

ಇದಿರಲಿ, ಎಷ್ಟೋ ವೇಳೆ ನಮ್ಮಿಂದಾದ ತಪ್ಪಿಗೆ ನಾವು ಬೇರೆಯವರನ್ನು ಹೊಣೆಮಾಡುವ ತವಕವೂ ಒಂದಿಷ್ಟು ಹುಟ್ಟಿಕೊಳ್ಳುವುದುಂಟು. ನಾನೇನು ಮಾಡಲಿ, ಅವರೆಲ್ಲಾ ಹಾಗೆ ಮಾಡಿಬಿಟ್ಟಿದ್ದರೆಂದೇ ನಾನು ಹೀಗೆ ಮಾಡಬೇಕಾಯಿತು! ಎಂದು ಬೇರೆಯವರೆದುರಿಗೆ ಹೇಳುವುದೋ, ನಮ್ಮ ಮನಸ್ಸಿನೊಳಗೇ ಸಮರ್ಥಿಸಿಕೊಳ್ಳುವುದೋ, ನಡೆದಿರುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಇದು ವಾಸ್ತವವಾಗಿರುವುದೂ ಶಕ್ಯವಿದೆಯೆನ್ನಿ.
ಹಾಗೆಯೇ ನಮಗೆ ಭಗವತ್ಸಾಕ್ಷಾತ್ಕಾರವು ಇನ್ನೂ ಆಗಿಲ್ಲದಿರುವು ದಕ್ಕೂ ಮತ್ತಾರನ್ನಾದರೂ ಹೊಣೆ ಮಾಡಲಾಗುವುದಾದರೆ ಅದೆಷ್ಟು ಅನುಕೂಲವಲ್ಲವೇ? ಮಾಡಲಾಗುವುದಾದರೆ ಎನ್ನುವುದೇನು? ಮಾಡಿಯೇ ಆಗಿದೆ ಆತ್ಮಸಾಕ್ಷಾತ್ಕಾರವಾಗದಿರಲು ಯಾರು ಕಾರಣ ವಂತೆ, ಹಾಗಾದರೆ? ಯಾರಿಗೂ ಸಾಕ್ಷಾತ್ಕಾರವಾಗ ದಂತಾಗಲು ಕಾರಣ-ಭೂತನಾದವನು ಒಬ್ಬನಿದ್ದಾನೆ. ಆ ಏಕೈಕ-ಪುರುಷನೇ ಕಾರಣ. ಯಾರವನು? ಸಾಕ್ಷಾದ್ ಬ್ರಹ್ಮನೇ! ತಾನೇ ತಾನಾಗಿ ಹುಟ್ಟಿಕೊಂಡ ಸ್ವಯಂಭುವೇ! ಹಾಗೆಂದು ಹೇಳಿರುವುದು ಯಾರು? ಯಾರೋ ಅವರಿವರಲ್ಲ. ಅದನ್ನು ಹೇಳಿರುವುದು ಸಾಕ್ಷಾದ್ ಉಪನಿಷತ್ತೇ! ಉಪನಿಷತ್ತಿನ ಮಾತನ್ನು ಎತ್ತಿಹಾಕುವುದುಂಟೇ?
ಯಾವ ಉಪನಿಷತ್ತು? ಎಲ್ಲಿ ಹೇಳಿದೆ? ಇದು ಕಠೋಪನಿಷತ್ತಿ ನಲ್ಲಿದೆ. ಅಲ್ಲಿಯ ನಾಲ್ಕನೆಯ ವಲ್ಲಿಯ ಮೊದಲ ಮಂತ್ರವೇ ಅದು. ಸ್ವಯಂಭುವೆನಿಸುವ ಬ್ರಹ್ಮನು ಏನು ಮಾಡಿದ? ಚುಚ್ಚಿದ, ಅಥವಾ ಕೊರೆದನೆಂದರೂ ಆಯಿತು. ಏನನ್ನು? ನಮ್ಮ ಇಂದ್ರಿಯಗಳನ್ನು. ನಾವು ತಲೆಬುರುಡೆ ಎಂಬ ಪದವನ್ನು ಬಳಸುತ್ತೇವಲ್ಲವೇ? ಆ ದುಂಡನೆಯ ಆಕಾರದ ಬುರುಡೆಯನ್ನೇ ಒಂದು ಮಡಕೆಯೆಂದು ಕೊಳ್ಳಿ. ತಲೆಕೆಳಕಾದ ಮಡಕೆಯ ಹಾಗಿರುವುದಲ್ಲವೇ ಅದು? ಈ ಮಡಕೆಯಲ್ಲೊಂದು ವಿಶೇಷವಿದೆ. ಅದರಲ್ಲಿ 7 ರಂಧ್ರಗಳಿವೆ. ಕಣ್ಣುಗಳೆಂಬ ಎರಡು ರಂಧ್ರಗಳು, ಕಿವಿಗಳೆಂಬ ಎರಡು ರಂಧ್ರಗಳು, ಮೂಗಿನ ಹೊಳ್ಳೆಗಳೆರಡು, ಹಾಗೂ ಬಾಯಿಯೊಂದು. ಇವಿಷ್ಟೂ ಇಂದ್ರಿಯಗಳೇ. ಹೀಗಾಗಿ ಇಂದ್ರಿಯಗಳೆಂಬ ರಂಧ್ರಗಳಿವು.
