ರಿಸಲ್ಟ್ ಮುಗೀತು, ಕಲಿಕೆ ಸುಧಾರಣೆ ಯಾವಾಗ?

board
Published on

| ಎನ್.ಎಲ್.ಶಿವಮಾದು ಬೆಂಗಳೂರು

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ವೆಬ್​ಕಾಸ್ಟಿಂಗ್ ವ್ಯವಸ್ಥೆ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಗುಟ್ಟನ್ನು ರಟ್ಟು ಮಾಡಿದೆ. ಕಟ್ಟುನಿಟ್ಟಾಗಿ ಶಿಸ್ತಿನಿಂದ ಪರೀಕ್ಷೆ ನಡೆಸಿದ ಫಲವಾಗಿ ಫಲಿತಾಂಶದಲ್ಲಿ ಕುಸಿತ ಕಂಡಿರುವುದು ಪಾಲಕರನ್ನಷ್ಟೇ ಅಲ್ಲ, ಶಿಕ್ಷಣ ತಜ್ಞರಲ್ಲೂ ತಲ್ಲಣ ಮೂಡಿಸಿದೆ. ಇದೇ ಹೊತ್ತಲ್ಲಿ ಫಲಿತಾಂಶದ ವಿಚಾರ ಬದಿಗೊತ್ತಿ ಕಲಿಕೆ ಸುಧಾರಣೆಗೆ ಮೊದಲ ಆದ್ಯತೆ ಸಿಗಬೇಕೆಂಬ ಕೂಗು ಪ್ರತಿಧ್ವನಿಸಲಾರಂಭಿಸಿದೆ.

ರಾಜ್ಯದ ಮಕ್ಕಳ ಕಲಿಕೆ ಗುಣಮಟ್ಟಕ್ಕೆ ವೆಬ್​ಕಾಸ್ಟಿಂಗ್ ವ್ಯವಸ್ಥೆ ಕನ್ನಡಿಯಾಗಿದೆ. ಆದರೆ, ಶಾಲಾ ಶಿಕ್ಷಣದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸದಿದ್ದರೆ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿನ 3 ವಾರ್ಷಿಕ ಪರೀಕ್ಷೆಗಳೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು. 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಜಾರಿಗೊಳಿಸಿದರೆ, ರಾಜ್ಯದಲ್ಲಿ 2012ರಲ್ಲಿ ಆರ್​ಟಿಇ ಜಾರಿಯಾಯಿತು. ಮಕ್ಕಳನ್ನು ಅನುತ್ತೀರ್ಣಗೊಳಿಸಿದರೆ ಶಾಲೆಯಿಂದ ಹೊರಗುಳಿಯುತ್ತಾರೆ ಎಂಬ ಕಾರಣದಿಂದ ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿತು. ಅದಾದ ನಂತರ ರಾಜ್ಯದಲ್ಲಿ ಕಲಿಕಾ ಗುಣಮಟ್ಟ ಕುಸಿತವಾಗುತ್ತಿದೆ ಎಂಬುದನ್ನು ಸ್ವತಃ ಶಿಕ್ಷಣ ಇಲಾಖೆಯ ವರದಿಗಳೇ ಹೇಳುತ್ತಿವೆ. ಇದನ್ನು ಸರಿದೂಗಿಸಬೇಕೆಂಬ ಉದ್ದೇಶದಿಂದಲೇ 2019ರಲ್ಲಿ ಆರ್​ಟಿಇ ಕಾಯ್ದೆಗೆ ತಿದ್ದುಪಡಿ ತಂದು 5 ಮತ್ತು 8ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮೌಲ್ಯಮಾಪನ ಮಾಡಬೇಕು ಎಂಬ ಆದೇಶವಿದೆ.

