

ಜಿನೇವಾ: ಚೀನಾದಿಂದ ಹರಡಲಾರಂಭಿಸಿರುವ ಕೊರೊನಾ ವೈರಸ್ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ. COVID-19 ಎಂಬ ವೈರಾಣುವಿನಿಂದ ಪಾರಾಗಲು ವೈಯಕ್ತಿಕವಾಗಿ ತೆಗೆದುಕೊಳ್ಳಬಹುದಾದ 10 ಮುಂಜಾಗ್ರತಾ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದೆ.
ನೀವೆಲ್ಲಿ ಜೀವಿಸುತ್ತಿದ್ದೀರಿ, ನಿಮ್ಮ ವಯಸ್ಸು ಮತ್ತು ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಮೇಲೆ ಕೊರೊನಾ ವೈರಾಣು ಸೋಂಕು ತಗಲುವ ಅಪಾಯವನ್ನು ಲೆಕ್ಕಹಾಕಬಹುದು. ಈ ನಿಟ್ಟಿನಲ್ಲಿ ಡಬ್ಲ್ಯುಎಚ್ಒ ಸಾಮಾನ್ಯ ಮಾರ್ಗದರ್ಶಿ ಸೂತ್ರವನ್ನು ಪ್ರಕಟಿಸಿದ್ದು, ಅದನ್ನು ಪಾಲಿಸಬಹುದು. ಜತೆಗೆ ನಿಮ್ಮ ಸರ್ಕಾರ, ಸ್ಥಳೀಯಾಡಳಿತ ಸಂಸ್ಥೆಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಫ್ಯಾಮಿಲಿ ಡಾಕ್ಟರ್ಗಳು ನೀಡುವ ಸಲಹೆಯನ್ನೂ ಪಾಲಿಸಬಹುದು ಎಂದು ಡಬ್ಲ್ಯುಎಚ್ಒ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನಮ್ ಘಿಬ್ರೇಯೆಸಸ್ ಹೇಳಿದ್ದಾರೆ.
1. ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರು ಬಳಸಿ ಯಾವಾಗಲೂ ಕೈಗಳನ್ನು ತೊಳೆಯಬೇಕು. ಕಲುಷಿತ ಮೇಲ್ಮೈ ಸ್ಪರ್ಶಿಸಿದರೆ ಅಥವಾ ಸೋಂಕುಪೀಡಿತ ಜನರನ್ನು ಮುಟ್ಟಿದರೆ ವೈರಾಣು ಸೋಂಕು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಪದೇಪದೆ ಕೈಗಳನ್ನು ತೊಳೆಯುತ್ತಿದ್ದರೆ ಈ ಅಪಾಯದಿಂದ ಪಾರಾಗಬಹುದು.
2. ನೆಲ ಮತ್ತು ಇತರೆ ಮೇಲ್ಮೈಗಳನ್ನು ನಿಯತವಾಗಿ ಸ್ವಚ್ಛಗೊಳಿಸಿ ಸೋಂಕುರಹಿತಗೊಳಿಸಬೇಕು. ಉದಾಹರಣೆಗೆ ಅಡುಗೆ ಮನೆ ಮತ್ತು ಕಚೇರಿಯಲ್ಲಿ ಕುಳಿತುಕೊಳ್ಳುವ ಬೆಂಚ್, ಟೇಬಲ್ಗಳು ಮುಂತಾದ ಪೀಠೋಪಕರಣಗಳನ್ನು ಈ ರೀತಿ ಸ್ವಚ್ಛಗೊಳಿಸಬೇಕು.
3. COVID-19 ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು. ಆದರೆ, ತಿಳಿವಳಿಕೆ ಮೂಡಿಸಲು ಬಳಸುವ ಮಾಹಿತಿಗಳನ್ನು ಅಧಿಕೃತ ಮೂಲಗಳಿಂದ ಅಂದರೆ, ಡಬ್ಯುಎಚ್ಒ, ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಪಡೆದಿರಬೇಕು. ಸೋಂಕಿನ ಗುಣಲಕ್ಷಣಗಳಿವು- ಬಹುತೇಕರಿಗೆ ಜ್ವರ, ಒಣಕೆಮ್ಮು ಶುರುವಾಗುತ್ತದೆ. ಬಹುತೇಕ ಜನರಿಗೆ ಸಣ್ಣದಾಗಿ ಸೋಂಕು ಇದ್ದು, ಯಾವುದೇ ವಿಶೇಷ ಚಿಕಿತ್ಸೆ ಇಲ್ಲದೇ ಗುಣಮುರಾಗುತ್ತಾರೆ.
4. ಜ್ವರ ಅಥವಾ ಕೆಮ್ಮು ಇದ್ದಾಗ ಪ್ರಯಾಣ ಮಾಡುವುದು ತರವಲ್ಲ. ವಿಮಾನದಲ್ಲಿರುವಾಗ ಅಸ್ವಸ್ಥರಾದರೆ ಕೂಡಲೇ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿ. ಮನೆಯಲ್ಲಾದರೆ ಆರೋಗ್ಯ ಪರಿಣತರ ನೆರವು ಪಡೆಯಿರಿ.
