ನಾಗಾರಾಧನೆಯ ಪುಣ್ಯಪರ್ವ: ನಾಗರ ಪಂಚಮಿ ಆಚರಣೆ ಎಲ್ಲಿ, ಹೇಗೆ?

Nagara Panchami
Published on

ಸನಾತನ ಸಂಪ್ರದಾಯದಲ್ಲಿ ಬಂದಿರುವ ಹಬ್ಬಹರಿದಿನಗಳಲ್ಲಿ ನಾಗಪಂಚಮಿ ಪರ್ವಕ್ಕೆ ಮುಖ್ಯ ಸ್ಥಾನವುಂಟು. ದೇಶದ ಎಲ್ಲ ಭಾಗಗಳಲ್ಲೂ ಎಲ್ಲ ಮತ-ಪಂಥಗಳಲ್ಲೂ ಈ ಹಬ್ಬವನ್ನು ಆಚರಿಸುವ ಜನ ಇದ್ದಾರೆ. ‘ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನಪ್ರಾಪ್ತಿ, ಧನಪ್ರಾಪ್ತಿ ಉಂಟಾಗಲಿ, ಚರ್ಮರೋಗಗಳ ನಿವೃತ್ತಿಯಾಗಲಿ, ಸ್ವರ್ಗಪ್ರಾಪ್ತಿ ಉಂಟಾಗಲಿ’ ಇತ್ಯಾದಿ ಕಾರಣಗಳಿಂದ ಈ ವ್ರತವನ್ನು ಆಚರಿಸುತ್ತಾರೆ. ಶ್ರಾವಣ ಶುಕ್ಲಪಕ್ಷದ ಪಂಚಮಿ ತಿಥಿಯಲ್ಲಿ ಈ ಪರ್ವವನ್ನು ಆಚರಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಅಂದು ಪೂಜಿಸುವ ಎಂಟು ನಾಗದೇವತೆಗಳೆಂದರೆ ವಾಸುಕಿ, ತಕ್ಷಕ, ಕಾಳಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾಕೋಟಕ, ಧನಂಜಯ.

ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವ್ರತವನ್ನು ಹೀಗೆ ಆಚರಿಸುತ್ತಾರೆ. ಅಕ್ಕಿಯ ಹಿಟ್ಟಿನಿಂದ ಒಂದು ತೊಟ್ಟಿಲು ಅಥವಾ ಬಟ್ಟಲನ್ನು ಮಾಡಿ, ಅದರಲ್ಲಿ ಹಿಟ್ಟಿನಿಂದ ಮಾಡಿದ ಒಂದು ದೊಡ್ಡ ಮತ್ತು ಒಂದು ಚಿಕ್ಕ ನಾಗದೇವತಾ ವಿಗ್ರಹವನ್ನು ಇರಿಸುವುದು. ಆ ಸರ್ಪದೇವತಾ ವಿಗ್ರಹಗಳಿಗೆ ಹಾಲನ್ನು ಚಿಮುಕಿಸಿ ಪೂಜೆ ಮಾಡುವುದು, ಹುತ್ತದ ಮಣ್ಣು ಮತ್ತು ಹುಲ್ಲುಕಡ್ಡಿಗಳನ್ನೂ ಜತೆಯಲ್ಲಿ ಪೂಜಿಸುವುದು, ದೇವತೆಗಳಿಗೆ ಕ್ಷೀರ, ಅಕ್ಕಿಹಿಟ್ಟು, ಅರಳು, ಕಡಲೆಕಾಯಿ, ಚಿಗಳಿ ತಂಬಿಟ್ಟು, ಸಿಹಿ ಕಡುಬು, ಉದ್ದಿನ ಕಡುಬು ಇವುಗಳನ್ನು ವಿಶೇಷ ನೈವೇದ್ಯವನ್ನಾಗಿ ಸಮರ್ಪಿಸುವುದು, ಗೃಹದೇವತಾ ಪೂಜೆಯಲ್ಲೂ ಸರ್ಪವಿಗ್ರಹಕ್ಕೆ ಕ್ಷೀರಾಭಿಷೇಕ ನೈವೇದ್ಯಗಳು - ಮನೆಯಲ್ಲಿ ಹಬ್ಬ. ಆ ದಿವಸ ಸೋದರ ಸೋದರಿಯರು ಒಂದು ಕಡೆ ಸೇರಿ ಪರಸ್ಪರ ಅಭಿನಂದನೆ ಮಾಡಬೇಕು. ಯಥೋಚಿತವಾಗಿ ನಮಸ್ಕಾರವನ್ನೂ ಆಶೀರ್ವಾದವನ್ನೂ ಮಾಡುವುದು. ದೇಶದ ಕೆಲವು ಕಡೆಗಳಲ್ಲಿ ಮನೆಯ ಹೊರಗೂ ನಾಗದೇವತೆಗಳನ್ನು ಆರಾಧಿಸುವ ಪದ್ಧತಿ ಇದೆ.

