

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸಿ ಮೂರು ಅಥವಾ ಐದು ಪಾಲಿಕೆಯನ್ನಾಗಿ ರಚಿಸುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ವಿಚಾರಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಸರ್ಕಾರದ ನಿಲುವಿಗೆ ಕಾಂಗ್ರೆಸ್ ಶಾಸಕರು ಸಹಮತ ವ್ಯಕ್ತಪಡಿಸಿದ್ದರೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ನವರು ಆಕ್ಷೇಪದ ದನಿ ಎತ್ತಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಬಿಎಂಪಿ ಚುನಾವಣೆ ನಡೆದು 4 ವರ್ಷಗಳಾಗುತ್ತಿದ್ದು, ಹೊಸದಾಗಿ ಚುನಾಯಿತ ಸರ್ಕಾರ ಸ್ಥಾಪಿಸಬೇಕೆಂಬ ಒತ್ತಾಯದ ನಡುವೆಯೇ ವಿಭಜನೆ ಪ್ರಸ್ತಾಪ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟುಹಾಕಿದೆ. ಸಾರ್ವಜನಿಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದರೆ ಆಡಳಿತ ದೃಷ್ಟಿಯಿಂದ ಸಣ್ಣ ಪಾಲಿಕೆಗಳು ಅಸ್ತಿತ್ವಕ್ಕೆ ಬರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಮತ್ತೆ ಕೆಲ ಸಂಘಟನೆಗಳು ಮುಂದಿಟ್ಟಿವೆ.
ಸರ್ಕಾರ ಮತ್ತೊಮ್ಮೆ ಬಿಬಿಎಂಪಿ ವಿಭಜನೆ ಮಂತ್ರ ಜಪಿಸಿರುವುದರಿಂದ ಚುನಾಯಿತ ಜನಪ್ರತಿನಿಧಿಗಳ ನಿಲುವು ಪ್ರಾಮುಖ್ಯತೆ ಪಡೆಯಲಿದೆ. ಆದರೆ ಶಾಸಕರು ತಮ್ಮ ಪಕ್ಷಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗುವ ನಿಲುವಿಗೆ ಅಂಟಿಕೊಂಡಿದ್ದಾರೆ. ಹಾಗಾಗಿ ಆಡಳಿತಾರೂಢ ಕಾಂಗ್ರೆಸ್ ವಿಭಜನೆ ಮಾಡಲೇಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದೆ. ಇದಕ್ಕೆ ಅಷ್ಟೇ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷದ ಶಾಸಕರು ಬೆಂಗಳೂರಿನ ಇಮೇಜ್ಗೆ ಧಕ್ಕೆ ತರುವ ಹಾಗೂ ಇಲ್ಲಿನ ಕನ್ನಡಿಗರನ್ನು ಒಡೆದು ಆಳುವ ನೀತಿಗೆ ಸರ್ಕಾರ ಮಣೆ ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಿಬಿಎಂಪಿ ಚುನಾವಣೆ ಮುಂದೂಡುವ ಉದ್ದೇಶದಿಂದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ವಿಭಜನೆ ಮಂತ್ರ ಜಪಿಸುತ್ತಿದೆ. ಆದರೆ, ಎಲ್ಲ ದೃಷ್ಟಿಯಿಂದಲೂ ಅಖಂಡ ಬೆಂಗಳೂರು ಆಗಿಯೇ ಮುಂದುವರಿಯುವುದು ಸೂಕ್ತ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ, ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಒಂದು ಗುದ್ದಲಿಪೂಜೆ, ಶಂಕುಸ್ಥಾಪನೆ ಅಥವಾ ಕಾರ್ಯಕ್ರಮವೊಂದರ ಉದ್ಘಾಟನೆ ಮಾಡಿಲ್ಲ. ಇದರಿಂದಾಗಿ ನಗರವು ಅನಾಥವಾಗಿದೆ. ಶಾಸಕರ ಕ್ಷೇತ್ರಗಳಿಗೆ ಬೋರ್ವೆಲ್ ಕೊರೆಯಿಸಲು ಅನುದಾನ ಬಿಡುಗಡೆ ಮಾಡಿಲ್ಲ. ಸಚಿವರು ತಮ್ಮ ಸ್ವಕ್ಷೇತ್ರ, ವೈಯಕ್ತಿಕ ಕೆಲಸಕ್ಕೆ ಸೀಮಿತವಾಗಿದ್ದಾರೆ. ಇದರಿಂದಾಗಿಯೇ ಕಾಂಗ್ರೆಸ್ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ನಗರದ ನಾಲ್ಕೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಈಗ ಬಿಬಿಎಂಪಿ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲುವುದು ನಿಶ್ಚಿತ. ಈ ಉದ್ದೇಶದಿಂದಾಗಿಯೇ ಕಾಂಗ್ರೆಸ್ ಸರ್ಕಾರ ಪಾಲಿಕೆಗೆ ಚುನಾವಣೆ ನಡೆಸುವ ಬದಲು ವಿಭಜನೆ ಜಪ ಮಾಡುತ್ತಿದೆ. ಇದನ್ನು ಜನರು ಕೂಡ ಅರ್ಥೈಸಿಕೊಂಡಿದ್ದಾರೆ. ಒಂದು ವೇಳೆ ಬಿಬಿಎಂಪಿ ಚುನಾವಣೆ ನಡೆದರೂ ಕಾಂಗ್ರೆಸ್ ಸೋಲಿಸಲು ಜನತೆ ನಿರ್ಧರಿಸಿದ್ದಾರೆ. ಸರ್ಕಾರ ವಿಭಜನೆ ತಂತ್ರಗಾರಿಕೆಯನ್ನು ಕೈಬಿಟ್ಟು ಚುನಾವಣೆ ನಡೆಸಲು ಮುಂದಾಗಲಿ.
- ಬೈರತಿ ಬಸವರಾಜ್, ಕೆ.ಆರ್.ಪುರ ಕ್ಷೇತ್ರದ ಶಾಸಕ
