ಮುಂದಿನ ಬಾರಿ ಅಧಿಕಾರ ಯಾರಿಗೆ?: ವಿಧಾನಸಭೆಯಲ್ಲಿ ವಿಶ್ಲೇಷಣೆ, ವ್ಯಾಖ್ಯಾನ

State
Published on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಅಧಿಕಾರ ಎಂಬ ಸ್ವಾರಸ್ಯಕರ ಚರ್ಚೆಗೆ ವಿಧಾನಸಭೆ ಸಾಕ್ಷಿಯಾಯಿತು. ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂದೆ ತಾವೇ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದವು. ಅದಕ್ಕೆ ಪೂರಕವಾಗಿ ರಾಜಕೀಯ ವ್ಯಾಖ್ಯಾನಗಳೂ ಚರ್ಚೆಗೆ ಗ್ರಾಸವಾದವು. ಒಬ್ಬರನ್ನೊಬ್ಬರು ಕಾಲೆಳೆದ ಪ್ರಸಂಗಗಳೂ ನಡೆದವು. ವಾದ-ಪ್ರತಿವಾದಗಳೂ ನಡೆದು ವ್ಯಾಖ್ಯಾನ, ವಿಶ್ಲೇಷಣೆಗಳು, ತಮ್ಮ ತಮ್ಮ ಪಕ್ಷಗಳ ಸಮರ್ಥನೆಗಳು, ಭವಿಷ್ಯದ ವಿಶ್ವಾಸಗಳು ವ್ಯಕ್ತವಾದವು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ 2023ರ ಚುನಾವಣೆಯಲ್ಲಿ 130-135 ಸ್ಥಾನ ಗೆಲ್ಲುವ ಅಚಲ ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬಿಟ್ಟೆವು ಎಂಬ ಭ್ರಮೆಯಲ್ಲಿದೆ. ಅದು ಸಾಧ್ಯವಾಗುವುದಿಲ್ಲ. ಬಿಜೆಪಿಯೇ ಅಧಿಕಾರಕ್ಕೆ ಬರುವುದು. ಕಾಂಗ್ರೆಸ್ ಶಾಶ್ವತವಾಗಿ ಪ್ರತಿಪಕ್ಷದಲ್ಲೇ ಕೂರಬೇಕಾಗುತ್ತದೆ ಎಂದು ಹೇಳಿದರು. ಪಂಚರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಮುಂದೆ ರಾಜ್ಯದಲ್ಲೂ ಅದೇ ಆಗಲಿದೆ. ಮೋದಿ ಅವರ ನಾಯಕತ್ವ, ಬೊಮ್ಮಾಯಿ ಬಜೆಟ್ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಈ ಅಧಿವೇಶನ ಮುಗಿದ ನಂತರ ರಾಜ್ಯಾದ್ಯಂತ ಪ್ರವಾಸಿ ಮಾಡಿ ಅಧಿಕಾರಕ್ಕೆ ಬರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಯಡಿಯೂರಪ್ಪನವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಅನಗತ್ಯವಾಗಿ ಮುಕ್ತ ಮಾಡಲಾಯಿತು. ಈ ನೋವಿನಿಂದಲೇ ಅವರು ವ್ಯಂಗ್ಯವಾಗಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದೆಲ್ಲ ಹೇಳಿದ್ದಾರೆ. ಇದು ವ್ಯಂಗ್ಯದ ಮಾತು. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದ್ದರು. ಈ ಹಿಂದಿನ ಚುನಾವಣೆಯಲ್ಲೂ ಅವರು 150 ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. ಆದರೆ, ಗೆದ್ದದ್ದು 104 ಸ್ಥಾನ ಎಂದು ಕುಟುಕಿದರು.