ಕುಂಡಲಿನೀಶಕ್ತಿಯು ಬ್ರಾಹ್ಮೀಸ್ಥಿತಿಯನ್ನು ಹೊಂದುವುದಕ್ಕೆ ಸಹಾಯ ಮಾಡುತ್ತದೆ. ಅತೀಂದ್ರಿಯ ಕ್ಷೇತ್ರದಲ್ಲಿ ಮಾತ್ರ ಅನುಭವಕ್ಕೆ ಬರುವ ನಾಗದೇವತೆಗಳ ಅಂತರ್ಭಾವಕ್ಕೆ ಆರೋಹಣ ಮಾಡಲು ಸಾಮಾನ್ಯ ಜನರಿಗೆ ಸಹಾಯ ಮಾಡುವುದಕ್ಕಾಗಿ ಮಹರ್ಷಿಗಳು ಹೊರಗಡೆಯಲ್ಲೂ ನಾಗದೇವತಾ ವಿಗ್ರಹಗಳನ್ನು ಆರಾಧನೆ ಮಾಡುವ ಪದ್ಧತಿಯನ್ನು ತಂದರು. ನಾವು ಹೊರಗೆ ನೋಡುವ ನಾಗರಹಾವುಗಳಲ್ಲಿಯೂ ಈ ಕುಂಡಲಿನೀಶಕ್ತಿಯು ಅಲ್ಪಪ್ರಮಾಣದಲ್ಲಾದರೂ ಇರುತ್ತದೆ. ಇವುಗಳನ್ನು ಕೊಂದರೆ ಒಳಗಿರುವ ಕುಂಡಲಿನಿಯ ಪ್ರಸನ್ನತೆಗೆ ಘಾತವಾಗುತ್ತದೆ. ಆದ್ದರಿಂದ ನಾಗರಹಾವುಗಳನ್ನು ಕೊಲ್ಲಬಾರದು ಎಂಬ ಸಾಮಾನ್ಯ ವಿಧಿಯನ್ನು ಶಾಸ್ತ್ರಗಳು ಹೇಳುತ್ತವೆ. ನಾಗವಿಶೇಷಗಳೂ ದೇವತಾವಿಶೇಷಗಳು. ಅವರಿಗೆ ಪುರುಷಾಕಾರ, ನಾಗಸರ್ಪಾಕಾರ ಎರಡೂ ಉಂಟು. ಅನಂತ, ವಾಸುಕಿ, ಮುಂತಾದ ನಾಗವಿಶೇಷಗಳು ಲೌಕಿಕ ಆರೋಗ್ಯ, ಐಶ್ವರ್ಯಗಳನ್ನೂ ಯೋಗದಲ್ಲಿ ಊರ್ಧ್ವಗತಿಯನ್ನೂ ಅನುಗ್ರಹಿಸಿ ಭಕ್ತರನ್ನು ಕಾಪಾಡುತ್ತಾರೆ.

(ಆಕರ ಸೌಜನ್ಯ: ‘ಭಾರತೀಯರ ಹಬ್ಬ-ಹರಿದಿನಗಳು’ ಕೃತಿ)

