ಕೆಪಿಸಿಸಿ ಅಧ್ಯಕ್ಷ, ಸಿಎಲ್​ಪಿ ನಾಯಕನ ಆಯ್ಕೆ ಹೊಣೆ ಹೈಕಮಾಂಡ್​ಗೆ; ಒಗ್ಗಟ್ಟು ಪ್ರದರ್ಶನಕ್ಕೆ ಕಾಂಗ್ರೆಸ್ ನಾಯಕರ ನಿರ್ಧಾರ

Congress
Published on

ಬೆಂಗಳೂರು: ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್​ಪಿ ನಾಯಕರ ಆಯ್ಕೆ ತೀರ್ವನವನ್ನು ಆದಷ್ಟು ಬೇಗ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ತರಲು ರಾಜ್ಯ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಶನಿವಾರ ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನೆಯಲ್ಲಿ ರಾಜ್ಯ ಕಾಂಗ್ರೆಸ್​ನ 20 ಹಿರಿಯ ಮುಖಂಡರು ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ನಿರ್ಧಾರ ಕೈಗೊಂಡರು. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್​ಪಿ ನಾಯಕರ ವಿಚಾರದಲ್ಲಿ ಹೈಕಮಾಂಡ್ ಮುಂದೆ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಮುಂದೆ ನಡೆಯುವ ಎಲ್ಲ ಚುನಾವಣೆಗಳ ಸಂದರ್ಭದಲ್ಲಿಯೂ ನಾಯಕರ ನಡುವೆ ಒಗ್ಗಟ್ಟು ತೋರಿಸಬೇಕು ಎಂಬ ಚರ್ಚೆ ನಡೆಸಲಾಯಿತು. ಸುಮಾರು 3 ತಾಸು ನಡೆದ ಸಭೆಯಲ್ಲಿ ಹಿಂದಿನ ಸೋಲುಗಳ ಬಗ್ಗೆ ಆತ್ಮಾವಲೋಕನದ ರೀತಿಯಲ್ಲಿ ಚರ್ಚೆಗಳಾದವು. ಹಿಂದಿನ ತಪು್ಪಗಳನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕೆಂಬ ನಿಟ್ಟಿನಲ್ಲಿ ರ್ಚಚಿಸಲಾಯಿತು.

ಹೆಸರು ಪ್ರಸ್ತಾಪ ಇಲ್ಲ: ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್​ಪಿ ನಾಯಕ ಸ್ಥಾನಕ್ಕೆ ಸಭೆಯಲ್ಲಿ ಯಾವುದೇ ಹೆಸರು ಪ್ರಸ್ತಾಪವಾಗಲಿಲ್ಲ. ಆದರೆ ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ಅವರೊಂದಿಗೆ ಒಗ್ಗಟ್ಟಿನಿಂದ ಪಕ್ಷ ಕಟ್ಟಬೇಕೆಂದು ನಿರ್ಧಾರಕ್ಕೆ ಬರಲಾಯಿತು. ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆಗಳನ್ನು ಯಾರು ನೀಡಬಾರದೆಂಬ ತೀರ್ವನವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ರಾಜ್ಯದಿಂದ ಯಾವುದೇ ಹೆಸರು ಶಿಫಾರಸು ಮಾಡುವುದು ಬೇಡ, ಹೈಕಮಾಂಡ್ ಯಾರನ್ನೇ ನೇಮಕ ಮಾಡಿದರೂ ಅವರೊಂದಿಗೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಮುಂದೆ ಪಂಚಾಯತಿ ಸಂಸ್ಥೆಗಳು ಹಾಗೂ ಬಿಬಿಎಂಪಿಗೆ ಚುನಾವಣೆಗಳು ನಡೆಯುತ್ತಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು, ಅದಕ್ಕೆ ಜಿಲ್ಲಾ ಮಟ್ಟದಲ್ಲಿಯೂ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಯಿತು. ಅಚ್ಚರಿ ಎಂದರೆ, ಯಾವುದೇ ಮುಖಂಡರ ವಿರುದ್ಧ ಆರೋಪ- ಪ್ರತ್ಯಾರೋಪಗಳು ಕೇಳಿಬರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ಅಧ್ಯಕ್ಷರು, ಸಿಎಲ್​ಪಿ ನಾಯಕರ ಜತೆಗೆ ಇಬ್ಬರಿಗೆ ಕಾಂಗ್ರೆಸ್ ಕಾರ್ಯಕಾರಿಣಿ ಯಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್ ಬಳಿಯಲ್ಲಿ ಮನವಿ ಮಾಡಲು ಚರ್ಚೆ ಗಳಾದವು. ಯಾರಿಗೆ ಎಂಬುದನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗುತ್ತದೆ.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾ ದ್ಯಕ್ಷ ಈಶ್ವರ್ ಖಂಡ್ರೆ, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್ ಇತರರು ಭಾಗವಹಿಸಿದ್ದರು. ಸಂಬಂಧಿಯೊಬ್ಬರ ನಿಧನ ಹಿನ್ನೆಲೆಯಲ್ಲಿ ಎಚ್.ಕೆ.ಪಾಟೀಲ್ ಬಂದಿರಲಿಲ್ಲ. ಕೆ.ಜೆ.ಜಾರ್ಜ್ ಪ್ರವಾಸದಲ್ಲಿರುವ ಕಾರಣ ಗೈರಾಗಿದ್ದರು.

