

ನವದೆಹಲಿ: ದೇಶದಲ್ಲಿ ಕರೊನಾ ಪೀಡಿತರ ಸಂಖ್ಯೆ ಈಗಾಗಲೇ 10 ಲಕ್ಷ ದಾಟಿದೆ. ದಿನವೂ ಏರುತ್ತಲೇ ಇದೆ. ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್ ರೋಗಿಗಳನ್ನು ಹೊಂದಿದ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿದ್ದೇವೆ. ಇಷ್ಟಾದರೂ ನಾವು ಕರೊನಾಗೆ ಹೆದರಬೇಕಿಲ್ಲ. ಏಕೆ ಗೊತ್ತೆ...?
ಸದ್ಯ ಅಮೆರಿಕ, ಬ್ರೆಜಿಲ್ ಹೊರತುಪಡಿಸಿದರೆ ನಮ್ಮಲ್ಲಿಯೇ ಅತಿ ಹೆಚ್ಚು ರೋಗಿಗಳಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಭಾರತೀಯರು ಆತಂಕ ಪಡಬೇಕಿಲ್ಲ ಎಂದೇ ತಜ್ಞರು ಹೇಳುತ್ತಿದ್ದಾರೆ.
ಜುಲೈ 18ರ ಅವಧಿಗೆ ಲೆಕ್ಕ ಹಾಕಿದರೆ ನಮ್ಮಲ್ಲಿ ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.62.94. ಒಟ್ಟಾರೆ ರೋಗಿಗಳ ಪೈಕಿ ಸಕ್ರಿಯವಾಗಿರುವ ಕೇಸ್ಗಳ ಸಂಖ್ಯೆ ಶೇ.34.53. ಇನ್ನುಳಿದ ಶೇ.62.94 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ಕೋವಿಡ್ನಿಂದಾಗಿ ಮೃತಪಡುತ್ತಿರುವವರ ಸಂಖ್ಯೆ ಕೇವಲ ಶೇ.2.53. ಜಾಗತಿಕವಾಗಿ ಈ ಪ್ರಮಾಣ ಶೇ.4.30 ಆಗಿದೆ. ಇನ್ನೂ ಆಶಾದಾಯಕ ಸಂಗತಿ ಎಂದರೆ, ಮೂರು ತಿಂಗಳಿನ ಹಿಂದಿನ ಅವಧಿಗೆ ಹೋಲಿಸಿದಲ್ಲಿ ಮೃತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಮೇದಾಂತ ಯಕೃತ್ತು ಸಂಸ್ಥೆಯ ಡಾ. ಅರವಿಂದರ್ ಸೋಯಿನ್ ಹೇಳುತ್ತಾರೆ.
ಲಾಕ್ಡೌನ್ ಕಾರಣದಿಂದಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ವ್ಯವಸ್ಥೆ ಸನ್ನದ್ಧಗೊಳ್ಳಲು ಸಾಧ್ಯವಾಯಿತು. ಕೋವಿಡ್ನಿಂದ ಉಂಟಾಗುತ್ತಿರುವ ಸಂಕೀರ್ಣತೆಯನ್ನು ನಾವೇ ಪರಿಹರಿಸಿಕೊಳ್ಳಲು ಸಾಧ್ಯವಾಗಿದೆ. ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಚಿಂತೆಪಡಬೇಕಿಲ್ಲ. ಮರಣ ಪ್ರಮಾಣ ಕಡಿಮೆ ಮಾಡುವುದು, ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಬೀಳದಿರುವಂತೆ ನೋಡಿಕೊಳ್ಳಬೇಕಿದೆ ಎಂದು ವೈದ್ಯರು ಹೇಳುತ್ತಾರೆ.
ದೆಹಲಿ ಹಾಗೂ ಮುಂಬೈಯಲ್ಲಿನ ಪ್ರಕರಣ ಸಂಖ್ಯೆ ಅಂದಾಜಿಸಿದ ಲೆಕ್ಕದಲ್ಲಿಯೇ ಇದೆ. ತಮಿಳುನಾಡಿನಲ್ಲಿಯೂ ಉತ್ತುಂಗ ತಲುಪುತ್ತಿದೆ. ಇನ್ನು, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳದಲ್ಲಿಯೂ ವೇಗವಾಗಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ಕೇರಳ ರಾಜಧಾನಿ ತಿರುವನಂತಪುರದ ಎರಡು ಪ್ರದೇಶಗಳಲ್ಲಿ ಕರೊನಾ ಸಮುದಾಯಕ್ಕೆ ಪಸರಿಸಿರುವುದು ಗೊತ್ತಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕರೊನಾದ ಹೊಸ ಹಾಟ್ಸ್ಪಾಟ್ಗಲು ಕಂಡುಬರುತ್ತಿವೆ. ಇವುಗಳನ್ನು ನಿಯಂತ್ರಿಸಿದಲ್ಲಿ ಸೆಪ್ಟಂಬರ್ ವೇಳೆಗೆ ಪರಿಸ್ಥಿತಿ ಸಹಜವಾಗಲಿದೆ ಎಮದು ಪ್ರೊಟಿವಿಟಿ ಸಂಸ್ಥೆಯ ನಿರ್ದೇಶಕ ಧ್ರುವದತ್ತ ಘೋಷ್ ದಸ್ತಿದಾರ್ ಹೇಳುತ್ತಾರೆ.