ಆರ್​​ಎಸ್​​ಎಸ್​​ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಯಾರು?

dattatreya hosabale ktk
dattatreya hosabale
Published on

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಎರಡನೇ ಅತ್ಯುನ್ನತ ಹುದ್ದೆ ಸರ ಕಾರ್ಯವಾಹ ಆಗಿ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ. ಆರೆಸ್ಸೆಸ್ ವಲಯದಲ್ಲಿ ದತ್ತಾಜಿ ಎಂದೇ ಕರೆಯಲ್ಪಡುವ ದತ್ತಾತ್ರೇಯ ಹೊಸಬಾಳೆ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದಲ್ಲಿ.

1955ರ ಡಿ.1ರಂದು ಆರೆಸ್ಸೆಸ್ ಕಾರ್ಯಕರ್ತರ ಮನೆಯಲ್ಲಿ ಜನಿಸಿದ ದತ್ತಾತ್ರೇಯ ಹೊಸಬಾಳೆ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವೀಧರ. 1968ರಲ್ಲಿ ಆರೆಸ್ಸೆಸ್ ಸೇರಿ, 1972ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಯಲ್ಲಿ ಸಕ್ರಿಯರಾದರು. 1978ರಿಂದ ಪೂರ್ಣ ಕಾಲಿಕ ಕಾರ್ಯಕರ್ತರಾದರು. ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಪಸರಿಸುವ ಅನುಭವ ಹೊಂದಿದ್ದಾರೆ.

ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಸಂಸ್ಕೃತದಲ್ಲಿ ಮಾತನಾಡಬಲ್ಲರು. 2004ರಲ್ಲಿ ಆರೆಸ್ಸೆಸ್‌ನ ಬೌದ್ಧಿಕ ಚಟುವಟಿಕೆ ಮೇಲ್ವಿಚಾರಣೆಯ ಅಖಿಲ ಭಾರತೀಯ ಬೌದ್ಧಿಕ ಪ್ರಮುಖರಾದರು. 2009ರಿಂದ ಅಖಿಲ ಭಾರತೀಯ ಸಹ ಸರಕಾರ್ಯವಾಹರಾದರು. ಮುಖ್ಯವಾಗಿ ಯುವಕರನ್ನು ಆರೆಸ್ಸೆಸ್‌ನತ್ತ ಸೆಳೆಯುವ ದೂರಗಾಮಿ ಯೋಜನೆಗಳತ್ತ ಗಮನ ಹರಿಸುವ ಹೊಣೆ. ಉತ್ತಮ ವಾಗ್ಮಿ, ಅನೇಕ ವಿಚಾರಗಳನ್ನು ಮುಕ್ತವಾಗಿ ಮಾತನಾಡುವ ಹೊಸಬಾಳೆ 2018ರಲ್ಲೆ ಸರಕಾರ್ಯವಾಹ ಆಗುತ್ತಾರೆ ಎಂಬ ಸುದ್ದಿಗಳಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net