

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅರ್ಹ ನಾಯಕರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದವರು ಯಾರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶವಿದ್ದರೂ ಅವರ ಹಿರಿತನವನ್ನು ಬದಿಗೆ ಸರಿಸಿ ಸಿಎಂ ಸ್ಥಾನ ನೀಡದೆ ವಂಚಿಸಿದ್ದು ಕಾಂಗ್ರೆಸ್ ಅಲ್ಲವೇ? ಎಂದು ಕೇಳಿದ್ದಾರೆ. ಖರ್ಗೆ ಅವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿ ಎಂದು ಘೊಷಿಸಿ ಎಂದು ನೀಡಿದ್ದ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಹತಾಶೆಯಿಂದ ಸಮರ್ಥನೀಯವಲ್ಲದ ಉತ್ತರ ನೀಡಿದ್ದೀರಿ ಎಂದು ಸಿಎಂಗೆ ಕುಟುಕಿದ್ದಾರೆ. ನಿಮ್ಮ ಅಹಿಂದ ಕಾಳಜಿ ಏನೆಂಬುದು ನಾಡಿನ ಸಮುದಾಯಗಳಿಗೆ ಸ್ಪಷ್ಟವಾಗಿ ಗೊತ್ತಿದೆ, ಯಾವುದೇ ಕ್ಷಣದಲ್ಲಿ ಅದು ಸ್ಪೋಟಗೊಳ್ಳಲಿದೆ, ಅದಕ್ಕಾಗಿ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ನಲ್ಲಿ ಅಸಡ್ಡೆಗೆ ಒಳಗಾಗಿದ್ದ ಛಲವಾದಿ ನಾರಾಯಣಸ್ವಾಮಿ ಅವರನ್ನು ಬಿಜೆಪಿಯ ಪ್ರವೇಶ ದ್ವಾರದಲ್ಲೇ ಸ್ವಾಗತದೊಂದಿಗೆ ಪಕ್ಷದ ಸಂಘಟನೆಯ ಮಹತ್ವದ ಹುದ್ದೆ ನೀಡಲಾಯಿತು. ವಿಧಾನ ಪರಿಷತ್ತಿಗೆ ಕಳುಹಿಸಿ ಸಾಂವಿಧಾನಿಕ ಹುದ್ದೆಯಾದ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಲಾಗಿದೆ. ಅವರ ಅರ್ಹತೆ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಗೌರವಿಸಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಗೋವಿಂದ ಕಾರಜೋಳ ಹಿರಿಯರಿದ್ದಾರೆ, ಉಪಮುಖ್ಯಮಂತ್ರಿ ಗಳಾಗಿದ್ದವರು, ಪ್ರಸ್ತುತ ಸಂಸದರಾಗಿದ್ದಾರೆ. ಭವಿಷ್ಯದಲ್ಲಿ ಅವರು ಅತ್ಯುನ್ನತ ಸ್ಥಾನಕ್ಕೇರುವ ಅವಕಾಶ ಗಳ ಬಾಗಿಲು ತೆರೆದೇ ಇದೆ ಎಂದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯಾರಿಗೆ ನ್ಯಾಯ ಕೊಟ್ಟರು ಎಂದು ಯಾರಿಗೂ ಗೊತ್ತಿಲ್ಲ. ಅವರ ಗೊತ್ತಿಲ್ಲದ ಸಾಧನೆಗೆ ಎಐಸಿಸಿ ಹಿಂದುಳಿದ ವರ್ಗಗಳ ಸಮಿತಿಯಿಂದ ನ್ಯಾಯಯೋಧ ಬಿರುದು ಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ. | ಬಸವರಾಜ ಬೊಮ್ಮಾಯಿ ಸಂಸದ