ಯಡಿಯೂರಪ್ಪ ಜನರ ಹೃದಯದಲ್ಲಿದ್ದಾರೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯಡಿಯೂರಪ್ಪನವರಿಗೆ ಒಂದು ವಿಶಿಷ್ಠ ಸ್ಥಾನವಿದೆ. ಅಧಿಕಾರದಲ್ಲಿ ಇರಲಿ, ಬಿಡಲಿ ಜನರ ಹೃದಯದಲ್ಲಿ ಅವರು ಯಾವಾಗಲೂ ವಿಶೇಷ ಸ್ಥಾನ ಪಡೆದಿದ್ದಾರೆ. ಬಹಳ ಸಮಚಿತ್ತದಿಂದ ಎಲ್ಲವನ್ನು ತೆಗೆದುಕೊಳ್ಳುವ ಶಕ್ತಿ ಯಡಿಯೂರಪ್ಪನವರಿಗಿದೆ. ಎಂತಹ ನೋವಿನ ಪ್ರಸಂಗಗಳಲ್ಲೂ ಅವರು ಯಾವ ರೀತಿ ರಾಜಕಾರಣದಲ್ಲಿ ತೀರ್ವನಗಳನ್ನು ಮಾಡಿದ್ದಾರೆ ಎಂಬುದನ್ನು ಅವರ ಜತೆ ಇದ್ದು ನೋಡಿದ್ದೇನೆ. ಅವರು ನಮ್ಮ ನಾಯಕರು. ಅವರು ಹೇಳುವಂತೆ ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು. ಹಿಂದೆ ಸಿದ್ಧರಾಮಯ್ಯ ಚುನಾವಣಾ ಸಂದರ್ಭದಲ್ಲಿ ಅವರಪ್ಪರಾಣೆ ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದು ಹೇಳಿದ್ದರು. ಇಬ್ಬರೂ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಅದು ಸುಳ್ಳಾಯಿತು. ಸಿದ್ಧರಾಮಣ್ಣನವರಿಗೆ ಸತ್ಯ ಗೊತ್ತಿದ್ದರೂ ಜೋರಾಗಿ ಹೇಳಿದರೆ ಜನ ನಂಬುತ್ತಾರೆ ಎಂದು ಅಂದುಕೊಂಡಿದ್ದಾರೆ. ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಎಂದೂ ಸತ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಮತ್ತೆ ಅಲ್ಲಿ ಗೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆಡಳಿತ ವಿರೋಧ ಅಲೆ ನಡುವೆಯೇ ಮತ್ತೆ ಗೆಲ್ಲುವುದು ದೊಡ್ಡ ಯಶಸ್ಸು. ಹಿಂದೆ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಮತ್ತೆ ಯಾಕೆ ಗೆಲ್ಲಲಿಲ್ಲ ಎಂದು ಕುಟುಕಿದರು. ಜನರ ನಾಡಿಮಿಡಿತ ಗೊತ್ತಾಗುವುದೇ ಚುನಾವಣೆ ಸಂದರ್ಭದಲ್ಲಿ. ಯಡಿಯೂರಪ್ಪ ನಮ್ಮ ಬಜೆಟ್ ಮತ್ತು ಪರಿಶ್ರಮಗಳಿಂದ ನಾವು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಸಿದ್ಧರಾಮಯ್ಯ ಈ ಹಿಂದೆ ಹೇಳಿದ್ದೆಲ್ಲಾ ಸುಳ್ಳಾಗಿದೆ. ಈಗಲೂ ಹಾಗೇ ಆಗುತ್ತದೆ ಎಂದು ಕೌಂಟರ್ ಕೊಟ್ಟರು. ಆಗ ಮತ್ತೆ ಸಿದ್ದರಾಮಯ್ಯ, ನಾವು ಜನರ ಬಳಿ ಹೋಗುತ್ತೇವೆ. ನೀವು ಬನ್ನಿ ಜನರ ಆಶೀರ್ವಾದ ಯಾರಿಗೆ ಸಿಗುತ್ತದೋ ನೋಡೋಣ. ಜನ ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಆಗ ಸ್ಪೀಕರ್ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ

