ಯಾರೀ ಸೈಲೆಂಟ್​ ಸುನೀಲ? ಇಲ್ಲಿದೆ ಈತನ ಕ್ರೈಂ ಹಿನ್ನೆಲೆ

silent sunila
Published on

ಬೆಂಗಳೂರು: ರೌಡಿ ಸೈಲೆಂಟ್ ಸುನೀಲ್​ ನೇತೃತ್ವದಲ್ಲಿ ಆಯೋಜಿಸಿದ್ದ ನಿನ್ನೆ (ನ.27) ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೈಲೆಂಟ್ ಸುನೀಲ್ ಕುಮಾರ್​ಗೆ ಚುನಾವಣೆಗೆ ಸ್ಪರ್ಧಿಸುತ್ತಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ರೌಡಿ ಸುನೀಲ್, ರಾಜಕೀಯ ಅಖಾಡಕ್ಕೆ ಧುಮುಕುತ್ತಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿವಾದ ಹೆಚ್ಚಾಗುತ್ತಿದ್ದಂತೆ ಈ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದರು ಎಂಬುದು ನಮಗೆ ಅರಿವಿಲ್ಲದೆ ಹೋಗಿದ್ದಾಗಿ ಸಂಸದ ಪಿ.ಸಿ.ಮೋಹನ್​ ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕರಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಯಾರೀ ಸೈಲೆಂಟ್​ ಸುನೀಲ? ಇವರ ಕ್ರೈಂ ಹಿನ್ನೆಲೆ ಏನು? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

ಕೊಲೆ, ಕೊಲೆಯತ್ನ, ದರೋಡೆ ಯತ್ನ ಸೇರಿ ಒಟ್ಟು 20 ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಸೈಲೆಂಟ್ ಸುನೀಲ

  • 1996ರಲ್ಲಿ ಕೊಲೆಯತ್ನ ಪ್ರಕರಣ(307)- ರಾಜಾಜಿನಗರ ಠಾಣೆ
  • 1996ರಲ್ಲಿ ಪೊಲೀಸ್ ಹೆಡ್​ ಕಾನ್ಸ್​ಟೇಬಲ್ ಶೆಟ್ಟಾಳಪ್ಪ ಅವರ ಕೊಲೆ (ಕೃಷ್ಣಮೂರ್ತಿ ಅಲಿಯಾಸ್​ ಕಿಟ್ಟಿ, ಸುನೀಲ, ಮೋಹನ, ಲಚ್ಚಿ ಕೇಸಲ್ಲಿ ಸಿಕ್ಕಿಬಿದ್ದಿದ್ದರು)
  • 2000ರಲ್ಲಿ ಕೊಲೆಯತ್ನ ಕೇಸ್​- ಪ್ರಸಾದಿ ಹುಡುಗರ ಮೇಲೆ ಅಟ್ಯಾಕ್, ಸುಬ್ರಹ್ಮಣ್ಯನಗರ ಠಾಣೆ (ವಿಜಿ, ಬಲರಾಮ, ಯೋಗೀಶ, ಸುನೀಲ ಸಿಕ್ಕಿಕೊಂಡಿದ್ರು)
  • 2000ರಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ (ಸುನೀಲ, ಬಲರಾಮ, ಯೋಗೀಶ, ಶ್ರೀನಿವಾಸ, ಮಂಜುನಾಥ್, ಲಕ್ಷ್ಮಿನರಸಿಂಹ ಅಲಿಯಾಸ್​ ಲಚ್ಚಿ, ವಿಜಿಕುಮಾರ್ ಅಲಿಯಾಸ್​ ಸಪೋಟಾ ವಿಜಿ)
  • 2000ರಲ್ಲಿ ಕೊಲೆಯತ್ನ ಕೇಸ್​-ಸುಬ್ರಹ್ಮಣ್ಯನಗರ ಠಾಣೆ(ಸುನೀಲ, ಬಲರಾಮ, ವಿಜಿ, ಹನುಮಂತರಾಜು, ಶ್ರೀನಿವಾಸ)
  • 2004ರಲ್ಲಿ ಡಕಾಯಿತಿ ಯತ್ನ ಕೇಸ್​-ಸುಬ್ರಹ್ಮಣ್ಯ ನಗರ ಪೊಲೀಸ್​ ಠಾಣೆ (ಸುನೀಲ, ಗಿರೀಶ, ಲೋಹಿತ್)
  • 2003ರಲ್ಲಿ 307 ಕೇಸ್- ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆ
  • 2010ರಲ್ಲಿ ಆರ್ಮ್ಸ್ ಆ್ಯಕ್ಟ್ -ಸುಬ್ರಹ್ಮಣ್ಯನಗರ ಠಾಣೆ(ಸುನೀಲ, ಗೆಡ್ಡಾ ನಾಗ, ಕಿರಿಕ್ ಮಂಜ, ಬಾಲಾ, ಶ್ರೀನಿವಾಸ)
  • 2001ರಲ್ಲಿ ಡಕಾಯತಿ ಯತ್ನ ಪ್ರಕರಣ- ಶಂಕರಪುರ ಪೊಲೀಸ್ ಠಾಣೆಯಲ್ಲಿ ದಾಖಲಿ (ಒಂಟೆ ಲೋಹಿತ್, ಸುನೀಲ)
  • 2001ರಲ್ಲಿ ಬೈಲ್ ರವಿ ಕೊಲೆ ಕೇಸ್​- ವಿಜಯನಗರ ಪೊಲೀಸ್​ ಠಾಣೆ (ಮಚ್ಚಾ ಮಂಜ, ಪರಮೇಶ, ಕೋತಿರಾಮ, ಹೊಟ್ಟೆರಾಮ, ಮಾರೇನಳ್ಳಿ ಜಗ ಸೇರಿ 17 ಮಂದಿ ವಿರುದ್ಧ ಕೇಸ್​)
  • 2004ರಲ್ಲಿ ಬೆಕ್ಕಿನಕಣ್ಣು ರಾಜೇಂದ್ರನ ಮರ್ಡರ್ ಕೇಸ್​-ಹೈಗ್ರೌಂಡ್ ಪೊಲೀಸ್ ಠಾಣೆ (ಸುನೀಲ, ರೋಹಿತ, ಅನಾಲಿ, ಸಂತೋಷ, ಕ್ಯಾಪ್ಟನ್ ರಾಜ, ವೇಡಿ ಸೇರಿ 10 ಮಂದಿ ಫಿಟ್)
  • 2008ರಲ್ಲಿ ರಾಮನಗರ ಜೆಸಿ ಬಳಿ ಸುನೀಲನ ಟೀಂ ಅರೆಸ್ಟ್
  • 2009ರಲ್ಲಿ ಯಲಹಂಕ ನ್ಯೂಟೌನ್​ನಲ್ಲಿ ಬುಲೆಟ್ ರವಿ ಮತ್ತು ವಾಸು ಮರ್ಡರ್ ಕೇಸ್(ಸುನೀಲ, ಗೆಡ್ಡೆನಾಗ, ಕೊರಂಗು ಸೇರಿ 11 ಮಂದಿ ಅರೆಸ್ಟ್)
  • 2009ರಲ್ಲಿ ಹೆಣ್ಣೂರು ಲಿಮಿಟ್ಸ್​ನಲ್ಲಿ ಪ್ರಶಾಂತ ಮತ್ತು ಎಮ್ಮೆ ಮಂಜನ ಕೊಲೆ(ಸುನೀಲ, ಪಾಪೈತ, ರಾಘವೇಂದ್ರ, ಶ್ರೀಧರ, ಚಂದ್ರ ಸೇರಿ ಒಟ್ಟು 10 ಮಂದಿ ಅರೆಸ್ಟ್)
  • 2012ರಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ರೌಡಿ ರುದ್ರನ ಕೊಲೆ (ವೇಡಿ, ಷಣ್ಮುಗ, ಸುನೀಲ ಸೇರಿ 10 ಮಂದಿ ಅರೆಸ್ಟ್)
  • 2016ರಲ್ಲಿ ಕಡಬಗೆರೆ ಸೀನನ ಮೇಲೆ ಅಟ್ಯಾಕ್ ಸಂಬಂಧ ಸುನೀಲನ ವಿರುದ್ಧ ಕೋಕಾ ಅಸ್ತ್ರ ಪ್ರಯೋಗಿಸಿದ್ದ ಪೊಲೀಸರು

ಕಾಂಗ್ರೆಸ್​ ಕಿಡಿ: ಸೈಲೆಂಟ್ ಸುನೀಲ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್​ ಆಕ್ರೋಶ ಹೊರಹಾಕಿದೆ. 'ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ. ಆದರೆ ಬಿಜೆಪಿ ನಾಯಕರ ಜೊತೆಯಲ್ಲಿ ಇರುತ್ತಾನೆ. ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು ಅಂದ್ರೆ ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ಕೈವಾಡವಿದೆಯೇ?' ಎಂದು ಟ್ವೀಟ್ ಮೂಲಕ ‌ಕಿಡಿಕಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net