ಇವೆಲ್ಲವೂ ಹೇಗೆ ಕಾಣುತ್ತವೆ? ಯಾರೋ ಒಳಗಿನಿಂದ ಹೊರ ಮುಖವಾಗಿ ಚುಚ್ಚಿ ರಂಧ್ರಮಾಡಿರುವಂತಿವೆ ಅಲ್ಲವೇ? ಏಕೆ? ಕಣ್ಣು ತನ್ನಾಚೆಯಿರುವುದನ್ನು, ಹೊರಜಗತ್ತನ್ನು, ಎಲ್ಲವನ್ನೂ ಕಾಣು ತ್ತದೆ. ಆದರಿದೋ, ತನ್ನನ್ನೇ ತಾನು ನೋಡಿಕೊಳ್ಳಲಾರದು; ತನ್ನ ಹಿಂದಿರುವುದನ್ನಂತೂ ನೋಡಿ ಕೊಳ್ಳಲೇ ಆರದು! ಹೊರಗೆ ಅತಿ ದೂರದಲ್ಲಿರುವ ವಸ್ತುವನ್ನಾದರೂ ಕಂಡೀತು, ತನ್ನೊಳಗೇ ಇರುವ ಸಣ್ಣವಸ್ತುವನ್ನೋ ಅತಿ ಸಣ್ಣವಲ್ಲದ್ದನ್ನೋ ಕೂಡ ಅದು ಕಾಣ ಲಾರದು!ಕಣ್ಣಿಗೆ ಹೇಳಿದುದೇ ಕಿವಿಗೂ ಅನ್ವಯಿಸುತ್ತದೆ.
ಕಿವಿಯು ಬಾಹ್ಯಶಬ್ದಗಳನ್ನು ಗ್ರಹಿಸುವುದೇ ವಿನಾ ಹೃದಯದ ಬಡಿತವೇ ಮುಂತಾದ ಅಂತಶ್ಶಬ್ದಗಳನ್ನಲ್ಲ. ಮೂಗು- ಬಾಯಿಗಳ ಕಥೆಯೂ ಅಷ್ಟೇ. ಇವೆಲ್ಲವೂ ಬಾಹ್ಯಸ್ಪರ್ಶಗಳಿಗೆ ಪ್ರತಿಕ್ರಿಯಿಸುವಂತಹವು. ಕಣ್ಣು-ಕಿವಿಗಳು ದೂರಗ್ರಾಹಿಗಳೂ ಆಗಬಲ್ಲವು. ಮೂಗು ಕಿಂಚಿದ್ದೂರದ ಗಂಧವನ್ನು ಗ್ರಹಿಸೀತು. ಬಹುತೇಕ, ಗಂಧವು ದೂರದ್ದಾದರೂ ಮೂಗಿಗೆ ತಿಳಿದುಬರುವ ಕಾರಣವೇನೆಂದರೆ, ವಾಸನೆಯುಳ್ಳ ಅಲ್ಲಿಯ ಪದಾರ್ಥಕ್ಕೆ ಸೋಂಕಿಬರುವ ಗಾಳಿಯು ಆ ಗಂಧವನ್ನು ಮೂಗಿನವರೆಗೂ ತಂದಿರುವುದು. ನಾಲಿಗೆಗೆ ರಸವು ಗೋಚರಿಸಲಂತೂ ಸಾಕ್ಷಾತ್ ಸ್ಪರ್ಶವೇ ಬೇಕಾಗುವುದು.