ಜೆಡಿಎಸ್​ನ ಬಂಡೆಪ್ಪ ಕಾಶೆಂಪುರ, ಪ್ರಾದೇಶಿಕ ಪಕ್ಷ ಜೆಡಿಎಸ್ ಬಹಳ ದಿನಗಳಿಂದ ಹೋರಾಟ ಮಾಡುತ್ತಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಹೈಕಮಾಂಡ್ ದೆಹಲಿಯಲ್ಲಿಲ್ಲ. ಬೆಂಗಳೂರಿನಲ್ಲೇ ಇದೆ. ರೈತರ ಸಾಲ ಮನ್ನಾ, ರೈತಪರ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023ರ ಚುನಾವಣೆಯಲ್ಲಿ ಜೆಡಿಎಸ್​ಗೆ ಜನ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಗ ಸಿದ್ಧರಾಮಯ್ಯ, ನಾವೇನು ಭ್ರಮೆಯಲ್ಲಿಲ್ಲ. ನಿಮ್ಮ ಆಡಳಿತ ವೈಫಲ್ಯ, ಜನರಿಗಾಗಿರುವ ತೊಂದರೆ. ಕೆಳ ವರ್ಗದ ಜನರ ನೋವು ಇವೆಲ್ಲ ನಿಮ್ಮನ್ನು ಆಡಳಿತದಿಂದ ಜನ ಹೊರ ಹಾಕಲು ಕಾರಣವಾಗುತ್ತದೆ ಎಂದು ಹರಿಹಾಯ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ನಮ್ಮ ನಾಯಕರಾದ ಯಡಿಯೂರಪ್ಪ ಪಕ್ಷ ಕಟ್ಟುತ್ತೇನೆ, ಕುರ್ಚಿ, ಅಧಿಕಾರ ಬೇಡ ಎಂದು ಹೇಳಿದ್ದಾರೆ. ಅಧಿಕಾರದ ಆಸೆ ಅವರಿಗಿಲ್ಲ. ಈ ರೀತಿ ನಿಮ್ಮಲ್ಲಿ ಯಾರಾದರೊಬ್ಬರು ಹೇಳಿ ನೋಡೋಣ ಎಂದು ಛೇಡಿಸಿದರು.

ಬಿಎಸ್​ವೈ ರೂಪಾಂತರ: ಕಾಂಗ್ರೆಸ್​ನ ರಮೇಶ್​ಕುಮಾರ್, ಯಡಿಯೂರಪ್ಪ ಸಾಂರ್ದಭಿಕ ಒತ್ತಡದಿಂದ ಈ ರೀತಿ ಭಾಷಣ ಮಾಡಿದ್ದಾರೆ. ಕಂಬಳಿ ಹುಳು ಚಿಟ್ಟೆಯಾಗಿ ರೂಪಾಂತರ ಆಗುವಂತೆ ಬಿಎಸ್​ವೈ ರೂಪಾಂತರವಾಗಿದ್ದಾರೆ. ಯಡಿಯೂರಪ್ಪ ಏನೆಂಬುದು ನನಗೆ ಗೊತ್ತಿದೆ. ಪರಿವರ್ತಿತ ಯಡಿಯೂರಪ್ಪನವರಿಗೆ ಯಶಸ್ಸು ಸಿಗಲಿ ಎಂದು ವ್ಯಂಗ್ಯವಾಡಿದರು.

ಸಿದ್ದು-ಬಿಎಸ್​ವೈ ಸವಾಲ್-ಜವಾಬ್

135 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವ ಯಡಿಯೂರಪ್ಪ ಇತ್ತೀಚೆಗೆ ಜನರ ಹತ್ತಿರ ಹೋಗಿಲ್ಲ ಎಂದು ಕಾಣಿಸುತ್ತದೆ. ಉಪಚುನಾವಣೆಯಲ್ಲಿ, ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೆ ಯಾವ ಪರಿಸ್ಥಿತಿ ಬಂದಿದೆ ಅವರಿಗೆ ಗೊತ್ತಿಲ್ಲ. ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು. ಉತ್ತರ ಪ್ರದೇಶ, ಪಂಜಾಬ್, ಗೋವಾ ಅಲ್ಲಿನ ಪರಿಸ್ಥಿತಿಯೇ ಬೇರೆ. ಕರ್ನಾಟಕ ರಾಜಕಾರಣವೇ ಬೇರೆ. ಜನರ ಬಿಜೆಪಿಯನ್ನು ಸೋಲಿಸುವ ತೀರ್ಮಾನ ಮಾಡಿದ್ದಾರೆ. ನಾವು ಭ್ರಮೆಯಲ್ಲಿಲ್ಲ. ಜನರ ನಾಡಿಮಿಡಿತ ಅರಿತು ಹೇಳುತ್ತಿದ್ದೇನೆ. ಯಡಿಯೂರಪ್ಪನವರೇ ಬಿಜೆಪಿ ಮತ್ತೆ ಗೆದ್ದರು ನೀವು ಸಿಎಂ ಆಗಲ್ಲ. ನಾವು ಅಧಿಕಾರಕ್ಕೆ ಬರುವ ಕನಸು ನನಸಾಗುತ್ತದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕಿಲ್ಲ. ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಟ್ಟು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ. ನಾನು ಹಿಂದೆಯೂ ಹೇಳಿದ್ದೇನೆ. ಅನೇಕ ವರ್ಷ ಕಾಂಗ್ರೆಸ್ ಪ್ರತಿಪಕ್ಷದಲ್ಲೇ ಇರಬೇಕಾಗುತ್ತದೆ. ಆಡಳಿತ ಪಕ್ಷಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್​ಗೆ ನಾಯಕತ್ವ ಇಲ್ಲ ಎಂದು ಕುಟುಕಿದರು.