ಕರೊನಾತಂಕದ ಕಾರಣ ನಾಗಾರಾಧನೆಯೇ ಪ್ರಧಾನವಾಗಿರುವ ದೇವಸ್ಥಾನಗಳಲ್ಲೂ ಇಂದು ಎಂದಿನ ಪೂಜೆ-ಪುನಸ್ಕಾರಗಳು ಸರಳವಾಗಿ ನೆರವೇರಲಿವೆ. ಕೆಲವೆಡೆ ದೇವಸ್ಥಾನ ಸಾರ್ವಜನಿಕರಿಗೆ ಮುಚ್ಚಿರಲಿದೆ, ಇನ್ನು ಕೆಲವೆಡೆ ಸಾರ್ವಜನಿಕರಿಗೆ ದೇವರ ದರ್ಶನಕ್ಕಷ್ಟೇ ಅವಕಾಶ ಇರಲಿದೆ. ಪ್ರಸಿದ್ಧ ನಾಗಾರಾಧನಾ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ, ಉಡುಪಿಯ ಅನಂತೇಶ್ವರ ದೇವಸ್ಥಾನ, ಮಂಜೇಶ್ವರದ ಶ್ರೀಮದನಂತೇಶ್ವರ ದೇವಸ್ಥಾನಗಳಲ್ಲಿ ಅರ್ಚಕರೇ ನಾಗನ ಸೇವೆ ಮಾಡಲಿದ್ದಾರೆ. ಬಳ್ಳಾರಿಯ ಹೊಸಪೇಟೆ ತಾಲೂಕು ಬುಕ್ಕಸಾಗರ ಗ್ರಾಮದಲ್ಲಿರುವ ಪ್ರಸಿದ್ಧ ಏಳುಹೆಡೆ ನಾಗಪ್ಪ ದೇವಸ್ಥಾನದಲ್ಲಿ ಭಕ್ತರಿಂದ ಹಾಲು ಹಾಕಲು ನಿಷೇಧಿಸಲಾಗಿದೆ. ದರ್ಶನಕ್ಕೆ ಮಾತ್ರ ಅವಕಾಶವಿದೆ. ಕರಿಯಪ್ಪ ತಾತ ಎಂದೂ ಕರೆಯಲ್ಪಡá-ವ ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಹಾಲಪೂರ ಗ್ರಾಮದ ದೇವಸ್ಥಾನದಲ್ಲಿರುವ ನಾಗದೇವತೆಯ ಪೂಜೆಗೆ ಈ ವರ್ಷ ಅವಕಾಶವಿಲ್ಲ. ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ನಾಗರಕಲ್ಲು ಅಥವಾ ಹುತ್ತಗಳಿಗೆ ಯಾವುದೇ ತರಹದ ತನಿ ಎರೆಯುವುದು, ಪೂಜೆ ಮಾಡುವುದನ್ನು ನಿಷೇಧಿಸಿದ್ದರೂ 65 ವರ್ಷ ಮೇಲ್ಪಟ್ಪ ಹಿರಿಯರು ಹಾಗೂ ಹತ್ತು ವರ್ಷದ ಒಳಗಿನ ಮಕ್ಕಳನ್ನು ಹೊರತುಪಡಿಸಿ ಉಳಿದ ಭಕ್ತರಿಗೆ ನಿಯಮಾನá-ಸಾರ ದರ್ಶನದ ಅವಕಾಶವಿದೆ. ನಾಗರ ಕಲ್ಲು ಪ್ರತಿಷ್ಠಾಪನೆ, ನಾಗರಪೂಜೆಗಳಿಗೆ ಹೆಸರಾದ ಗೌರಿಬಿದನೂರಿನ ವಿದುರಾಶ್ವತ್ಥದ ವಿದುರನಾರಾಯಣಸ್ವಾಮಿ ದೇವಾಲಯದಲ್ಲಿ ಈ ಬಾರಿಯ ಪೂಜೆ ಅರ್ಚಕರು ಮತ್ತು ಸಮಿತಿಗೆ ಮಾತ್ರ ಸೀಮಿತವಾಗಿರುತ್ತದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಳುವಳ್ಳಿಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ನಾಗರ ಪಂಚಮಿ ದಿನ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ನಾಗಬನದಲ್ಲೂ ಪೂಜೆಗೆ ಅವಕಾಶ ಇಲ್ಲ. ಮೂಡಿಗೆರೆಯ ಗೋಣಿಬೀಡು ಜಿ. ಅಗ್ರಹಾರದ ಆದಿಸುಬ್ರಹ್ಮಣ್ಯೇಶ್ವರ ದೇಗುಲದ ಜೀಣೊರ್ೕದ್ಧಾರ ನಡೆಯುತ್ತಿರುವ ಕಾರಣದಿಂದಾಗಿ ಭಕ್ತರು ಹೊರಭಾಗದಲ್ಲೇ ಪೂಜೆ ಸಲ್ಲಿಸಬಹುದು. ಸೊರಬ ತಾಲೂಕಿನ ಉರಗನಹಳ್ಳಿ ಕಾಳಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೊಸನಗರ ತಾಲೂಕಿನ ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ಸಾಂಪ್ರದಾಯಿಕ ಪೂಜೆ ಮಾತ್ರ ನಡೆಯಲಿದೆ. ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ಈ ಬಾರಿ ದೇವರ ಮತ್ತು ನಾಗಬನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಶಿರಸಿ ನೀಲೇಕಣಿಯ ಇತಿಹಾಸಪ್ರಸಿದ್ಧ ಸುಬ್ರಹ್ಮಣ್ಯೇಶ್ವರ ದೇವಸ್ಥಾನವನ್ನು ಕೆಲವು ದಿನಗಳ ತನಕ ಬಂದ್ ಮಾಡಲು ನಿರ್ಧರಿಸಲಾಗಿದೆ. ಗೋಕರ್ಣದ ಪುರಾಣಪ್ರಸಿದ್ಧ ನಾಗೇಶ್ವರ ಮಂದಿರದಲ್ಲಿ ನಾಗರಪಂಚಮಿ ದಿನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net