

CSK: ಐಪಿಎಲ್ 18ನೇ ಆವೃತ್ತಿಯ ಮೊದಲಾರ್ಧ ಇದೀಗ ಮುಕ್ತಾಯಗೊಂಡಿದ್ದು, 8 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕೇವಲ ಎರಡು ಪಂದ್ಯ ಗೆದ್ದಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳನ್ನೆಲ್ಲ ಐದು ಬಾರಿ ಚಾಂಪಿಯನ್ಸ್ ತಂಡ ಹೀನಾಯವಾಗಿ ಸೋತಿದೆ. ಹಲವಾರು ವರ್ಷಗಳಿಂದ ಬಲಿಷ್ಠ ಫ್ರಾಂಚೈಸಿಯಾಗಿ ಮೆರೆದಿರುವ ಸಿಎಸ್ಕೆ, ಇದೇ ಮೊದಲ ಬಾರಿಗೆ ಕಳಪೆಯಲ್ಲೇ ತೀರ ಕಳಪೆ ಪ್ರದರ್ಶನ ನೀಡಿ, ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆರಂಭದಿಂದ ರುತುರಾಜ್ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸಿಕೊಂಡು ಬಂದರೆ, ಕಳೆದ ಮೂರು ಪಂದ್ಯಗಳಿಂದ ಮಾಜಿ ನಾಯಕ, ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ಇಷ್ಟಾದರೂ ಸಿಎಸ್ಕೆ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಧೋನಿ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನದಿಂದ ಪ್ರಸ್ತುತ ಕೊನೆ ಸ್ಥಾನದಲ್ಲಿ ಉಳಿದುಕೊಂಡಿದೆ.
ಎಂ.ಎಸ್. ಧೋನಿ ಅವರ ನಾಯಕತ್ವದಿಂದ ಏನಾದರೂ ಬದಲಾವಣೆ ಕಾಣಿಸಬಹುದು, ಸಿಎಸ್ಕೆ ಸತತ ಗೆಲುವಿನ ಮೂಲಕ ಪುಟಿದೇಳಬಹುದು ಎಂದು ಫ್ರಾಂಚೈಸಿ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, 8 ಪಂದ್ಯಗಳನ್ನಾಡಿರುವ ಸಿಎಸ್ಕೆ, 2 ಪಂದ್ಯಗಳನ್ನು ಹೊರತುಪಡಿಸಿ ಇನ್ನೆಲ್ಲ ಪಂದ್ಯವನ್ನು ಸೋತಿದೆ. ಇದು ಐದು ಬಾರಿ ಚಾಂಪಿಯನ್ಸ್ ತಂಡಕ್ಕೆ ಪ್ಲೇಆಫ್ ಕನಸು ಭಗ್ನ ಎಂಬುದನ್ನು ಬಹತೇಕ ಖಚಿತಪಡಿಸಿದೆ. ಈ ಕುರಿತು ಕಿಡಿಕಾರಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, "ಧೋನಿ ಬದಲಿಗೆ ಸುರೇಶ್ ರೈನಾ ಕ್ಯಾಪ್ಟನ್ ಆಗಬೇಕಿತ್ತು" ಎಂದಿದ್ದಾರೆ.
"ಸುರೇಶ್ ರೈನಾ ಇನ್ನು ಮೂರು ವರ್ಷ ಸಿಎಸ್ಕೆ ಪರ ಆಡಬೇಕಿತ್ತು. ಮೊದಲಿಗೆ ಅವರನ್ನು ತಂಡ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಇದು ರೈನಾ ಐಪಿಎಲ್ ನಿವೃತ್ತಿಗೆ ಕಾರಣವಾಯಿತು. 15 ವರ್ಷಗಳಿಂದ ಚೆನ್ನೈ ತಂಡವನ್ನು ಪ್ರತಿನಿಧಿಸಿದ ರೈನಾಗೆ ಚೆನ್ನೈ ತಂಡದ ಜವಾಬ್ದಾರಿಯನ್ನು ವಹಿಸಬಹುದಿತ್ತು. ಈ ಹಿಂದೆ ಸಿಎಸ್ಕೆಗೆ ಆತ ಮಾಜಿ ನಾಯಕನಾಗಿದ್ದ. ಆದರೆ, ಒಮ್ಮೆಯೂ ಆತನಿಗೆ ಕ್ಯಾಪ್ಟನ್ಸಿ ಅವಕಾಶ ಸಿಗಲಿಲ್ಲ" ಎಂದು ಬಜ್ಜಿ ಹೇಳಿದ್ದಾರೆ.
"ನಾನು ಬಹಳ ಖಚಿತವಾಗಿ ಹೇಳುತ್ತೀನಿ, ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪ್ಲೇಆಫ್ಗೆ ಎಂಟ್ರಿ ಕೊಡುವುದಿಲ್ಲ. ಆಟದ ದಿಕ್ಕು ಸಂಪೂರ್ಣ ಬದಲಾಗಿದೆ. ಇವರಿಗಿಂತ ಮುಂದೋಗಿದೆ. ಕೇವಲ ತವರಿನಲ್ಲಿ ಗೆದ್ದರೆ ಸಾಲುವುದಿಲ್ಲ. ಇತರೆ ಪಿಚ್ಗಳಲ್ಲಿಯೂ ಗೆಲುವು ಸಾಧಿಸಬೇಕು" ಎಂದು ಹರ್ಭಜನ್ ಸಿಎಸ್ಕೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).