5. ಕೆಮ್ಮು ಅಥವಾ ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂವನ್ನು ಹಿಡಿದುಕೊಳ್ಳಿ. ಬಳಸಿದ ಟಿಶ್ಯೂಗಳನ್ನು ಕಸದ ತೊಟ್ಟಿಗೆ ಹಾಕಬಹುದು. ಕರವಸ್ತ್ರವಾದರೆ ಬಿಸಿನೀರಿನಲ್ಲಿ ತೊಳೆಯಬಹುದು. ಅದೇ ರೀತಿ, ಕೈಗಳನ್ನು ಮೇಲೆ ತಿಳಿಸಿದಂತೆ ಸ್ವಚ್ಛಗೊಳಿಸುವುದು ಅಗತ್ಯ.
6. ಅರವತ್ತು ವರ್ಷ ಮೇಲ್ಪಟ್ಟವರಾದರೆ ಅಥವಾ ಕಾರ್ಡಿಯೋವಾಸ್ಕುಲರ್ ಡಿಸೀಸ್, ಉಸಿರಾಟದ ಸಮಸ್ಯೆ ಅಥವಾ ಮಧುಮೇಹ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭ, ಸನ್ನಿವೇಶಗಳಲ್ಲಿ ಸೋಂಕು ಪೀಡಿತರ ಜತೆಗೆ ವ್ಯವಹರಿಸುವಾಗ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು.
7. ಅಸ್ವಸ್ಥತೆ ಕಾಡುವವರೆಲ್ಲ ಮನೆಯಲ್ಲಿ ಉಳಿದುಕೊಂಡು ವೈದ್ಯರು ಮತ್ತು ಪರಿಣತರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ಅವರಿಗೆ ಅಸ್ವಸ್ಥತೆಯ ಗುಣಲಕ್ಷಣಗಳನ್ನು ವಿವರಿಸಬೇಕು. ಈ ರೀತಿ ಮಾಡುವುದರಿಂದ ವೈದ್ಯರು ಅಥವಾ ಪರಿಣತರಿಗೆ ಚಿಕಿತ್ಸೆ ಯಾವ ರೀತಿ ಆರಂಭಿಸಬೇಕು ಎಂಬುದರ ಸ್ಪಷ್ಟತೆ ಮೂಡುತ್ತದೆ. ಈ ಮುಂಜಾಗ್ರತಾ ಕ್ರಮ ಎಲ್ಲರನ್ನೂ ರಕ್ಷಿಸುತ್ತದೆ.
8. ಸೋಂಕು ತಗಲಿದಾಗ ಮನೆಯಲ್ಲೇ ಇದ್ದು ಬಿಡಿ. ಕುಟುಂಬದ ಇತರೆ ಸದಸ್ಯರ ಜತೆಗೆ ಊಟ, ತಿಂಡಿ ಮಾಡಬೇಡಿ. ಪ್ರತ್ಯೇಕವಾಗಿ ಊಟ ತಿಂಡಿ ಮಾಡಿ. ಪಾತ್ರೆಗಳನ್ನೂ ಪ್ರತ್ಯೇಕವಾಗಿ ಇರಿಸಿ. ಮಲಗುವಾಗಲೂ ಅಷ್ಟೇ ಇತರರಿಂದ ದೂರ, ಪ್ರತ್ಯೇಕವಾಗಿ ಮಲಗಿ ನಿದ್ರಿಸಿ.
9. ಉಸಿರಾಟದ ತೊಂದರೆ ಕಾಣಿಸಿದರೆ ಕೂಡಲೇ ಡಾಕ್ಟರ್ಗೆ ಕರೆ ಮಾಡಿ ಮತ್ತು ಕೂಡಲೇ ಸರಿಯಾದ ಚಿಕಿತ್ಸೆ ಪಡೆಯಬೇಕು.
10. ಸೋಂಕುಪೀಡಿತ ಪ್ರದೇಶದಲ್ಲಿ, ದೇಶದಲ್ಲಿ ವಾಸವಿದ್ದರೆ ಎಲ್ಲರೂ ಆತಂಕಿತರಾಗಿ ಇರುವುದು ಸಹಜ. ಸಮುದಾಯದ ಆರೋಗ್ಯಕ್ಕಾಗಿ, ಹಿತಕ್ಕಾಗಿ ಏನು ಮಾಡಬಹುದು ಎಂದು ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗುವುದು ಅಗತ್ಯ. ಈ ಬಗ್ಗೆ ನಿಮ್ಮ ನಿಮ್ಮ ಕೆಲಸದ ಸ್ಥಳ, ಶಾಲೆ ಅಥವಾ ಧಾರ್ಮಿಕ ಮಂದಿರಗಳಲ್ಲಿ ಮಾತುಕತೆ ನಡೆಸುವುದು ಒಳಿತು. ಸ್ವಚ್ಛತಾ ಅಭಿಯಾನ ಶುರುವಾಗಬೇಕಾದ್ದು ವೈಯಕ್ತಿಕವಾಗಿ ನಮ್ಮಿಂದಲೇ-ನಿಮ್ಮಿಂದಲೇ. (ಏಜೆನ್ಸೀಸ್)