ಬಾಂಗ್ಲಾದೇಶದಿಂದ ಬಂದು ಇಟ್ಟಿಗೆ ಗೂಡಿನಲ್ಲಿ ದುಡಿಯುತ್ತಿದ್ದ ಶಹಜಹಾನ್ ಶೇಖ್ ಸಂದೇಶ್‌ಖಾಲಿಯ ಡಾನ್ ಆಗಿದ್ದು ಹೇಗೆ?

TMC
Published on

ನವದೆಹಲಿ: ಪಡಿತರ ಹಗರಣ ಮತ್ತು ಸಂದೇಶ್‌ಖಾಲಿ ಪ್ರಕರಣದ ಆರೋಪದ ನಡುವೆ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ಕೊನೆಗೂ ಬಂಗಾಳ ಪೊಲೀಸರ ಬಲೆಗೆ ಬಿದ್ದಿದ್ದಾರೆ. 55 ದಿನಗಳ ಕಾಲ ಅಧಿಕಾರಿಗಳಿಂದ ತಪ್ಪಿಸಿಕೊಂಡ ಶೇಖ್, ಸಂದೇಶ್​​​ಖಾಲಿ ಪ್ರದೇಶದಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದಾರೆ.

ಪಡಿತರ ವಿತರಣೆ ಹಗರಣದ ಹೊರತಾಗಿ, ಶಹಜಹಾನ್ ಶೇಖ್ ಅವರು 10,000 ಕೋಟಿ ರೂ.ಮೌಲ್ಯದ ಭೂಕಬಳಿಕೆ ಆರೋಪವನ್ನೂ ಹೊತ್ತಿದ್ದಾರೆ. ಮೊದಲಿಗೆ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಶಹಜಹಾನ್ ಶೇಖ್, ಆರಂಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಬಹಳ ಬೇಗ ಸಾಕಷ್ಟು ಸಂಪತ್ತು ಗಳಿಸಿದರು. ಸಂದೇಶ್​​​ಖಾಲಿಯಲ್ಲಿ ಕುಖ್ಯಾತಿ ಪಡೆದರು.

ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತಂಡವು ಅವರನ್ನು ಬಂಧಿಸಲು ಹೋದಾಗ ಅವರ ಮೇಲೆ ಶೇಖ್ ಬೆಂಬಲಿಗರು ದಾಳಿ ಮಾಡಿದರು, ಇದರಿಂದಾಗಿ ಹಲವಾರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ.

ಪಡಿತರ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿಕಟವರ್ತಿ ಶೇಖ್ ಎಂದು ಪರಿಗಣಿಸಲಾಗಿದೆ. ಮಲ್ಲಿಕ್ ಬಂಧನದ ನಂತರ, ಶೇಖ್ ಇಡಿ ಗುರಿಗೆ ಒಳಗಾದರು. ಬಾಂಗ್ಲಾದೇಶದಿಂದ ಬಂದ ಶೇಖ್ ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಕ್ರಮೇಣ ಭಯೋತ್ಪಾದನೆಯ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾದೇಶದ ಗಡಿಯ ಸಮೀಪದಲ್ಲಿರುವ ಸಂದೇಶ್​​​ಖಾಲಿ ಅವರ ಭದ್ರಕೋಟೆಯಾಯಿತು. ಆರಂಭದಲ್ಲಿ ಗದ್ದೆ ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಕಾರ್ಮಿಕರನ್ನು ಸಂಘಟಿಸಿ ಒಕ್ಕೂಟವನ್ನು ರಚಿಸಿದರು. ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಮಲ್ಲಿಕ್ ಬೆಂಬಲದೊಂದಿಗೆ ಆಡಳಿತ ಪಕ್ಷಕ್ಕೆ ಪ್ರವೇಶ ಪಡೆದರು.

ಬಂಗಾಳದಲ್ಲಿ ರಾಜಕೀಯ ಬದಲಾವಣೆಯ ಅಲೆಯೊಂದಿಗೆ ಶೇಖ್ ಆಡಳಿತ ಪಕ್ಷದಿಂದ ದೂರವಾಗತೊಡಗಿದರು. 2011 ರಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವರು 2013 ರಲ್ಲಿ ಟಿಎಂಸಿ ಸೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net