ಮುಡಾ ದಾಖಲೆಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದೇಕೆ; ಕುಮಾರಸ್ವಾಮಿ ಪ್ರಶ್ನೆ

HD Kumaraswamy
Published on

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಬರೆದಿರುವ ಪತ್ರದಲ್ಲಿ ಹಾಕಿರುವ ವೈಟ್ನರ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಮೂಲ ದಾಖಲೆ ಮುಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು? ನಿಮಗೆ ಈ ಮೂಲ ದಾಖಲೆ ತಂದು ಕೊಟ್ಟ ಮಹಾಶಯರು ಯಾರು? ಎಂದು ಕೆಣಕಿದ್ದಾರೆ.

ಅಷ್ಟಕ್ಕೂ ಈ ಮೂಲ ದಾಖಲೆ ಮುಡಾದಲ್ಲಿದೆಯಾ? ಅಥವಾ ನಿಮ್ಮ ಮನೆಯಲ್ಲಿದೆಯಾ?

ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ? ಅಥವಾ ಇನ್ನಾರಾದರೂ ಇದ್ದಾರಾ? ಎಂದು ಟಾಂಗ್ ಕೊಟ್ಟಿದ್ದಾರೆ.

ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ? ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ.

ಜನರನ್ನು ದಿಕ್ಕು ತಪ್ಪಿಸಿದ ಹಾಗೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ಕೊಟ್ಟು ಅಲ್ಲಿಯೂ ಟಾರ್ಚ್ ಬಿಟ್ಟು ತೋರಿಸುತ್ತೀರಾ, ಹೇಗೆ? ಎಂದು ವ್ಯಂಗ್ಯವಾಡಿದ್ದಾರೆ.

ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ, ಶಿಶುಪಾಲನ ಹಾಗೆ. ಮಾಡಿದ ತಪ್ಪು ಮುಚ್ಚಿಕೊಳ್ಳಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net