ವಿಚ್ಛೇದನ ಪಡೆದು ಲಂಡನ್​ಗೆ ತೆರಳುವ ಬಯಕೆ? ಅಸ್ಸಾದ್​ರಿಂದ ದೂರ ಉಳಿಯಲು ಅಸ್ಮಾ ನಿರ್ಧಾರ! | Asma

ವಿಜಯವಾಣಿ - 2024-12-26T153033.225
Published on

Asma al-Assad: ಸಿರಿಯಾದಲ್ಲಿ ತನ್ನ ಅಧಿಕಾರ ಕಳೆದುಕೊಂಡ ಬಳಿಕ ರಷ್ಯಾಕ್ಕೆ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಬಶರ್​ ಅಲ್​ ಅಸ್ಸಾದ್, ಸದ್ಯ ತನ್ನ ಕುಟುಂಬದೊಂದಿಗೆ ರಷ್ಯಾದ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗಷ್ಟೇ ಬಶರ್ ಅಲ್-ಅಸ್ಸಾದ್​ರ ಧರ್ಮಪತ್ನಿ ಅಸ್ಮಾ ಅಲ್-ಅಸ್ಸಾದ್ ಪತಿಯೊಂದಿಗಿರುವ ಸಂಬಂಧವನ್ನು ಮುರಿದುಕೊಳ್ಳಲು ಬಯಸಿ, ರಷ್ಯಾ ಕೋರ್ಟ್​ ಮೆಟ್ಟಿಲೇರಿದ್ದರು ಎಂಬ ಗಾಳಿ ಸುದ್ದಿ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಆದ್ರೆ, ಈವರೆಗೂ ದಂಪತಿಗಳಿಂದ ವಿಚ್ಛೇದನದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲ. ಸದ್ಯ ಈ ವಿಚಾರಗಳ ಬೆನ್ನಲ್ಲೇ ಅಸ್ಸಾದ್​ ಪತ್ನಿ ಅಸ್ಮಾ ಲ್ಯುಕೇಮಿಯಾ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಪತಿಯಿಂದ ವಿಚ್ಚೇದನ

ಒಂದೆಡೆ ಪತಿ ಬಶರ್​ ಅಲ್​ ಅಸ್ಸಾದ್​ರಿಂದ ಡಿವೋರ್ಸ್​ ಬಯಸಿರುವ ಅಸ್ಮಾ, ತನಗೆ ವಿಚ್ಛೇದನದ ಅಗತ್ಯವಿದೆ ಎಂದು ರಷ್ಯಾ ಕೋರ್ಟಿನಲ್ಲಿ ಅಸ್ಮಾ ಅರ್ಜಿ ಸಲ್ಲಿಸಿರುವುದಾಗಿ ಟರ್ಕಿಶ್ ಮತ್ತು ಅರೇಬಿಕ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪ್ರಸ್ತುತ ರಷ್ಯಾದ ಮಾಸ್ಕೋದಲ್ಲಿರುವ ಅಸ್ಸಾದ್​ ಪತ್ನಿ, ಸಿರಿಯಾದಲ್ಲಿ ಬಂಡುಕೋರರ ದಾಳಿಯಿಂದ ಬೇಸತ್ತಿದ್ದು, ಮಾಸ್ಕೋದಲ್ಲಿನ ಜೀವನ ಅತೃಪ್ತಿ ಎಂದು ಭಾವಿಸಿ, ಪತಿಯಿಂದ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ವರದಿಗಳನ್ನು ಕ್ರೆಮ್ಲಿನ್ ವಕ್ತಾರ ತಳ್ಳಿಹಾಕಿದ್ದಾರೆ.

ಡಿಮಿಟ್ರಿ ಪೆಸ್ಕೋವ್ ಸ್ಪಷ್ಟನೆ

ಸಿರಿಯಾದ ಮಾಜಿ ಅಧ್ಯಕ್ಷ ಬಶರ್​ ಅಲ್​ ಅಸ್ಸಾದ್​ರಿಂದ ಅಸ್ಮಾ ಡಿವೋರ್ಸ್​ ವಿಚಾರ ಕೇವಲ ವದಂತಿಗಳು. ಅಸ್ಸಾದ್ ಮಾಸ್ಕೋಗೆ ಬಂದಿಳಿದಿದ್ದಾರೆ. ಸಿರಿಯಾದಲ್ಲಿನ ಅವರ ಆಸ್ತಿ-ಪಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ. ಇಂತಹ ವರದಿಗಳು ಸುಳ್ಳು ಹೇಳುತ್ತಿವೆ ಎಂದು ಡಿಮಿಟ್ರಿ ಪೆಸ್ಕೋವ್ ಸ್ಪಷ್ಟನೆ ನೀಡಿದ್ದಾರೆ. ಒಂದೆಡೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಸ್ಮಾ, ಪತಿಯಿಂದ ವಿಚ್ಚೇದನ ಪಡೆದು ಲಂಡನ್​ಗೆ ಹಾರಲು ಇಚ್ಛಿಸಿದ್ದಾರೆ ಎಂಬ ವರದಿಗಳು ಬಲವಾಗಿವೆ ಎಂದೇ ಹೇಳಲಾಗುತ್ತಿದೆ.

ವಿಶೇಷ ಅನುಮತಿ

ಲ್ಯುಕೇಮಿಯಾ ಖಾಯಿಲೆಯಿಂದ ನರಳುತ್ತಿರುವ ಅಸ್ಮಾ, ಪ್ರಸ್ತುತ ಅಗತ್ಯ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಈ ಮಧ್ಯೆ ತಾನು ಮಕ್ಕಳೊಂದಿಗೆ ಮಾತ್ರ ಲಂಡನ್​ಗೆ ತೆರಳಲು ನಿರ್ಧರಿಸಿರುವ ಅಸ್ಮಾ, ಈ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದ ನ್ಯಾಯಾಲಯಕ್ಕೆ ವಿಶೇಷ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಆಕೆ ಸಲ್ಲಿಸಿರುವ ಅರ್ಜಿಯನ್ನು ರಷ್ಯಾದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net