ಹೈಕಮಾಂಡ್ ನಿರ್ಧಾರಕ್ಕೆ

ಶೀಘ್ರವೇ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಬಗ್ಗೆ ಇರುವ ಗೊಂದಲ ಬಗೆಹರಿಸುವ ಸಂಬಂಧ ಹೈಕಮಾಂಡ್ ಗಮನಕ್ಕೆ ತಂದಿದ್ದು, ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದರು. ಸಭೆ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ಅವರು, ಪ್ರಸ್ತುತ ರಾಜಕೀಯ ಪರಿಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ, ಬಿಜೆಪಿ ಸರಕಾರದ ಆಡಳಿತದ ವೈಫಲ್ಯದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಇದರ ಜತೆಗೆ ಪಕ್ಷದಲ್ಲಿ ಆದ ಬೆಳವಣಿ ಬಗ್ಗೆಯೂ ರ್ಚಚಿಸಿದ್ದೇವೆ.

ಆದಷ್ಟು ಬೇಗ ಕೆಪಿಸಿಸಿ ಹಾಗೂ ವಿಪಕ್ಷ ನಾಯಕರ ಬಗ್ಗೆ ಇರುವ ಗೊಂದಲ ಬಗೆಹರಿಯಲಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಸಂಬಂಧ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್​ಗೆ ವರದಿ ನೀಡಲು ನಿರ್ಧರಿಸಿದ್ದೇವೆ. ಆ ಬಳಿಕವಷ್ಟೇ ಪಕ್ಷದ ಮುಂದಿನ ಚಟುವಟಿಕೆ ಬಗ್ಗೆ ತೀರ್ವನಿಸಲು ಸಹಕಾರಿ ಆಗಲಿದೆ ಎಂದ ಅವರು, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಗೊಂದಲಗಳಿರಬಾರದು ಎನ್ನುವ ಕಾರಣಕ್ಕೆ ಸಭೆ ನಡೆಸಲಾಗಿದೆ. ಯಾರು ಅಧ್ಯಕ್ಷರಾಗಬೇಕು ಎಂಬುದರ ಬಗ್ಗೆ ವೈಯಕ್ತಿಕವಾಗಿ ಯಾವುದೇ ಚರ್ಚೆ ಆಗಿಲ್ಲ. ಆಕಾಂಕ್ಷಿಗಳ ಬಗ್ಗೆಯಾಗಲಿ, ಸಿಎಲ್​ಪಿ ಮತ್ತು ವಿಪಕ್ಷ ನಾಯಕರ ಸ್ಥಾನ ಪ್ರತ್ಯೇಕಿಸುವ ಬಗ್ಗೆಯೂ ಚರ್ಚೆ ನಡೆಸಿಲ್ಲ ಎಂದರು.

