

ಆಂಧ್ರಪ್ರದೇಶ: ಟಾಲಿವುಡ್ ಬೆಡಗಿ, 'ಆಲಾ ವೈಕುಂಠಪುರಮುಲೋ' ಖ್ಯಾತಿಯ ನಟಿ ಪೂಜಾ ಹೆಗ್ಡೆ, 'ಗುಂಟೂರು ಖಾರಂ' ಸಿನಿಮಾದಿಂದ ಹೊರ ನಡೆದ ಬಳಿಕ ಇದೀಗ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ, ಮುಂದಿನ ಪ್ರಾಜೆಕ್ಟ್ಗಳು ಯಾವುವು, ಈಗ ಎಲ್ಲಿದ್ದಾರೆ? ಎಂಬ ಹಲವು ಪ್ರಶ್ನೆಗಳು ಇದೀಗ ಅವರ ಅಭಿಮಾನಿಗಳಲ್ಲಿ ಕಾಡತೊಡಗಿದೆ.
ಸ್ಟಾರ್ ಹೀರೋಗಳ ಸಿನಿಮಾಗೆ ಪೂಜಾ ಹೆಗ್ಡೆಯೇ ನಾಯಕಿಯಾಗಿ ಅಭಿನಯಿಸಬೇಕು ಎಂದು ನಿರ್ಧರಿಸುತ್ತಿದ್ದ ನಿರ್ದೇಶಕರು, ನಿರ್ಮಾಪಕರು ಇದೀಗ ತಮ್ಮ ಮುಂದಿನ ಸಿನಿಮಾಗಳಿಗೆ ನಟಿಯನ್ನು ಆಯ್ಕೆ ಮಾಡುವುದರ ಕುರಿತು ಹೆಚ್ಚು ಚಿಂತಿಸುವುತ್ತಿಲ್ಲ ಎಂಬುದು ಇತ್ತೀಚಿನ ದಿನಗಳಲ್ಲಿನ ಬೆಳವಣಿಗೆಯಿಂದ ತಿಳಿದು ಬಂದಿದೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾದಿಂದ ನಟಿ ಹೊರನಡೆದಿದ್ದೇ ತಡ, ಚಿತ್ರರಂಗದಲ್ಲಿ ಅವರ ಡಿಮ್ಯಾಂಡ್ ಕಡಿಮೆಯಾಗಿದೆ.
ಸದ್ಯ ನಟ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾವನ್ನು ಹೊರೆತುಪಡಿಸಿದರೆ ನಟಿಯ ಬಳಿ ಬೇರೆ ಯಾವುದೇ ಪ್ರಾಜೆಕ್ಟ್ಗಳಿಲ್ಲ ಎಂದು ವರದಿ ತಿಳಿಸಿದೆ. ತಮ್ಮ ನೆಚ್ಚಿನ ನಟಿಯನ್ನು ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುವ ಅಭಿಮಾನಿಗಳಿಗೆ ಇದೀಗ ತೀವ್ರ ಬೇಸರ ಮೂಡಿದೆ.
'ಗುಂಟೂರ್ ಖಾರಂ' ಚಿತ್ರದಿಂದ ಹೊರ ನಡೆದಿದ್ದೇ ಪೂಜಾ ಹೆಗ್ಡೆಗೆ ತೊಂದರೆಯಾಯ್ತ? ಎಂದು ಹಲವರು ಊಹಿಸಿದ್ದು, ಸದ್ಯ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಆಕ್ಟಿವ್ ಇಲ್ಲದೆ ಇರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಾರೆ ಅಭಿಮಾನಿಗಳ ಹಾರೈಕೆಯಂತೆ ಶೀಘ್ರವೇ ಪೂಜಾ ಹೆಗ್ಡೆ ಹಲವು ಪ್ರಾಜೆಕ್ಟ್ಗಳ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸಲಿ ಎಂದು ಆಶಿಸೋಣ,(ಏಜೆನ್ಸೀಸ್).