2005ರ ಘಟನೆ, 20 ವರ್ಷಗಳಿಂದ ನಿದ್ರೆಯಲ್ಲೇ ಬದುಕು! ಸೌದಿ ಅರೇಬಿಯಾ ರಾಜಕುಮಾರನ ದುರಂತ ಕಥೆಯಿದು | Sleeping Prince

ವಿಜಯವಾಣಿ (48)
Published on

Sleeping Prince: ಅದು ಸೌದಿ ಅರೇಬಿಯಾದ ರಾಜಮನೆತನ. ಈ ರಾಜಮನೆತನಗಳು ಐಷಾರಾಮಿ ಜೀವನ ನಡೆಸುವುದಕ್ಕೆ ಜ್ವಲಂತ ಸಾಕ್ಷಿ. ರಾಜರ ಮನೆಯ ಮಕ್ಕಳು ಎಂದರೆ ಅಲ್ಲಿ ಖುಷಿ, ಸುಖದ ಸುಪ್ಪತ್ತಿಗೆಗೆ ಯಾವ ರೀತಿಯಲ್ಲೂ ಕೊನೆ ಇರುವುದಿಲ್ಲ. ಜೀವದ ಕಡೆ ದಿನಗಳವರೆಗೂ ಸುಖ, ನೆಮ್ಮದಿ, ಆನಂದಕ್ಕೆ ಯಾವ ಕುಂದು-ಕೊರತೆಯೂ ಇರೋದಿಲ್ಲ. ಆದರೆ, ಇಲ್ಲಿನ ರಾಜಮನೆತನದಲ್ಲಿ ನೆಮ್ಮದಿ, ಸುಖ ಎಲ್ಲವೂ ಕಳೆದ 20 ವರ್ಷಗಳಿಂದ ಕಣ್ಮರೆಯಾಗಿದೆ.

ಸೌದಿ ಅರೇಬಿಯಾದ ಅರಮನೆ ಜೀವನದ ಹಿಂದೆ, ಕೆಲವು ದುಃಖದ ಕಥೆಗಳೂ ಅಡಗಿರುತ್ತವೆ. ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರ ಜೀವನವನ್ನೇ ತಿಂದುಹಾಕಿದೆ. ಎರಡು ದಶಕಗಳಿಂದ ನಿದ್ರೆಯಲ್ಲೇ ಬದುಕುತ್ತಿರುವ 'ಸ್ಲೀಪಿಂಗ್ ಪ್ರಿನ್ಸ್​' ಎಂದು ಕರೆಯಲ್ಪಡುವ ಅಲ್-ವಲೀದ್, ಒಂದು ಘೋರ ಘಟನೆಯಿಂದ ಇಂದು ಈ ಪರಿಸ್ಥಿತಿಗೆ ತುತ್ತಾಗಿದ್ದಾರೆ. ಅಸಲಿಗೆ ನಿದ್ರೆಯ ಹಿಂದಿನ ಕಾರಣವೇನು? ಆ ದುರಂತ ಘಟನೆ ಏನು? ಎಂಬುದರ ವಿವರ ಹೀಗಿದೆ.

ಕತ್ತಲೆಯಾದ ರಾಜಕುಮಾರನ ಬದುಕು

ಇತ್ತೀಚೆಗಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ರಾಜಮನೆತನದ ಅಲ್-ವಲೀದ್ ಏಪ್ರಿಲ್ 18, 2025ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಕಳೆದ 20 ವರ್ಷಗಳಿಂದ ಕೋಮಾದಲ್ಲಿರುವ ವಲೀದ್​, 2005ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಮಾಗೆ ತುತ್ತಾದರು. ಅಪಘಾತ ನಡೆದ ಸಂದರ್ಭದಲ್ಲಿ ರಾಜಕುಮಾರ ಆರ್ಮಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಈ ದುರ್ಘಟನೆ ಸಂಭವಿಸಿದ ಬಳಿಕ ಹಾಸಿಗೆ ಹಿಡಿದ ವಲೀದ್​, ಇಂದಿಗೂ ಅದೇ ಹಾಸಿಗೆ ಮೇಲೆ ತಮ್ಮ ಜೀವನವನ್ನು ನಿದ್ರೆಯಲ್ಲೇ ಕಳೆಯುತ್ತಿದ್ದಾರೆ.