ಬಿಜೆಪಿ ನಿಮ್ಮನ್ನೇ ಮುಕ್ತ ಮಾಡಿದೆ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್​ನ ಎಂ.ಬಿ. ಪಾಟೀಲ್, ಯಡಿಯೂರಪ್ಪ ಮುಕ್ತ ಬಿಜೆಪಿ ಆಗಿದೆ. ನಮ್ಮನ್ನು ಬಿಡಿ, ನಿಮ್ಮನ್ನೇ ಮುಕ್ತ ಮಾಡಿದ್ದಾರೆ ಎಂದು ಕಿಚಾಯಿಸಿದರು. ಆಗ ಯಡಿಯೂರಪ್ಪ, ನಿಮಗೆ ರಾಷ್ಟ್ರ ಮಟ್ಟದಲ್ಲಿ ನಾಯಕತ್ವ ಇದೆಯೆ?, ನಿಮ್ಮ ಅಡ್ರೆಸ್ ಏನು?, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಉಸಿರಾಡುತ್ತಿದ್ದೀರಿ ಅಷ್ಟೆ ಎಂದು ಛೇಡಿಸಿದರು. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮತ್ತೆ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ. ನನ್ನದೇನಿದ್ದರೂ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಬೊಮ್ಮಾಯಿ ಬಜೆಟ್​ಗೆ ಯಡಿಯೂರಪ್ಪ ಪ್ರಶಂಸೆ

ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಅಭಿವೃದ್ಧಿಗೆ ಪೂರಕವಾಗಿ ಬಸವರಾಜ ಬೊಮ್ಮಾಯಿ ಒಳ್ಳೆಯ ಆಯವ್ಯಯ ಮಂಡಿಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸರ್ವರ ಅಭ್ಯುದಯ, ಸರ್ವರ ರ್ಸ³ಯಾಗಿದೆ. ಒಳ್ಳೆಯ ಬಜೆಟ್ ಮಂಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಕೋವಿಡ್ ಸಂಕಷ್ಟದ ಇತಿ-ಮಿತಿಯಲ್ಲೂ ಉತ್ತಮ ಆಯವ್ಯಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಲದ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ನಾನು ಕೂಡ 8 ಬಜೆಟ್ ಮಂಡಿಸಿದ್ದೇನೆ. 2006-07ರಿಂದ 2022-23ರವರೆಗೆ ಎರಡು ವರ್ಷದಲ್ಲಿ ಮಾತ್ರ ರಾಜಸ್ವ ಕೊರತೆ ಉಂಟಾಗಿದೆ. 2020-21 ರಲ್ಲಿ 15,143 ಕೋಟಿ ರೂ. ಕೊರತೆಯಾಗಿತ್ತು. 2022-23ರಲ್ಲಿ 14,699 ಕೋಟಿ ರೂ. ರಾಜಸ್ವ ಕೊರತೆಯಾಗಲಿದೆ. ಕೋವಿಡ್ ಲಾಕ್​ಡೌನ್​ನಿಂದ ರಾಜ್ಯ ಮತ್ತು ರಾಷ್ಟ್ರದ ರಾಜಸ್ವ ಆದಾಯದಲ್ಲಿ ಗಣನೀಯ ಕುಸಿತವಾಗಿದೆ. ಆರೋಗ್ಯ ಕ್ಷೇತ್ರದ ವೆಚ್ಚ ಹೆಚ್ಚಾಗಿದೆ.ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನ್ವಯ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದು ಹೇಳಿದರು. ಬದ್ಧತಾ ವೆಚ್ಚ ಹೆಚ್ಚಾಗುತ್ತಿದೆ. ಪಿಂಚಣಿ, ಬಡ್ಡಿ, ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಲಾಗುವುದು. ಉತ್ತಮ ವೇತನ ನೀಡಿದರೆ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಯೋಜನೆಗಳು ಜನರಿಗೆ ತಲುಪುತ್ತವೆ ಎಂದು ಹೇಳಿದರು.