ಅಲ್ಲದೇ ಇಂದ್ರಿಯಗಳಲ್ಲೆಲ್ಲ ಪರಸ್ಪರ ಸಹಕಾರವುಂಟೆಂಬ ಅಂಶವೂ ಗಮನಿಸಬೇಕಾದದ್ದೇ. ಉದಾಹರಣೆಗೆ ಸ್ವಾದುವಾದ ಭಕ್ಷ್ಯದ ದರ್ಶನವು ದೂರದಿಂದಾದರೂ, ನಾಲಿಗೆಯಲ್ಲಿ ನೀರೊಡೆದೀತು. ಅದರೊಂದಿಗೆ ಸುಗಂಧವೂ ಸೇರಿದರಂತೂ ನಾಲಿಗೆಯಲ್ಲಿ ರಸವೊಸರುವುದು ಮತ್ತೂ ಸುಲಭವೇ. ಹೀಗಾಗಿ ಇಂದ್ರಿಯಗಳು ಹೊರಹೋಗಿಯೇ ವಸ್ತುಗಳನ್ನು ಗ್ರಹಿಸುವುದು. ಬ್ರಹ್ಮನು ಸೃಷ್ಟಿ ಮಾಡಿದ್ದೇ ಹೀಗೆ ಎನ್ನುವುದನ್ನೇ, ಬ್ರಹ್ಮನು ಇಂದ್ರಿಯಗಳನ್ನು ಹೊರಮುಖವಾಗಿಯೇ ಕೊರೆದನು - ಪರಾಂಚಿ ಖಾನಿ ವ್ಯತೃಣತ್ - ಎನ್ನುವ ಉಪನಿಷದುಕ್ತಿಯು ಹೇಳುತ್ತದೆ. ಮತ್ತು ಆ ಕಾರಣದಿಂದಾಗಿಯೇ ಅಂತರಾತ್ಮನನ್ನು ಜೀವನು ನೋಡಲಾರನೆಂದೂ ಅಲ್ಲಿಯೇ ಹೇಳಿದೆ.
ಹಾಗಾದರೆ ಒಳಮುಖವಾಗಿ ಸಾಗಲು ಸಾಧ್ಯವೇ ಇಲ್ಲವೆಂದೇ? ಇಲ್ಲವೆಂದೇನಲ್ಲ. ಅದಕ್ಕೊಂದು ಧೈರ್ಯವು ಬೇಕಾಗುತ್ತದೆ. ಆವೃತ್ತ-ಚಕ್ಷುವಾದವನು ಮಾತ್ರವೇ ಪ್ರತ್ಯಗಾತ್ಮನನ್ನು ಕಾಣಬಲ್ಲನು - ಎಂದೂ ಹೇಳುತ್ತದೆ, ಅದೇ ಉಪನಿಷತ್ತು.ಏನು ಹಾಗೆಂದರೆ? ಧ್ಯಾನವನ್ನು ಮಾಡುವವರ ಇಂದ್ರಿಯಗಳು ಒಳಮುಖವಾಗುತ್ತವೆ. ಹಾಗಾದಾಗ ಒಳತತ್ತ್ವವು ಗೋಚರವಾಗುತ್ತದೆ. ಮಾನವಶರೀರದಲ್ಲಿ ವಾಸ್ತವವಾಗಿ ಅದಕ್ಕೂ ಆಸ್ಪದವಿದೆ ಅದು ಸುಲಭವಲ್ಲವಾದರೂ. ಹೀಗಾಗಿಯೇ ಆತ್ಮದರ್ಶನ ಅಥವಾ ಪರಮಾತ್ಮ-ಸಾಕ್ಷಾತ್ಕಾರ ವೆಂಬುದು ಇಂದ್ರಿಯಗಳು ಬಹಿಮುಖವಾಗಿರುವಾಗ ಸಾಧ್ಯವಾಗಲಾರದು.
ಒಳಮುಖವಾದ ಯೋಗಸಾಧನೆಯಿಂದ ಸಾಧ್ಯವಾಗ ಬಲ್ಲುದು. ಆತ್ಮತತ್ವವನ್ನು ಅನ್ವೇಷಿಸಿ ಅರಿತುಕೊಂಡು ಅದನ್ನೆಲ್ಲರೂ ಸಾಧಿಸಬೇಕೆಂಬ ದಿವ್ಯ-ಸಂದೇಶವನ್ನಿತ್ತ ಧೀರರನಾಡಾಗಿದೆ, ಈ ಭರತಭೂಮಿ! ಎಂಬ ಶ್ರೀರಂಗಮಹಾಗುರುಗಳ ಸ್ಪೂರ್ತಿ-ಎಚ್ಚರಗಳ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.