

ಬೆಂಗಳೂರು: ದೇಶದ ಆರ್ಥಿಕ ವಸ್ತುಸ್ಥಿತಿ ಅರಿಯಲು ದೇಶಾದ್ಯಂತ ಜಾರಿಗೆ ಬಂದಿರುವ 7ನೇ ಆರ್ಥಿಕ ಗಣತಿಗೆ ರಾಜ್ಯದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಗೋಚರಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕಾಯ್ದೆಯ ಆತಂಕದಿಂದ ಕೆಲವರು ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದು, ಈ ಬಗ್ಗೆ ಕೆಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಾರ್ವಜನಿಕ ತಿಳಿವಳಿಕೆ ಪತ್ರ ಹೊರಡಿಸಿದ್ದಾರೆ.
ಪತ್ರದಲ್ಲೇನಿದೆ?: ಆರ್ಥಿಕ ಗಣತಿಗೆ ನೀಡಿರುವ ಮಾಹಿತಿಯು ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರದ ದತ್ತಾಂಶ ಸಂಗ್ರಹಣೆ. ಈ ವೈಯಕ್ತಿಕ ಮಾಹಿತಿಯು ಸಿಎಎ ಮತ್ತು ಎನ್ಪಿಆರ್ಗೂ ಸಂಬಂಧಪಟ್ಟಿರುವುದಿಲ್ಲ. ಇದನ್ನು ಗೌಪ್ಯವಾಗಿರಿಸಲಿದ್ದು, ಸಾರ್ವಜನಿಕವಾಗಿ ಪ್ರಕಟಿಸುವುದಿಲ್ಲ. ಗೊಂದಲಗಳಿಗೆ ಒಳಗಾಗದೆ ಮಾಹಿತಿ ನೀಡುವ ಮೂಲಕ ಗಣತಿ ಯಶಸ್ವಿಗೊಳಿಸಲು ಸಹಕರಿಸಿ ಎಂದು ತಿಳಿವಳಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಮಗಳ ಪಟ್ಟಿ ತಯಾರಿಕೆ: ಆರ್ಥಿಕ ಗಣತಿಯನ್ನು ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯದ ಕೇಂದ್ರ ಸಾಂಖ್ಯಿಕ ಕಚೇರಿ ಮಾರ್ಗದರ್ಶನ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ, ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆ ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸುವುದು ಇದರ ಮುಖ್ಯ ಉದ್ದೇಶ. ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲೆಗೊಂಡು ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ, ಸೇವೆ ಸೇರಿ ಮತ್ತಿತರರ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಮತ್ತು ಘಟಕಗಳ ಪೂರ್ಣ ಎಣಿಕೆಯಾಗುತ್ತದೆ. ಇದೇ ಮೊದಲ ಬಾರಿಗೆ ಕಾಮನ್ ಸರ್ವೀಸ್ ಸೆಂಟರ್(ಸಿಎಸ್ಸಿ) ಮೂಲಕ ಕೈಗೆತ್ತಿಗೊಳ್ಳಲಾಗಿದೆ. ಮೊಬೈಲ್ ಆಪ್ ಮೂಲಕ ಗಣತಿ ಕಾರ್ಯ ನಡೆಯುತ್ತಿದೆ.