ಕೋವಿಡ್​ ರೋಗಿಗಳಿಗೆ ಮಲೇರಿಯಾ ಮದ್ದು; ಪರೀಕ್ಷೆ ಮುಂದುವರಿಸಿದ ವಿಶ್ವ ಆರೋಗ್ಯ ಸಂಸ್ಥೆ

who-new
Published on

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕರೊನಾ ಸೋಂಕಿತರ ಮೇಲೆ ಮಲೇರಿಯಾ ನಿವಾರಕ ಔಷಧ ಭಾರತದ ಹೈಡ್ರೊಕ್ಸಿಕ್ಲೋರೊಕ್ವಿನ್​ (ಎಚ್​ಸಿಕ್ಯು) ಮಾತ್ರೆಗಳ ಕ್ಲಿನಿಕಲ್​ ಟ್ರಯಲ್​ ಆರಂಭಿಸಿದೆ. ಕರೊನಾ ತಡೆಗಟ್ಟುವಲ್ಲಿ ಈ ಮಾತ್ರೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದನ್ನು ಅಧಿಕೃತವಾಗಿ ಸಂಶೋಧನೆ ನಡೆಸಲಿದೆ.

ಕೋವಿಡ್​ ಆರಂಭವಾದ ದಿನದಿಂದಲೂ ಮಲೇರಿಯಾ ಮಾತ್ರಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಇದು ವೈರಸ್​ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದ್ದರಿಂದ ವಿಶ್ವದ ಹಲವು ದೇಶಗಳು ಇದನ್ನು ಬಳಸಲು ಆರಂಭಿಸಿದ್ದವು. ಕೋವಿಡ್​ನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಮಾತ್ರೆ ನೀಡಲಾಗುತ್ತಿತ್ತು. ಸ್ವತಃ ಭಾರತವೇ 120ಕ್ಕೂ ಅಧಿಕ ದೇಶಗಳಿಗೆ ನೆರವಿನ ರೂಪದಲ್ಲಿ ಈ ಮಾತ್ರಗಳನ್ನು ರವಾನಿಸಿತ್ತು.

ವೈದ್ಯರ ಸಲಹೆ ಇಲ್ಲದಿದ್ದರೂ ಸೋಂಕು ತಡೆಗಾಗಿ ಈ ಮಾತ್ರೆ ಸೇವಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ಈ ಮಾತ್ರೆಯ ವ್ಯಾಪಕ ಬಳಕೆಗೆ ನಿದರ್ಶನವಾಗಿತ್ತು.

ಆದರೆ, ಈ ಮಾತ್ರೆಯಿಂದ ಅಡ್ಡಪರಿಣಾಮಗಳು ಹೆಚ್ಚಾಗುತ್ತಿವೆ. ಅಲ್ಲದೇ, ಮಾರಣಾಂತಿಕವಾಗಿಯೂ ಪರಿಣಮಿಸುತ್ತಿದೆ ಎಂದು ಲ್ಯಾನ್ಸೆಟ್​ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿತ್ತು, ಇದರಿಂದಾಗಿ ಎಚ್​ಸಿಕ್ಯೂ ಬಳಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಜತೆಗೆ, ಈ ಕುರಿತು ನಡೆಸಲಾಗುತ್ತಿದ್ದ ಕ್ಲಿನಿಕಲ್​ ಟ್ರಯಲ್​ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಗಿತಗೊಳಿಸಿತ್ತು.

ಆದರೆ, ಎಚ್​ಸಿಕ್ಯು ಅಡ್ಡ ಪರಿಣಾಮದ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಪಾರದರ್ಶಕತೆ ಹಾಗೂ ಮಾಹಿತಿ ವಿಶ್ಲೇಷಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಔಷಧದ ಮೇಲಿನ ಸಂಶೋಧನೆಯನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೋಸ್​ ಅಡಾನಾಮ್​ ತಿಳಿಸಿದ್ದಾರೆ.

ಜಗತ್ತಿನಾದ್ಯಂತ 35ಕ್ಕೂ ಅಧಿಕ ದೇಶಗಳ 400ಕ್ಕೂ ಆಸ್ಪತ್ರೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಲಿಡಾರಿಟಿ ಟ್ರಯಲ್​ ನೆಡೆಸಲಾಗುತ್ತಿದೆ. ಸದ್ಯ ಕರೊನಾಗೆ ಲಸಿಕೆ ಇಲ್ಲದಿರುವುದರಿಂದ ಎಚ್​ಸಿಕ್ಯೂ ಸೇರಿ ಲಭ್ಯವಿರುವ ಹಲವು ಔಷಧಗಳು ಕೋವಿಡ್​ ತಡೆಗಟ್ಟುವಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಈ ಸಾಲಿಡಾರಿಟಿ ಟ್ರಯಲ್​ ಮೂಲಕ ಕಂಡುಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net