾಲಯವು ಸೂಚನೆ ನೀಡಿತ್ತು. ಇವರೆಲ್ಲರೂ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ವಿದೇಶಿ ಕಾಯ್ದೆ- 1946 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಅವರ ವೀಸಾ ರದ್ದು ಮಾಡುವಂತೆ ನಿರ್ದೇಶಿಸಲಾಗಿತ್ತು.
ಇದೇ ವೇಳೆ ದೆಹಲಿ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 9 ಸಾವಿರ ಜಮಾತ್ ಸದಸ್ಯರನ್ನು ಮತ್ತು ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೆಹಲಿಯಲ್ಲಿ 2,000ದಷ್ಟು ತಬ್ಲಿಗಿ ಜಮಾತ್ ಸದಸ್ಯರಿದ್ದು, 1,804 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಸೋಂಕು ಲಕ್ಷಣವಿರುವ 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.