

ಬೆಂಗಳೂರು: ಜಲಸಂಪನ್ಮೂಲ ಸಚಿವ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ರಾಸಲೀಲೆ ವಿಡಿಯೋ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ಎನ್ನಲಾದ ವ್ಯಕ್ತಿ ಯುವತಿಯೊಬ್ಬಳ ಜೊತೆ ಸೆಕ್ಸ್ ಮಾಡುತ್ತಿರುವ ದೃಶ್ಯ ಕಾಣಿಸಿದೆ. ಇದು 4.19 ನಿಮಿಷ ಇದೆ.
ಈ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎನ್ನುವರು ಬಿಡುಗಡೆ ಮಾಡಿ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ. ಹಾಗಾದರೆ ಈ ದಿನೇಶ್ ಕಲ್ಲಹಳ್ಳಿ ಯಾರು ಎಂಬ ಪ್ರಶ್ನೆ ಎಲ್ಲರಿಗೆ ಇದೀಗ ಮೂಡಿದೆ.
41 ವರ್ಷದ ದಿನೇಶ್ ಕಲ್ಲಹಳ್ಳಿ ಮೂಲತಃ ಕನಕಪುರದವರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ, ಆರ್ಟಿಐ ಕಾರ್ಯಕರ್ತರಾಗಿರುವ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ. ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ಧಾರೆ.
ಕೆಲ ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ದಿನೇಶ್, ಸದ್ಯ ಪೂರ್ಣ ಪ್ರಮಾಣದಲ್ಲಿ ಆರ್ಟಿಐ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿದ್ದ ಮಾಜಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎನ್ನುವ ಕುರಿತು, ಸಚಿವ ನಾರಾಯಣಗೌಡ ಚುನಾವಣೆ ನಾಮಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ್ದಾರೆ ಎನ್ನುವ ಪ್ರಕರಣ ಸೇರಿದಂತೆ ಅನೇಕ ಮಹತ್ವದ ಪ್ರಕಣಗಳ ಬಗ್ಗೆ ಈ ದಿನೇಶ್ ಕಲ್ಲಹಳ್ಳಿ ಹೋರಾಡಿದ್ದಾರೆ. ಅವರು ಪ್ರವೃತ್ತಿಯಲ್ಲಿ ಫೋಟೊಗ್ರಾಫರ್ ಕೂಡ ಹೌದು.