

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ. 26 ರಂದು ರಾಜ್ಯಾವ್ಯಾಪಿ ಬಂದ್‌ಗೆ ಕರೆ ನೀಡಲಾಗಿದ್ದು, ಕನ್ನಡ ಸಂಘಟನೆಗಳು ಒಗ್ಗೂಡಿ ಬಂದ್ ನಡೆಸಲು ಮುಂದಾಗಿದೆ. ಈ ಪೈಕಿ ಯಾವೆಲ್ಲಾ ಸಂಘಟನೆಗಳು ಅಭೂತಪೂರ್ವ ಬೆಂಬಲ ನೀಡಿದೆ ಎಂಬ ಮಾಹಿತಿ ಹೀಗಿದೆ.
ಮಂಗಳವಾರಕ್ಕೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಖಾಸಗಿ ಶಾಲಾ ಸಂಘಟನೆಗಳಿಂದ ಬೆಂಗಳೂರು ಬಂದ್‌ಗೆ ಬೆಂಬಲ ದೊರೆತಿದೆ. "ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ, ಬಂದ್‌ಗೆ ನಮ್ಮ ಸಂಪೂರ್ಣ ಪ್ರೋತ್ಸಾಹವಿದೆ" ಎಂದು ಶಾಲಾ ಪೋಷಕರ ಸಂಘಟನೆ ತಿಳಿಸಿದೆ.
ಐಟಿ ಸಂಸ್ಥೆಗಳು ಬೆಂಬಲ ನೀಡಲು ಮುಂದಾಗಿದ್ದು, ಅನ್ಯ ಭಾಷೆಯವರು ಕೂಡ ಬಂದ್ ದಿನ ಹಾಜರಾಗಲಿದ್ದಾರೆ. ಬೆಂಗಳೂರಿನ 400ಕ್ಕೂ ಹೆಚ್ಚು ಐಟಿ ಕಂಪನಿಯ ಸಂಘಟನೆ ಜತೆ ಬೆಂಬಲಿಸಲು ಮಾತುಕತೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಸೆ.26ರ ಬಂದ್‌ಗೆ ಆಟೋ, ಓಲಾ-ಊಬರ್, ಕೈಸ್ತಾ ಸಂಘಟನೆಗಳು ಹಾಗೂ ಖಾಸಗಿ ವಾಹನ ಚಾಲಕರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲು ಸಜ್ಜಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ, "26ರ ಬೆಂಗಳೂರು ಬಂದ್‌ಗೆ ನಮ್ಮ ಬೆಂಬಲವಿದೆ. ಎಲ್ಲಾ ವಾಹನಗಳನ್ನು ನಿಲ್ಲಿಸಲು ನಾವು ಮನವಿ ಮಾಡಿದ್ದೇವೆ" ಎಂದು ಹೇಳಿದರು.
"ನಾಡು,ನುಡಿ ವಿಚಾರ ಬಂದಾಗ ನಾವು ಮುಂಚೂಣಿಯಲ್ಲಿದ್ದೇವೆ. ಬಂದ್ ದಿನ ಆಟೋರಿಕ್ಷಾ, ಕ್ಯಾಬ್ ಯಾವುದು ರಸ್ತೆಗಿಳಿಯುವುದಿಲ್ಲ" ಎಂದು ಹೇಳಿದ್ದಾರೆ.