ಅಧಿಕಾರ ವೇತನ ಸಮಿತಿ: ಒಟ್ಟು ಸರ್ಕಾರಿ ನೌಕರರ ಸಂಖ್ಯೆ 7.63 ಲಕ್ಷ ಇದ್ದು , 2.50 ಲಕ್ಷ ಹುದ್ದೆ ಖಾಲಿ ಇವೆ. ಇದರಿಂದ 8,531 ಕೊಟಿ ರೂ. ಉಳಿತಾಯವಾಗಲಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡಲು ಅಧಿಕಾರಿ ವೇತನ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಜಿಎಸ್​ಟಿ ಪರಿಹಾರವನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಣೆ ಮಾಡಲು ಕೋರಲಾಗಿದೆ. ರಾಜ್ಯದ ಆಂತರಿಕ ಉತ್ಪನ್ನದ ಪ್ರಮಾಣ ಶೇ.9.6 ಆಗುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಅನಗತ್ಯ ಹುದ್ದೆ ಮತ್ತು ವೆಚ್ಚ ಕಡಿಮೆ ಮಾಡಿ ಎಂದು ಹೇಳಿದ್ದೇನೆ. ಪಿಂಚಣಿ ನಿಲ್ಲಿಸಿ, ಬದ್ಧತಾ ವೆಚ್ಚ ಕಡಿಮೆ ಮಾಡಿ ಎಂದು ನಾನು ಹೇಳಿಲ್ಲ. ಬದ್ಧತಾ ವೆಚ್ಚ ಅನಿವಾರ್ಯ. ಅನುತ್ಪಾದಕ ವೆಚ್ಚ ಬೇಡ. ನಾವು ಬಜೆಟ್ ಮೇಲೆ ಎತ್ತಿರುವ ಆಕ್ಷೇಪಗಳಿಗೆ, ವಿರೋಧಗಳಿಗೆ ಕಾರಣವನ್ನೂ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಕಲಿ ಬಿತ್ತನೆ ಬೀಜ ಹಾವಳಿ ಮಟ್ಟಹಾಕಲು ಕ್ರಮ

ನಕಲಿ ಬಿತ್ತನೆ ಬೀಜ ಹಾವಳಿ ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಆಸಕ್ತ ಶಾಸಕರೊಂದಿಗೆ ಶೀಘ್ರವೇ ವಿಶೇಷ ಸಭೆ ಏರ್ಪಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಭರವಸೆ ನೀಡಿದರು. ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರಿಸಿ, ರೈತರ ಹಿತರಕ್ಷಣೆಗಾಗಿ ನಕಲಿ ಬಿತ್ತನೆ ಬೀಜ ಮಾರಾಟ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ರೈತರಿಗೆ ನಷ್ಟ: ಎನ್.ರವಿಕುಮಾರ್ ಪ್ರಶ್ನೆ ಮುಂದುವರಿಸಿ, ಲಭ್ಯ ಮಾಹಿತಿ ಪ್ರಕಾರ 8,500 ಕ್ವಿಂಟಾಲ್ ನಕಲಿ ಬಿತ್ತನೆ ಬೀಜ ಪತ್ತೆ ಹಚ್ಚಲಾಗಿದೆ. ಕೃಷಿ ಇಲಾಖೆ ದಾಳಿ ನಡೆಸಿ 500 ಕ್ವಿಂಟಾಲ್ ನಕಲಿ ಬೀಜ ವಶಕ್ಕೆ ಪಡೆದಿದ್ದು, ಹರ್ಬಲ್ ಬೀಜವೆಂದು ಹೇಳಿ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡುತ್ತಿದ್ದು, ಕ್ರಮವೇನು? ಎಂದು ಕೇಳಿದರು. ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್​ನ ಗೋವಿಂದರಾಜ್, ಜೆಡಿಎಸ್​ನ ಶ್ರೀಕಂಠೇಗೌಡ ಹಾಗೂ ಗೋವಿಂದರಾಜು ಬಿತ್ತನೆ ಬೀಜವಷ್ಟೇ ಅಲ್ಲ, ನಕಲಿ ಕ್ರಿಮಿನಾಶಕ, ರಸಗೊಬ್ಬರ ಮಾಫಿಯಾದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅನ್ಯಾಯವಾಗಲು ಬಿಡಲ್ಲ: ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು ಕಲ್ಪಿಸುವ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದರು. ಪರಿಷತ್​ನಲ್ಲಿ ಜೆಡಿಎಸ್​ನ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ವೇಳೆ ಸ್ವಯಂಪ್ರೇರಿತವಾಗಿ ಈ ವಿಷಯ ಪ್ರಸ್ತಾಪಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಸೂಕ್ತ ಮಾಹಿತಿ ನೀಡಲು ಅಗತ್ಯ ತಯಾರಿ ನಡೆದಿವೆ ಎಂದು ಹೇಳಿದರು. ಸುಪ್ರೀಂ ಕೋರ್ಟ್​ಗೆ

