ಯಾರು ಈ ತಾರಕಿಶೋರ್ ಪ್ರಸಾದ್ ?

Tarkishore prasad Bihar DCM
Published on

ಪಟನಾ: ಬಿಹಾರದ ಉಪಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ 64 ವರ್ಷದ ತಾರಕಿಶೋರ್ ಪ್ರಸಾದ್​ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಹಿನ್ನೆಲೆಯವರು. ವೈಶ್ಯ ಸಮುದಾಯದ ಕಲ್ವಾರ್ ಎಂಬ ಜಾತಿಗೆ ಸೇರಿದವರು. ಸುಶೀಲ್ ಕುಮಾರ್ ಮೋದಿ ಅವರ ಉತ್ತರಾಧಿಕಾರಿಯಾಗಿ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಆಗಿರುವ ತಾರಕಿಶೋರ್, ಕಟಿಹಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಅವರು ಆರ್​ಜೆಡಿ ನಾಯಕ ರಾಮ್ ಪ್ರಕಾಶ್ ಮೆಹ್ತೋ ಅವರನ್ನು 10,500 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. 2005, 2010, 2015 ಮತ್ತು 2020 ಹೀಗೆ ಸತತ ನಾಲ್ಕು ಅವಧಿಗೆ ಅವರು ಈ ಕ್ಷೇತ್ರದಲ್ಲಿ ಗೆಲವು ಕಂಡಿದ್ದಾರೆ. 2015ರಲ್ಲಿ ಅವರು ಲಾಲು ಮತ್ತು ನಿತೀಶ್ ಅವರ ಪ್ರಚಂಡ ಪ್ರಚಾರದ ಹೊರತಾಗಿಯೂ ಈ ಕ್ಷೇತ್ರದಲ್ಲಿ ಬರೋಬ್ಬರಿ ಶೇಕಡ 9.7 ಅಂತರದ ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿದ್ದರು.

ಬಿಜೆಪಿ ಮೂಲಕ ರಾಜಕೀಯ ರಂಗ ಪ್ರವೇಶಿಸುವ ಮುನ್ನ ತಾರಕಿಶೋರ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸದಸ್ಯರಾಗಿದ್ದರಲ್ಲದೆ, ಹಲವು ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು. 1974ರಲ್ಲಿ ಕಟಿಹಾರ್​ನ ಡಿಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ವೈಯಕ್ತಿಕ ಬದುಕಿನ ಕಡೆಗೆ ಗಮನಿಸಿದರೆ ಬಿಹಾರದ ಸಹರ್ಸಾ ಅವರ ಹುಟ್ಟೂರು. ತಂದೆ ಗಂಗಾ ಪ್ರಸಾದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net