

ಮಡಿಕೇರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಕರೆ ನೀಡಿದರು.
ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಉಳ್ಳವರು ನೇರವಾಗಿ ಪಕ್ಷದ ಗಮನಕ್ಕೆ ತರಬೇಕು. ವರಿಷ್ಠರಿಗೆ ಆಕಾಂಕ್ಷಿಗಳ ಹೆಸರನ್ನು ನೀಡಲಾಗುವುದು. ವರಿಷ್ಠರ ಆಯ್ಕೆಯಂತೆ ಸೂಕ್ತ ವ್ಯಕ್ತಿಗೆ ಟಿಕೆಟ್ ಸಿಗಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಟಿಕೆಟ್ ಕೈತಪ್ಪಿದ್ದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಜಿಲ್ಲಾ ಜೆಡಿಎಸ್ ಒಂದು ಕುಟುಂಬದಂತಿದ್ದು, ಪಕ್ಷದಿಂದ ಹೊರ ನಡೆಯುವ ಯೋಚನೆ ಮಾಡದಂತೆ ಮನವಿ ಮಾಡಿದರು.
ಪಕ್ಷ ಸಂಘಟಿಸುವಲ್ಲಿ ಜಿಲ್ಲೆಯ ೫ ತಾಲೂಕುಗಳ ಅಧ್ಯಕ್ಷರ ಪಾತ್ರ ಪ್ರಮುಖವಾಗಿದ್ದು, ಈಗಿನಿಂದಲೇ ಪಕ್ಷ ಸಂಘಟಿಸುವಲ್ಲಿ ಕಾರ್ಯಪ್ರವೃತರಾಗಬೇಕು. ಮುಂದಿನ ೧೫ ದಿನಗಳ ಕಾಲಾವಕಾಶ ನೀಡುತ್ತಿದ್ದು, ಸಮರ್ಥ ನಾಯಕತ್ವದ ಕೊರತೆ ಕಂಡುಬಂದಲ್ಲಿ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು. ೫ ತಾಲೂಕುಗಳ ಅಧ್ಯಕ್ಷರಿಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಅನ್ನು ಬಹುಮತದಿಂದ ಅಧಿಕಾರಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಶ್ರಮ ವಹಿಸಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದು ಸಲಹೆ ನೀಡಿದರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಿಶ್ವ ಮಾತನಾಡಿ, ಮುಂಬರುವ ಚುನಾವಣೆಯ ಗೆಲುವು ಜೆಡಿಎಸ್ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಜಿಲ್ಲೆಯ ಯಾವುದೇ ಪಂಚಾಯ್ತಿಯಲ್ಲೂ ಜೆಡಿಎಸ್ ಬೆಂಬಲಿತ ಜನಪ್ರತಿನಿಧಿಗಳಿಲ್ಲ. ಯಾವುದೇ ಹಂತದಲ್ಲೂ ಸ್ಥಾನಮಾನ ಪಡೆಯದ ಜೆಡಿಎಸ್, ಈ ಬಾರಿ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಧಾನಸಬೆಗೆ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಬೇಕು. ಅಭ್ಯರ್ಥಿ ಯಾರೇ ಆಗಿದ್ದರೂ ಸಂಪೂರ್ಣ ಸಹಕಾರ ನೀಡಬೇಕು. ಪಕ್ಷದಲ್ಲಿ ಯಾವುದೇ ಗೊಂದಲಗಳಿದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಪ್ರಮುಖರಾದ ನಾಪಂಡ ಮುತ್ತಪ್ಪ, ತಾಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.