ಯಾರು ಈ ರಾಜಕುಮಾರ ಅಲ್-ವಲೀದ್?

ರಾಜಕುಮಾರ ಅಲ್-ವಲೀದ್ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ರಾಜಕುಮಾರ ತಲಾಲ್ ಬಿನ್ ಅಬ್ದುಲಾಜೀಜ್ ಅವರ ಸುಪುತ್ರ. ರಾಜಕುಮಾರ ಅಲ್-ವಲೀದ್ ಸೌದಿ ರಾಜಮನೆತನದ ಉತ್ತರಾಧಿಕಾರಿಯಾಗಿ ಎಲ್ಲರ ಸಮ್ಮುಖದಲ್ಲಿ ರಾರಾಜಿಸಬೇಕಿತ್ತು. ಆದರೆ, ಎಲ್ಲವೂ ಅದೊಂದು ದುರಂತ ಘಟನೆಯಿಂದ ಮಾಸಿ ಹೋಗಿದೆ. ಕಳೆದ 20 ವರ್ಷಗಳಿಂದ ಪ್ರಿನ್ಸ್ ವಾಲಿದ್ ಹಾಸಿಗೆ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಿನ್ಸ್ ಅಲ್-ವಲೀದ್ ಕಳೆದ 20 ವರ್ಷಗಳಿಂದ ವೆಂಟಿಲೇಟರ್‌ನಲ್ಲಿದ್ದು, ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಪೋಷಕರ ಭರವಸೆ

ಕೊನೆಯ ಬಾರಿಗೆ ಪ್ರಿನ್ಸ್ ದೇಹವು ಚಲಿಸಲು ಪ್ರಾರಂಭಿಸಿದ್ದು 2019ರಲ್ಲಿ. ಸಣ್ಣ ಸನ್ನೆಗಳೊಂದಿಗೆ ಏನೋ ಹೇಳಲು ಪ್ರಯತ್ನಿಸಿರುವುದು ಅವರ ಪೋಷಕರಲ್ಲಿ ಮುಂಚಿನಂತೆ ಎದ್ದು ಓಡಾಡುವ ಮುನ್ಸೂಚನೆಯನ್ನು ನೀಡಿದೆ. ಆದರೆ, ಮತ್ತೆ ನಿದ್ರೆಗೆ ಜಾರಿರುವ ಪ್ರಿನ್ಸ್​, ಆ ಭರವಸೆಯನ್ನು ಭರವಸೆಯಾಗಿಯೇ ಉಳಿಸಿದ್ದಾರೆ. ಬೆರಳು, ದೇಹ ತಿರುಗಿಸುವುದು ಸೇರಿದಂತೆ ಸಣ್ಣ ಸೂಚನೆಗಳು ವಲೀದ್​ ತಮಗಾದ ಅಪಘಾತದ ಬಗ್ಗೆ ಹೇಳುವ ಪ್ರಯತ್ನ ಎಂದು ಭಾವಿಸಲಾಗಿದೆ. ಇದನ್ನು ಗಮನಿಸಿದ ವೈದ್ಯರು, ಕೇವಲ ಕೈ ಸನ್ನೆ ಮಾಡಿದ ತಕ್ಷಣ ಅವರಿಗೆ ಪ್ರಜ್ಞೆ ಬರುತ್ತಿದೆ ಅಥವಾ ಬಂದಿದೆ ಎಂದು ಭಾವಿಸಬೇಡಿ ಎಂದು ತಿಳಿಸಿದ್ದಾರೆ. ಇಷ್ಟಾದರೂ ಪೋಷಕರು ಮಾತ್ರ ಭರವಸೆ ಕಳೆದುಕೊಳ್ಳದೆ ಇಂದಲ್ಲ, ನಾಳೆ ಮಗ ಗುಣಮುಖನಾಗಿ ಮಾತನಾಡುತ್ತಾನೆ ಎಂಬ ಭರವಸೆಯಲ್ಲೇ ಬದುಕುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net