ಸಕಾಲಕ್ಕೆ ಸರ್ಕಾರ ದತ್ತಾಂಶ ಸಹಿತ ಮಾಹಿತಿ ನೀಡಿದ್ದರೆ ಈ ಬಿಕ್ಕಟ್ಟು ಉದ್ಭವಿಸುತ್ತಿದ್ದಿಲ್ಲ ಎಂದು ಜೆಡಿಎಸ್​ನ ಕೆ.ಟಿ.ಶ್ರೀಕಂಠೇಗೌಡ ತಿವಿದರು. ಕೆ.ಎಸ್.ಈಶ್ವರಪ್ಪ ಮಾತು ಮುಂದುವರಿಸಿ, ಒಬಿಸಿಗೆ ಮೀಸಲು ವಿಷಯದ ಬಗ್ಗೆ ಸಿಎಂ ಜತೆಗೆ ಸಮಾಲೋಚಿಸಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ತ್ವರಿತವಾಗಿ ಸುಪ್ರೀಂ ಕೋರ್ಟ್​ಗೆ ನಿಲುವು ಸ್ಪಷ್ಟಪಡಿ ಸುವ ಬಗ್ಗೆ ತೀರ್ವನಕ್ಕೆ ಬರಲಾಗುವುದು ಎಂದರು.

ರೈತರಿಗೆ ಜಮೀನೂ ಇಲ್ಲ, ಉದ್ಯೋಗವೂ ಇಲ್ಲ

ಉದ್ಯಮಿಗಳಿಗೆ ಜಮೀನು ನೀಡುವ ಕೆಐಎಡಿಬಿ ಬಿಳಿಯಾನೆಯಾಗಿ ಪರಿಣಮಿಸಿದ್ದು, ಇಡೀ ಮಂಡಳಿಗೆ ಮೇಜರ್ ಸರ್ಜರಿ ಅಗತ್ಯ ಎಂದು ಬಿಜೆಪಿಯ ಎಸ್. ರುದ್ರೇಗೌಡ ಒತ್ತಾಯಿಸಿದ್ದಾರೆ. ಮೇಲ್ಮನೆಯಲ್ಲಿ ಮಾತನಾಡಿದ ಅವರು, ರೈತರಿಂದ ಸ್ವಾಧೀನ ಪಡಿಸಿಕೊಳ್ಳುವ ಜಮೀನುಗಳಲ್ಲಿ 15 ವರ್ಷ ಕಳೆದರೂ ಕೈಗಾರಿಕೆಗಳು ಪ್ರಾರಂಭವಾಗುತ್ತಿಲ್ಲ. ಜಮೀನು ನೀಡಿದ ರೈತರಿಗೆ ಉದ್ಯೋಗ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿರುತ್ತಾರೆ. ಆದರೆ, ಕೈಗಾರಿಕೆಗಳು ಪ್ರಾರಂಭಿಸುವುದಿಲ್ಲ. ಪರಿಣಾಮ ಜಮೀನು ಇಲ್ಲ ಉದ್ಯೋಗವೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಅಲ್ಲದೆ, ರೈತರ ಜಮೀನನ್ನು 15-20 ಲಕ್ಷ ರೂ.ಗಳಿಗೆ ಪಡೆದುಕೊಳ್ಳುವ ಕೆಐಎಡಿಬಿ ಕೈಗಾರಿಕೋದ್ಯಮಿಗಳಿಗೆ ಕೊಟ್ಯಂತರ ರೂ. ಪಡೆದು ಹಂಚಿಕೆ ಮಾಡುತ್ತಿದೆ. ರಾಜ್ಯದವರನ್ನು ಕಡೆಗಣಿಸಿ ಹೊರ ರಾಜ್ಯದ ಉದ್ಯಮಿ ಗಳಿಗೆ ಮಣೆ ಹಾಕಲಾಗುತ್ತಿದ್ದು, ಇಡೀ ಸಂಸ್ಥೆಯನ್ನೇ ಸರಿಪಡಿಸಬೇಕಾದ ಅಗತ್ಯವಿದೆ ಎಂದರು.

