

ಬೆಂಗಳೂರು: ಜೆಡಿಎಸ್ ಸಿದ್ಧಾಂತಕ್ಕೆ ಬಿಜೆಪಿ ಒಪ್ಪಿದೆಯೋ? ಬಿಜೆಪಿ ಸಿದ್ದಾಂತಕ್ಕೆ ಜೆಡಿಎಸ್ ಒಪ್ಪಿದೆಯೋ? ಇದಕ್ಕೆ ಉತ್ತರ ಸಿಕ್ಕಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಉದ್ದೇಶ ಜೆಡಿಎಸ್ ಮುಗಿಸುವುದು. ಮೋದಿ ಅವರು ಸಭೆ ಮಾಡಿದಾಗ ಜೆಡಿಎಸ್ ತೆಗೆಯಲು ಹೇಳಿದ್ದರು. ಅದೇ ಆಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಜತೆಗೆ ಹೋಗುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಮದುವೆ ಬಹಿರಂಗವಾಗಿ ಆಗಿಲ್ಲ. ನಾಲ್ಕು ಜನ ಹೋಗಿ ಆಗಿರುವುದು. ದೇವೇಗೌಡರು ನಮ್ಮ ನಾಯಕರು ಅವರು ಎಂದು ಒಪ್ಪಿಕೊಳ್ಳುತ್ತಾರಾ? ಅದನ್ನೆಲ್ಲ ಒಪ್ಪಿದರೆ ಮುಂದೆ ಪಕ್ಷದ ವೇದಿಕೆಯಲ್ಲಿ ಕುಳಿತು ಮಾತನ್ನಾಡುತ್ತೇವೆ ಎಂದು ತಿಳಿಸಿದರು.
ಪಕ್ಷದಲ್ಲಿ ನಿಲುವು ತೆಗೆದುಕೊಳ್ಳಬೇಕು ಅಂದರೆ ರಾಜ್ಯಾಧ್ಯಕ್ಷ ಮುಖ್ಯ ಅಲ್ಲವೇ? ಶಾಸಕಾಂಗ ಪಕ್ಷದ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಹೇಗೆ? ಫಾರೂಕ್ ಅವರನ್ನು ರಾಜಕಾರಣಿ ಅಂತೀರಾ? ಎಂದು ಕುಟುಕಿದರು.
ಕಾಂಗ್ರೆಸ್ ಸೇರುವ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಚಿಂತನೆ ಇಲ್ಲ. ನಾನು ಎಲೆಕ್ಷನ್‌ಗೆ ನಿಲ್ಲಲ್ಲ ಎಂದಿದ್ದೇನೆ. ಮಹಾತ್ಮ ಗಾಂಧಿ ಎಲೆಕ್ಷನ್‌ಗೆ ನಿಂತರೂ ಗಾಂಧಿ ನಿಂತಿದ್ದಾರೆ ಎನ್ನುವುದಕ್ಕೆ 20 ಕೋಟಿ ಬೇಕು ಎಂದು ಬೇಸರ ಹೊರ ಹಾಕಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಬರಬಹುದು? ಎಂಬ ಪ್ರಶ್ನೆಗೆ ಕಾದು ನೋಡಬೇಕು. ಬಿಜೆಪಿಗೆ ಕಡಿಮೆ ಸ್ಥಾನ ಬಂದರೆ ಜೆಡಿಎಸ್ ಜತೆಗೆ ಹೋಗಿದ್ದಕ್ಕೆ ಇಷ್ಟೆಲ್ಲ ಆಯಿತು ಎಂದು ಬಿಜೆಪಿಯವರು ದೂರುತ್ತಾರೆ. ಈ ಮೈತ್ರಿ ಲೋಕಸಭಾ ಚುನಾವಣೆಗಿಂತ, ವಿಧಾನಸಭಾ ಚುನಾವಣೆಯ ಮೇಲೆ ಹೆಚ್ಚಿನ ಹೊಡೆತ ಬೀಳಲಿದೆ ಎಂದರು.
ಕರ್ನಾಟಕದಲ್ಲಿ ರಾಕ್ಷಸ ಸರ್ಕಾರ ಇದೆ ಎಂಬ ಪ್ರತಾಪ ಸಿಂಹ ಹೇಳಿಕೆ ಬಗ್ಗೆ ಬಜರಂಗದಳ ಯಾರು? ಇದು ಯಾವ ಸಂಸ್ಕೃತಿ? ಈ ಹೇಳಿಕೆ ಶೋಭೆ ತರುವುದಿಲ್ಲ. ಶಿವಾಜಿ, ಮಹಾತ್ಮ ಗಾಂೀಧಿಜಿ, ಟಿಪ್ಪು ಸುಲ್ತಾನ್ ಕಟೌಟ್ಗಳನ್ನು ಹಾಕಿದರೆ ತಪ್ಪೇ? ಟಿಪ್ಪು, ಔರಂಗಜೇಬ್ ಯಾರು ಎಂದು ಗೊತ್ತೆ? ಎಂದು ಇಬ್ರಾಹಿಂ ಪ್ರಶ್ನಿಸಿದರು.