ಹಾಗೆ ಬಂದು ಹೀಗೆ ಹೋದ ಡಿಕೆಶಿ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಭೆಯಿಂದ ಬೇಗ ತೆರಳಿದ್ದು ಚರ್ಚೆಗೆ ಗ್ರಾಸವಾಯಿತು. ಯಾವುದೋ ದೇವಸ್ಥಾನಕ್ಕೆ ಪೂಜೆಗೆ ಹೋಗುವ ಸಲುವಾಗಿ ಕುಟುಂಬ ಸಮೇತ ಬಂದಿದ್ದರು. ಅವರ ಕುಟುಂಬದವರು ಹೊರಗಡೆ ಕಾರಿನಲ್ಲಿಯೇ ಕುಳಿತಿದ್ದರಿಂದ ಬೇಗ ತೆರಳಿದರೆಂದು ಹೇಳಲಾಗುತ್ತಿದೆ.

ಹೆಸರು ಬದಲಾವಣೆಯಿಂದ ಏನು ಪ್ರಯೋಜನ

ರಾಮನಗರವನ್ನು ನವ ಬೆಂಗಳೂರು ಎಂದು ಬದಲಾವಣೆ ಮಾಡುವ ಸರ್ಕಾರದ ಪ್ರಸ್ತಾವನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆಯಿಂದ ಆಗುವ ಪ್ರಯೋಜನವಾದರೂ ಏನು? ಹೆಸರು ಬದಲಾವಣೆಯಿಂದ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬರಲ್ಲ. ಜಿಲ್ಲೆ ಅಭಿವೃದ್ಧಿ ಪಡಿಸಿದ್ರೆ ಬಂಡವಾಳ ಹೂಡಿಕೆ ಮಾಡೋರು ತನ್ನಿಂದ ತಾನೇ ಬರ್ತಾರೆ. ಸರ್ಕಾರ ಅದನ್ನು ಅರ್ಥ ಮಾಡಿಕೊಳ್ಳಬೇಕು. ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆ ಬೇಡ ಎಂದು ತಿಳಿಸಿದರು.

ರಾಜ್ಯದ ಕಷ್ಟ ವಿಚಾರಿಸಲು ಮೋದಿ ಬರಲಿಲ್ಲ

ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಇದ್ದಾಗ ಕಷ್ಟ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿಲ್ಲ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಮೋದಿ ಅವರ ಎರಡು ದಿನಗಳ ಪ್ರವಾಸ ಸಹ ರಾಜ್ಯಕ್ಕೆ ಅನುಕೂಲ ಮಾಡಿಕೊಡಲು ಆಗಿರಲಿಲ್ಲ, ಮುಖ್ಯಮಂತ್ರಿಗೆ ಯಾವುದೇ ಭರವಸೆ ನೀಡದೆ ಕಳುಹಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್​ಸಿಆರ್ ಬಗ್ಗೆ ಹೇಳುವುದಕ್ಕೆ ರಾಜ್ಯಕ್ಕೆ ಬಂದಿದ್ದರು.

ಆದ್ದರಿಂದಲೇ ಸಿದ್ದಗಂಗಾ ಮಠದಲ್ಲಿಯೂ ಮಕ್ಕಳ ಎದುರಿಗೆ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ ಎಂದರು. ಮೋದಿ ತಮ್ಮ ಸಾಧನೆಗಳನ್ನು ಎಲ್ಲಿಯೂ ಹೇಳುವುದಿಲ್ಲ. ಏಕೆಂದರೆ ಅವರಲ್ಲಿ ಹೇಳಿಕೊಳ್ಳುವ ಸಾಧನೆಗಳಿಲ್ಲ. ಆದ್ದರಿಂದ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳನ್ನು ಸದಾ ಲೇವಡಿ ಮಾಡುವ ಮೂಲಕ ಜನರ ಚಿತ್ತವನ್ನು ಬೇರೆಡೆ ತಿರುಗಿಸುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಮಹಾರಾಷ್ಟದಲ್ಲಿ ಕಾಂಗ್ರೆಸ್​ನಿಂದ ಯಾವುದೇ ಗೊಂದಲ ಇಲ್ಲ, ಎನ್​ಸಿಪಿ ಹಾಗೂ ಶಿವಸೇನೆಯಲ್ಲಿ ಸ್ವಲ್ಪ ಗೊಂದಲಗಳಿವೆ. ಅವು ಕಾಲಕ್ರಮೇಣ ಸರಿಯಾಗಲಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net