ಬಿಬಿಎಂಪಿಯನ್ನು 3 ಅಥವಾ 5 ಪಾಲಿಕೆಯನ್ನಾಗಿಸುವ ವಿಚಾರದಲ್ಲಿ ಮೊದಲು ವಿಸõತ ಚರ್ಚೆಯಾಗಬೇಕು. ಅದರಲ್ಲೂ ವೈಜ್ಞಾನಿಕವಾಗಿ ಚರ್ಚೆ ಕೈಗೊಂಡು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಈಗಿನ ಸ್ಥಿತಿಯಲ್ಲಿ ಪಾಲಿಕೆಯ ಆಡಳಿತ ವಿಕೇಂದ್ರೀಕರಣ ಆಗಬೇಕು ಎಂಬುದು ನಿಜ. ಆದರೆ, ಇದೇ ನೆಲೆಗಟ್ಟಿನಲ್ಲಿ ಹಿಂದೊಮ್ಮೆ ದೆಹಲಿ ಪಾಲಿಕೆಯನ್ನು ಮೂರು ವಿಭಾಗ ಮಾಡಿ ಕೆಲ ವರ್ಷಗಳ ಬಳಿಕ ಸಮಸ್ಯೆ ಉದ್ಭವಿಸಿತೆಂದು ಒಂದೇ ಪಾಲಿಕೆಯನ್ನಾಗಿ ಮಾಡಲಾಗಿದೆ. ಇಂತಹ ಸ್ಥಿತಿ ನಮ್ಮ ಬಿಬಿಎಂಪಿಗೆ ಬಾರದಿರಲಿ. ಹಾಗಾಗಿ ಸಾರ್ವಜನಿಕರನ್ನು ಒಳಗೊಂಡಂತೆ ಎಲ್ಲರೂ ತಮ್ಮ ನಿಲುವು ಕೈಗೊಳ್ಳಲು ಮುಕ್ತ ವೇದಿಕೆ ಕಲ್ಪಿಸಬೇಕಿದೆ. ಇಲ್ಲದಿದ್ದಲ್ಲಿ ವಿಭಜನೆ ವಿಚಾರದಲ್ಲಿ 2 ಹೆಜ್ಜೆ ಮುಂದೆ ಇಟ್ಟು 3 ಹೆಜ್ಜೆ ಹಿಂದೆ ಬರುವಂತಹ ಸ್ಥಿತಿ ಆಗಬಾರದು. ಮುಖ್ಯವಾಗಿ ನಗರದಲ್ಲಿ ಬೆಂಗಳೂರಿನವರು ಮೈನಾರಿಟಿಗೆ ಇಳಿದುಬಿಡುವ ಆತಂಕ ವ್ಯಕ್ತವಾಗಿದೆ. ಈ ವಿಚಾರವನ್ನು ಲಘುವಾಗಿ ಪರಿಗಣಿಸದೆ ಚರ್ಚೆಯನ್ನು ಉಪಯುಕ್ತ ರೀತಿ ಕೈಗೊಳ್ಳಬೇಕಿದೆ. ಆಡಳಿತ ಪಕ್ಷವು ಎಲೆಕ್ಷನ್ ಗೆಲ್ಲಲು ವಿಭಜನೆ ಅಸ್ತ್ರವನ್ನಾಗಿ ಮಾಡಿಕೊಂಡಿರುವಂತಿದೆ.
| ಎಸ್.ಸುರೇಶ್ಕುಮಾರ್ ರಾಜಾಜಿನಗರ ಕ್ಷೇತ್ರದ ಶಾಸಕ
ಬೃಹತ್ ಆಗಿ ಬೆಳವಣಿಗೆ ಹೊಂದಿರುವ ಬೆಂಗಳೂರು ತನ್ನ ಖ್ಯಾತಿಗೆ ತಕ್ಕಂತೆ ಮೂಲಸೌಕರ್ಯ ಹೊಂದಿಲ್ಲ ಎಂಬುದನ್ನು ನಾಗರಿಕರು ಪದೇ ಪದೆ ಹೇಳುತ್ತಿದ್ದಾರೆ. ಬಿಬಿಎಂಪಿ ಕೂಡ ತನ್ನ ಈಗಿನ ಆಡಳಿತ ಶೈಲಿಯಲ್ಲಿ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಹೆಚ್ಚುತ್ತಿದೆ. ಜನರ ಆಶೋತ್ತರ ಈಡೇರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಮುಂದಿನ ಸವಾಲುಗಳನ್ನು ಎದುರಿಸಲು ಸ್ಪಷ್ಟ ಗುರಿ ಹೊಂದಿಲ್ಲ. ಪಾಲಿಕೆ ಒಂದು ರಸ್ತೆಗೆ ಡಾಂಬರು ಹಾಕಿದರೆ ಮರುದಿನವೇ ಇತರ ಸಂಸ್ಥೆಗಳವರು ಕೇಬಲ್ ಅಥವಾ ಕೊಳವೆ ಅಳವಡಿಸಲು ರೋಡ್ ಕಟ್ಟಿಂಗ್ ಮಾಡುತ್ತಾರೆ. ಇದರಿಂದ ಸರ್ಕಾರಿ ಸಂಸ್ಥೆಗಳ ಮಧ್ಯೆ ಸಮನ್ವಯ ಕೊರತೆ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಸ್ಪಷ್ಟ ಹಾಗೂ ಶಾಶ್ವತ ಪರಿಹಾರ ಒದಗಿಸಲು ಈಗಿರುವ ಬಿಬಿಎಂಪಿಯನ್ನು 3 ಅಥವಾ 5 ಪಾಲಿಕೆಯನ್ನಾಗಿ ವಿಂಗಡಿಸಿ ಉತ್ತಮ ಆಡಳಿತ ನೀಡುವ ಯತ್ನ ನಡೆದಿದೆ. ಇದಕ್ಕಾಗಿ ರಚಿಸಿರುವ ಸಮಿತಿ ಕೂಡ ಭವಿಷ್ಯದ ಬೆಂಗಳೂರು ಬೆಳವಣಿಗೆಯ ದೃಷ್ಟಿಕೋನವನ್ನು ಇಟ್ಟುಕೊಂಡು ವಿಭಜನೆ ಮಾಡಿ ಸರ್ಕಾರಕ್ಕೆ ತನ್ನ ಶಿಫಾರಸು ನೀಡಲಿದೆ. ಮುಖ್ಯವಾಗಿ ಜನರಿಗೆ ವಾರ್ಡ್ ಮಟ್ಟದಲ್ಲೇ ಸರ್ಕಾರಿ ಸೌಲಭ್ಯಗಳು ಸಿಗುವ ರೀತಿ ಆಡಳಿತ ವಿಕೇಂದ್ರೀಕರಣ ಮಾಡುವ ಅಂಶಗಳಿರಲಿವೆ.
| ರಿಜ್ವಾನ್ ಅರ್ಷದ್ ಶಿವಾಜಿನಗರ ಕ್ಷೇತ್ರದ ಶಾಸಕ
. ವಿಭಜನೆಯಿಂದ ಆಡಳಿತ ವಿಕೇಂದ್ರೀಕರಣಗೊಂಡು ಜನರಿಗೆ ಉತ್ತಮ ಸೌಲಭ್ಯ ನೀಡಬಹುದು
. ಸಣ್ಣ ಪಾಲಿಕೆಗಳಿದ್ದಲ್ಲಿ ಆಡಳಿತ ಸುಲಭ, ಜನರಿಗೂ ಹೆಚ್ಚು ಮೂಲಸೌಕರ್ಯ ಒದಗಿಸಬಹುದು
. ಸಣ್ಣ ವಾರ್ಡ್ಗಳಿದ್ದಲ್ಲಿ ಕಾರ್ಪೆರೇಟರ್ಗಳು ಜನರೊಟ್ಟಿಗೆ ಸೇರಿ ಕೆಲಸ ಮಾಡಬಹುದು
. ಸ್ಥಳೀಯ ಮಟ್ಟದಲ್ಲೇ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸುಲಭ
. ಭವಿಷ್ಯದ ಬೆಂಗಳೂರನ್ನು ವ್ಯವಸ್ಥಿತವಾಗಿ ಪುನರ್ ರೂಪಿಸಲು ಅನುಕೂಲ
. ಬೆಂಗಳೂರು ಅಖಂಡವಾಗಿರಲು ಬಿಬಿಎಂಪಿ ಅಸ್ತಿತ್ವ ಮುಂದುವರಿಯಬೇಕು
. ವಿಕೇಂದ್ರೀಕರಣ ನೆಪದಲ್ಲಿ ನಗರವನ್ನು ವಿಭಾಗಿಸಿದರೆ ಅಭಿವೃದ್ಧಿಗೆ ಧಕ್ಕೆಯಾಗಲಿದೆ
. ರಾಜಧಾನಿಯಲ್ಲಿರುವ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿ ವಿಭಜನೆ ಸಲ್ಲ
. ವಿಭಜನೆಗೆ ಬದಲು ಅಧಿಕಾರ ವಿಕೇಂದ್ರೀಕರಣ ಮಾಡುವುದು ಉತ್ತಮ ನಿರ್ಧಾರ
. ವಿಭಜನೆ ಮಾಡಿಯೇ ತೀರುತ್ತೇವೆ ಎಂದಾದಲ್ಲಿ ಮೊದಲು ಸಾರ್ವಜನಿಕ ಚರ್ಚೆಯಾಗಲಿ