ವಸತಿ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ

ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿಪಡಿಸಿರುವ ಆದಾಯದ ಮಿತಿಯನ್ನು 32 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗೆ ಹೆಚ್ಚಳ ಮಾಡುವುದಾಗಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳಿಗೆ ಫಲಾನುಭವಿಗಳಾಗಲು ಪ್ರಸ್ತುತ 32 ಸಾವಿರ ರೂ., ವಾರ್ಷಿಕ ಆದಾಯ ನಿಗದಿ ಮಾಡಿರುವುದು ಅವೈಜ್ಞಾನಿಕ ಎನ್ನು ವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡದಾರರಿಗೆ ನಿಗ

ದಿಪಡಿಸಿರುವ 1.20 ಲಕ್ಷ ರೂ. ಆದಾಯ ಮಿತಿಯನ್ನು ವಸತಿ ಯೋಜನೆಗಳಿಗೆ ನಿಗದಿ ಮಾಡಲಾಗುವುದು. ಮುಖ್ಯಮಂತ್ರಿಗಳು ಬಜೆಟ್ ಉತ್ತರದ ಸಂದರ್ಭದಲ್ಲಿ ಇದನ್ನು ಘೋಷಿಸಲಿದ್ದಾರೆ ಎಂದರು. ನಗರ ಪ್ರದೇಶಗಳಲ್ಲೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿ ಮಾಡಿರುವ ವಾರ್ಷಿಕ ಆದಾಯ 87 ಸಾವಿರ ರೂ.ಗಳನ್ನು 3 ಲಕ್ಷ ರೂ.ಗಳವರೆಗೂ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ವಿಷಯ ಪ್ರಸ್ತಾಪಿಸಿದ್ದ ರಮೇಶ್​ಕುಮಾರ್, ವಸತಿ ಯೋಜನೆಗಳಿಗೆ 32 ಸಾವಿರ ರೂ. ಆದಾಯ ಮಿತಿ ನಿಗದಿಯಾಗಿದೆ. ಆದರೆ, ಕಂದಾಯ ಇಲಾಖೆಯವರು 45 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಪ್ರಮಾಣ ಪತ್ರಗಳನ್ನು ನೀಡುವುದಿಲ್ಲ. ಹಾಗಾಗಿ ಇದನ್ನು ಸರಿಪಡಿಸಿ. ಇಲ್ಲದಿದ್ದರೆ ತೊಂದರೆಯಾಗುತ್ತದೆ ಎಂದು ಸರ್ಕಾರದ ಗಮನ ಸೆಳೆದರು.

