

ಕರೊನಾ ವೈರಸ್ ಬಾರದಂತೆ ತಡೆಯಬೇಕು ಎಂದರೆ ಇಂಥದ್ದನ್ನು ಸೇವಿಸಬೇಕು..ಅಂಥದ್ದನ್ನು ಮುಟ್ಟಬಾರದು, ಹೀಗೆ ಮಾಡಬೇಕು..ಹಾಗೆ ಮಾಡಬೇಕು ಎಂಬಿತ್ಯಾದಿ ವಿವಿಧ ಸಲಹೆ ಸೂಚನೆಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಿ ತುಳುಕುತ್ತಿವೆ.
ಕೆಲವರಂತೂ ವಿಶ್ವ ಆರೋಗ್ಯ ಸಂಸ್ಥೆ (WHO) ಯ ಲೋಗೋ ಹಾಕಿಯೇ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಮನಸಿಗೆ ಬಂದಂತಹ ವಿಚಾರಗಳನ್ನು, ಸಲಹೆಗಳನ್ನು ಡಬ್ಲ್ಯೂಎಚ್ಒ ಹೇಳಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.
ಆದರೆ ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಲಾಗುವ ಮನೆ ಮದ್ದು, ಅನಧಿಕೃತ ಪೋಸ್ಟ್ಗಳನ್ನು ನಂಬಬಾರದು ಎಂಬುದಕ್ಕೆ ಈ ಸ್ಟೋರಿ ಸಾಕ್ಷಿ.
ಫೇಸ್ಬುಕ್ ಬಳಕೆದಾರರೋರ್ವರು WHO ದ ಲೋಗೋ ಇರುವ ಒಂದು ಪೋಸ್ಟ್ ಹಾಕಿ, ಬೇಕರಿ ತಿನಿಸುಗಳನ್ನು ತಿನ್ನುವುದರಿಂದ ಕರೊನಾ ಬಲುಬೇಗನೇ ಬರುತ್ತದೆ ಎಂದು ಪ್ರತಿಪಾದಿಸಿದ್ದರು.
ಈಗಲೇ ಬೇಕರಿ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿ. ಈ ತಿನಿಸುಗಳು ತೊಳೆದು ತಿನ್ನುವಂಥವುಗಳಲ್ಲ. ಹಾಗಾಗಿ ಈ ತಿಂಡಿಗಳು ಬಹುಬೇಗ ವೈರಸ್ ಸೋಂಕಿಗೆ ಒಳಗಾಗಿ ಕಲುಷಿತಗೊಂಡಿರುತ್ತವೆ ಎಂದು ಬರೆದುಕೊಂಡಿದ್ದ ಒಂದು ಪೋಸ್ಟ್ ಸಿಕ್ಕಾಪಟೆ ವೈರಲ್ ಆಗುತ್ತಿತ್ತು. ಡಬ್ಲ್ಯೂಎಚ್ಒದ ಲೋಗೋದಡಿ ಪ್ರಕಟಿಸಿದ್ದ ಈ ಸಾಲುಗಳನ್ನು ನೋಡಿದರೆ ಎಂಥವರಿಗಾದರೂ ಅದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂದು ಅನ್ನಿಸುತ್ತದೆ.
ಆದರೆ ಇಂಡಿಯಾ ಟುಡೆ ಆ್ಯಂಟಿ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಗೊತ್ತಾಗಿದ್ದು ಬೇರೆಯದೇ ಸತ್ಯ. ಕರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಬೇಕರಿ ತಿಂಡಿಗಳನ್ನು ತಿನ್ನಬೇಡಿ ಎಂದು ಡಬ್ಲ್ಯೂಎಚ್ಒ ಯಾವುದೇ ಸಲಹೆಯನ್ನೂ ನೀಡಿಲ್ಲ.
ಹಾಗೇ ಬೇಕರಿಯಲ್ಲಿರುವ ಆಹಾರಗಳ ಮೇಲೆ ಕರೊನಾ ವೈರಸ್ಗಳು ಸುಲಭಕ್ಕೆ ಬಂದು ಅಂಟಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ಪುರಾವೆಯೂ ಇಲ್ಲ, ಸಾಬೀತೂ ಆಗಿಲ್ಲ ಎಂಬ ವಿಚಾರ ಫ್ಯಾಕ್ಟ್ಚೆಕ್ನಲ್ಲಿ ಬಯಲಾಗಿದೆ.
ಆದಾಗ್ಯೂ ಕೂಡ ಡಬ್ಲ್ಯೂಎಚ್ಒದ ಆರೋಗ್ಯ ತಜ್ಞರು ನೊವೆಲ್ ಕರೊನಾದಿಂದ ಕಾಪಾಡಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ಅದರಲ್ಲಿ ಎಲ್ಲೂ ಬೇಕರಿ ತಿಂಡಿಗಳು ಕರೊನಾ ವೈರಸ್ನಿಂದ ಬಹುಬೇಗನೇ ಕಲುಷಿತಗೊಳ್ಳುತ್ತವೆ. ಹಾಗಾಗಿ ತಿನ್ನಬೇಡಿ ಎಂದು ಹೇಳಿದ ಉಲ್ಲೇಖವಿಲ್ಲ.
ಆಹಾರಗಳಿಂದ ಕರೊನಾ ವೈರಸ್ ಪ್ರಸರಣ ಆಗುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಆದರೆ ಯಾರಾದರೂ ಕರೊನಾ ಸೋಂಕಿತರು ತಮ್ಮ ಕಣ್ಣು, ಮೂಗು, ಬಾಯಿಯನ್ನು ಸ್ಪರ್ಶಿಸಿ, ತಿಂಡಿಯನ್ನು ಅಥವಾ ತಿಂಡಿಯ ಪ್ಯಾಕೆಟ್ನ್ನು ಮುಟ್ಟಿ, ಬಳಿಕ ನಾವದನ್ನು ತಿಂದರೆ ನಮಗೂ ಕರೊನಾ ಬರಬಹುದು ಎಂದು ಯುಎಸ್ನ ಆಹಾರ ಮತ್ತು ಔಷಧ ಸಂಸ್ಕರಣಾ ಕೇಂದ್ರ ತಿಳಿಸಿದೆ.
ಆಹಾರಗಳ ಪ್ಯಾಕೇಟ್ನ ಮೇಲ್ಮೈನ ಮೇಲೆ ಕರೊನಾ ವೈರಸ್ ಸುದೀರ್ಘ ಕಾಲದವರೆಗೆ ಇರಲಾರದು. ಹಾಗಾಗಿ ಅವುಗಳಿಂದ ಸೋಂಕು ತಗುಲುವ ಪ್ರಮಾಣ ತೀರ ಕಡಿಮೆ ಎಂದು ಸಿಡಿಸಿ ಹೇಳಿದೆ.(ಏಜೆನ್ಸೀಸ್)