ಮುಖ್ಯ ಕಾರ್ಯದರ್ಶಿಯ ಉತ್ತರಾಧಿಕಾರಿ ಯಾರು?; ಅಧಿಕಾರಿ ವಲಯದಲ್ಲಿ ಗರಿಗೆದರಿದ ಚರ್ಚೆ

Vidhana Soudha vvani
Published on

ಬೆಂಗಳೂರು: ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿ ಯಾರಾಗಬಹುದು ಎಂಬುದು ಅಧಿಕಾರಶಾಹಿ ವಲಯದಲ್ಲಿ ಕುತೂಲಹದ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿ ಆಗಿರುವ ವಿಜಯಭಾಸ್ಕರ್ ಅವಧಿ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಇವರು ಜುಲೈ 2018ರಲ್ಲಿ ರತ್ನಪ್ರಭಾ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ರಾಜ್ಯದಲ್ಲಿ ಈ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ನೇಮಕ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದೆ. ಹಾಗಾಗಿ ಸೇವಾ ಜೇಷ್ಠತೆಯನ್ನೇ ಮಾನದಂಡವಾಗಿ ಇಟ್ಟುಕೊಂಡರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಪಿ.ರವಿಕುಮಾರ್ ನೇಮಕ ಸಾಧ್ಯತೆಗಳು ದಟ್ಟವಾಗಿವೆ. ರವಿಕುಮಾರ್ ನೇಮಕಗೊಂಡರೂ, ಒಂದೂವರೆ ವರ್ಷ ಅಧಿಕಾರದಲ್ಲಿದ್ದು ನಿವೃತ್ತರಾಗುತ್ತಾರೆ.

ಹಿರಿಯರು ಇವರು: ಪಿ.ರವಿಕುಮಾರ್ ನಂತರ ಸೇವಾ ಜೇಷ್ಠತೆ ಯಲ್ಲಿ ಪ್ರದೀಪ್ ಸಿಂಗ್ ಕರೊಲಾ, ಮಹೇಂದ್ರ ಜೈನ್, ವಂದಿತಾ ಶರ್ವ, ಐಎಸ್​ಎನ್ ಪ್ರಸಾದ್, ರಜನೀಶ್ ಗೋಯಲ್ ಹೆಸರುಗಳಿವೆ. ಸೇವಾ ಜೇಷ್ಠತೆ ಕಡೆಗಣಿಸಿ ಸಿಎಸ್ ನೇಮಕ ಮಾಡಿದ ಉದಾಹರಣೆಗಳು ಹಲವು ರಾಜ್ಯಗಳಲ್ಲಿವೆ.

6 ತಿಂಗಳು ಅವಧಿ ವಿಸ್ತರಣೆ: ಹಾಲಿ ಇರುವ ಮುಖ್ಯ ಕಾರ್ಯದರ್ಶಿಗಳನ್ನು ನಿವೃತ್ತಿ ನಂತರವೂ ಆರು ತಿಂಗಳ ಕಾಲ ವಿಸ್ತರಿಸುವ ಅಧಿಕಾರ ಸರ್ಕಾರಕ್ಕಿದೆ. ಹಾಗೊಂದು ವೇಳೆ ಅವಧಿ ವಿಸ್ತರಿಸುವ ಪ್ರಶ್ನೆ ಬಂದಲ್ಲಿ ಹುದ್ದೆ ಆಕಾಂಕ್ಷಿಗಳಾಗಿರುವ ಹಿರಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಬಹುದು.

ದಕ್ಷತೆಗೆ ಮನ್ನಣೆ ಸಿಗಲಿ: ಸರ್ಕಾರದ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಸರ್ಕಾರ ಸೇವಾ ಹಿರಿತನ, ರಾಜಕೀಯ ಲಾಬಿಗೆ ಮಣಿಯದೆ ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಮನ್ನಣೆ ನೀಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net