ಬಡ್ತಿ ನಿಯಮ ಸಡಿಲಗೊಳಿಸಲು ಪರಿಶೀಲನೆ

ಅಂಗನವಾಡಿ ಕಾರ್ಯಕರ್ತೆಯರಿಗೆ ಮೇಲ್ವಿಚಾರಕಿ ಹುದ್ದೆಗೆ ಬಡ್ತಿ ನೀಡಿಕೆಗೆ ಸಂಬಂಧಿಸಿದಂತೆ ನಿಯಮ ಸಡಿಲಗೊಳಿಸುವ ಕುರಿತು ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಭೀಮನಾಯಕ್ ಪ್ರಶ್ನೆಗೆ ಉತ್ತರಿಸಿದರು. ನೇರ ನೇಮಕಾತಿ ಹುದ್ದೆಗಳ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೇಲ್ವಿಚಾರಕ ಹುದ್ದೆಗಳನ್ನು ನೀಡಲಾಗುತ್ತಿದೆ. ಈ ಸಂಬಂಧ 2006ರಲ್ಲೇ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಹತ್ತು ವರ್ಷ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಯುಸಿ ಬದಲು ಎಸ್​ಎಸ್​ಎಲ್​ಸಿ ವಿದ್ಯಾರ್ಹತೆ ನಿಗದಿ ಮಾಡುವಂತೆ ಭೀಮಾ ನಾಯಕ್ ಮನವಿಗೆ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಸದಸ್ಯರ ಒತ್ತಡದ ಹಿನ್ನೆಲೆಯಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.

ಜಾತಿವಾರು ನಿಗಮಕ್ಕೆ ಹಿಂದೇಟು

ಜಾತಿವಾರು ಅಭಿವೃದ್ಧಿ ಮಂಡಳಿ, ನಿಗಮಗಳ ರಚಿಸುವ ವರಸೆ ಟೀಕೆಗೆ ಒಳಗಾದ ಬಳಿಕ ಸರ್ಕಾರ ತನ್ನ ಚಿಂತನೆ ಧಾಟಿ ಬದಲಾಯಿಸಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ ಉತ್ತರವೇ ಸರ್ಕಾರದ ನಿಲುವು ಬಹಿರಂಗಪಡಿಸಿತು. ಕೊಡವ ಅಭಿವೃದ್ಧಿ ನಿಗಮ ರಚಿಸುವ ಪ್ರಸ್ತಾವನೆಯಿಲ್ಲ. ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 10 ಕೋಟಿ ರೂ. ಬಳಕೆ ಬಗ್ಗೆ ಕೊಡಗು ಜಿಲ್ಲೆಯ ಶಾಸಕರ ಜತೆ ರ್ಚಚಿಸಲಿದ್ದು, ದೇವರಾಜ ಅರಸು ಅಭಿವೃದ್ಧಿ ನಿಗಮದ ಮುಖೇನ ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್​ನ ವೀಣಾ ಅಚ್ಚಯ್ಯ ಅವರಿಗೆ ಪ್ರತಿಕ್ರಿಯಿಸಿದರು.

ಸಭೆ ಕರೆದು ಪರಿಹಾರ: ಪರಿಶಿಷ್ಟ ಜಾತಿ 101 ಸಮುದಾಯಗಳ ಪೈಕಿ ಆರು, ಪರಿಶಿಷ್ಟ ಪಂಗಡದ 51 ಸಮುದಾಯಗಳ ಪೈಕಿ 12 ಸಮುದಾಯಗಳಿಗೆ ಸಿಂಧುತ್ವ ಪ್ರಮಾಣಪತ್ರದ ಸಮಸ್ಯೆ ಬಗೆಹರಿಸಲು ಸಚಿವರ ಜಂಟಿ ಸಭೆ ಕರೆದು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಆಶ್ವಾಸನೆ ನೀಡಿದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ರಘುನಾಥ್​ರಾವ್ ಮಲ್ಕಾಪೂರೆ ಪ್ರಶ್ನೆಗೆ ಉತ್ತರಿಸಿದ ಅವರು, ನಾಗರಿಕ ಹಕ್ಕು ಜಾರಿ ನಿರ್ದೇಶ ನಾಲಯದಿಂದ ವರದಿ ಪಡೆದು, ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕೆಂಬ ಸುತ್ತೋಲೆಯನ್ನು ತಕ್ಷಣಕ್ಕೆ ವಾಪಸ್ ಪಡೆಯುವೆ ಎಂದು ಹೇಳಲಾಗದು. ಸಮಾಜ ಕಲ್ಯಾಣ ಸಚಿವರು, ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ರ್ಚಚಿಸಿ ಆದಷ್ಟು ಬೇಗ ನಿರ್ಧಾರಕ್ಕೆ ಬರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net