ರಮೇಶ್ ಜಾರಕಿಹೊಳಿ ರಾಜೀನಾಮೆ: ಜಲ ಸಂಪನ್ಮೂಲ ಖಾತೆ ಮೇಲೆ ಯಾರ ಕಣ್ಣು?

Ramesh Jarakiholi
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಜಲ ಸಂಪನ್ಮೂಲ ಖಾತೆ ಮೇಲೆ ಹಿರಿಯ, ಪ್ರಭಾವಿ ಸಚಿವರು ಕಣ್ಣಿಟ್ಟಿದ್ದು, ಬೇಡದ ಖಾತೆಯನ್ನು ಒಪ್ಪಿಕೊಂಡಿರುವ ಕೆಲವರಲ್ಲಿ ‘ಜಲ ಸಂಪನ್ಮೂಲ’ದ ಆಸೆ ಚಿಗುರಿದ್ದು, ಒಂದು ಕೈ ನೋಡಿ ಬಿಡೋಣವೆಂಬ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ತಿಳಿದಿದೆ ಬಂದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿಯಿರುವ ಖಾತೆಗಳ ಜತೆಗೆ ಜಲ ಸಂಪನ್ಮೂಲ ಸೇರಿಕೊಂಡಿದ್ದು, ಕೆಲಸ ಭಾರ ಮತ್ತು ಒತ್ತಡ ಹೆಚ್ಚಿದೆ. ಯೋಜನೆಗಳ ಅನುಷ್ಠಾನ, ಆರ್ಥಿಕ ವರ್ಷಾಂತ್ಯದ ಅನುದಾನ ಬಳಕೆ. ಅದರಲ್ಲೂ ಮಹತ್ವದ ಜಲ ವಿವಾದಕ್ಕೆ ಸಂಬಂಧಿಸಿದ ಸಿದ್ಧತೆಗಳಾಗಬೇಕಿದೆ. ಇದೇ ಕಾರಣ ಮುಂದಿಟ್ಟು ಹಿರಿಯ ಸಚಿವರ ಪೈಕಿ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಸಿಎಂ ಯಡಿಯೂರಪ್ಪ ಎದುರು ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಲ ವಿವಾದಗಳಿಗೆ ಸಂಬಂಧಿಸಿದ ಸಿದ್ಧತೆಗಳ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಗೆ ಅನೇಕ ಬಾರಿ ಬೊಮ್ಮಾಯಿ ಸಾಥ್ ನೀಡಿದ್ದಿದೆ. ಅಲ್ಲದೆ, ಜಲ ಸಂಪನ್ಮೂಲ ಖಾತೆ ನಿಭಾಯಿಸಿದ ಅನುಭವ ಬೊಮ್ಮಾಯಿ ಜತೆಗಿದೆ. ಗೃಹ ಬದಲಿಗೆ ಜಲ ಸಂಪನ್ಮೂಲ ಖಾತೆ ಕೊಟ್ಟರೆ ಸಾಮರ್ಥ್ಯ ಬಳಕೆಯಾಗುತ್ತದೆ. ಸರ್ಕಾರಕ್ಕೂ ಹೆಸರು ಬರುತ್ತದೆ ಎನ್ನುವ ಸಂದೇಶ ವರಿಷ್ಠರಿಗೆ ರವಾನೆಯಾಗಿದೆ.

ಜಾರಕಿಹೊಳಿ ಪರ ಒತ್ತಡ: ಜಲ ಸಂಪನ್ಮೂಲ ಖಾತೆಯನ್ನು ಜಾರಕಿಹೊಳಿ ಸೋದರರಿಗೆ ಮೀಸಲಿಡುವಂತೆ ಆಪ್ತ ಶಾಸಕರು ಸಿಎಂ ಬಿಎಸ್​ವೈ ಮೇಲೆ ಒತ್ತಡ ಹೇರಿದ್ದಾರೆ. ರಮೇಶ್ ಜಾರಕಿಹೊಳಿ ಕ್ಲೀನ್ ಚಿಟ್ ಪಡೆದ ಬಳಿಕ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಅದೇ ಖಾತೆಯಲ್ಲಿ ಮುಂದುವರಿಸಬೇಕು. ಪ್ರಕರಣದ ತನಿಖೆ, ಇತ್ಯರ್ಥ ವಿಳಂಬವಾಗುವುದಾದರೆ ಸೋದರ ಬಾಲಚಂದ್ರ ಜಾರಕಿಹೊಳಿಗೆ ಖಾತೆ ಕೊಟ್ಟು ಪ್ರಾತಿನಿಧ್ಯದ ಕೊರತೆ ಸರಿದೂಗಿಸಬೇಕೆಂಬ ಬೇಡಿಕೆಯಿಟ್ಟಿದ್ದಾರೆ.

ಕಾದು ನೋಡುವ ತಂತ್ರ: ರಮೇಶ್ ಜಾರಕಿಹೊಳಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದು ಆಪ್ತ ಶಾಸಕರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದಾರೆ. ಖಾತೆಗಳ ಹೊರೆ ಹೆಚ್ಚಾದರೂ ಸರಿ. ಬೆಳಗಾವಿ ಲೋಕಸಭಾ, 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯುವ ತನಕ ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net