ರಾಜ್ಯ ಪಠ್ಯಕ್ರಮದಲ್ಲಿಯೇ ಫಲಿತಾಂಶ ಕುಸಿತ ಏಕೆ?: ಕೇಂದ್ರ ಹಾಗೂ ರಾಜ್ಯದಲ್ಲಿ ಎನ್​ಸಿಇಆರ್​ಟಿ ಪಠ್ಯಕ್ರಮವನ್ನೇ ಪಾಲನೆ ಮಾಡಲಾಗುತ್ತಿದೆ. ಕೇಂದ್ರ ಪಠ್ಯಕ್ರಮ ಶಾಲೆಗಳು ಕನಿಷ್ಠ ಶೇ.99 ಫಲಿತಾಂಶ ಪಡೆಯುತ್ತವೆ. ಆದರೆ, ರಾಜ್ಯಪಠ್ಯ ಶಾಲೆಗಳಲ್ಲಿ ಮಕ್ಕಳು ಕನಿಷ್ಠ ಅಂಕಗಳನ್ನು ಸಹ ಪಡೆಯುತ್ತಿಲ್ಲ. ರಾಜ್ಯ ಪಠ್ಯಕ್ರಮದಲ್ಲಿ ಸರ್ಕಾರದ ಹೊಣೆಗಾರಿಕೆ ಪ್ರದರ್ಶಿಸದಿರುವುದು ಎಲ್ಲದಕ್ಕೂ ಕಾರಣವಾಗಿದೆ ಎಂದು ಪಾಲಕ ಚಂದ್ರಕೀರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲಾಖೆ ವರದಿ ಕೈಗನ್ನಡಿ: ರಾಜ್ಯ ಸರ್ಕಾರ ಮಕ್ಕಳ ಆರಂಭಿಕ ಬಾಲ್ಯ ಶಿಕ್ಷಣ (ಇಸಿಸಿಇ) ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್​ಇಪಿ) ಜಾರಿಗೊಳಿಸಲು ಕರ್ನಾಟಕ ಪಠ್ಯಕ್ರಮ ಚೌಕಟ್ಟು (ಕೆಸಿಎಫ್) ಪ್ರಕಟಿಸಿದೆ. 2020 ವರದಿ ಪ್ರಕಾರ 5ನೇ ತರಗತಿಯ ಮಕ್ಕಳಿಗೆ 2ನೇ ತರಗತಿಯ ಪಠ್ಯವನ್ನು ಕೊಟ್ಟು ಓದಿಸಿದಾಗ ಸರ್ಕಾರಿ ಶಾಲೆಗಳ ಶೇ.32.8 ಹಾಗೂ ಖಾಸಗಿ ಶಾಲೆಗಳ ಶೇ.35.5 ಮಕ್ಕಳು ಮಾತ್ರ ಓದುವ ಸಾಮರ್ಥ್ಯ ಹೊಂದಿದ್ದಾರೆ. ಖಾಸಗಿ ಶಾಲಾ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಅಭ್ಯಾಸಗಳು ಮತ್ತು ಟ್ಯೂಷನ್​ಗಳಿಂದ ಹೆಚ್ಚುವರಿ ಅವಕಾಶಗಳು ದೊರೆಯಲಿದೆ. ಆದರೂ ಪರಿಣಾಮಕಾರಿಯಾಗಿ ಕಲಿಕೆ ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಶೇ.50 ಮಕ್ಕಳು ಜಸ್ಟ್ ಪಾಸ್: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 8.69 ಲಕ್ಷ ಮಕ್ಕಳಲ್ಲಿ 6.31 ಲಕ್ಷವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ ಶೇ.35ರಿಂದ 49 ಫಲಿತಾಂಶ ಪಡೆದಿರುವ 1.65 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಭಾಗಶಃ ಮಕ್ಕಳನ್ನು ಸರ್ಕಾರವೇ ಕೃಪಾಂಕ ನೀಡಿ ಉತ್ತೀರ್ಣ ಮಾಡಲಾಗಿದೆ. ಉಳಿದ ಶೇ.50ರಿಂದ59 ಅಂಕ ಪಡೆದಿರುವ 1.65 ಮಕ್ಕಳಿದ್ದು, ಇವರಲ್ಲಿಯೂ ಕೆಲವರಿಗೆ ಕೃಪಾಂಕ ದೊರೆತಿದೆ. ಅಂದರೆ 6.31 ಲಕ್ಷದಲ್ಲಿ 3.21 ಮಕ್ಕಳು ಜಸ್ಟ್ ಪಾಸ್ ಆಗಿರುವವರೇ ಹೆಚ್ಚಿದ್ದಾರೆ. ಜಾಗತಿಕವಾಗಿ ಸ್ಪರ್ಧಿಸಲು ಮಕ್ಕಳಿಗೆ ಕೇವಲ ಅಂಕಗಳು ಮಾತ್ರವಲ್ಲ, ಕೌಶಲ ಕೂಡ ಮುಖ್ಯ ಎನ್ನುತ್ತಾರೆ ಶಿಕ್ಷಣ ತಜ್ಞ ಡಾ.ವಿ.ಪಿ, ನಿರಂಜನಾರಾಧ್ಯ.

ರಾಜ್ಯ ಸರ್ಕಾರದ ವೈಫಲ್ಯವೇ?: ಆರ್​ಟಿಟಿ ತಿದ್ದುಪಡಿ ಕಾಯ್ದೆ-2019ರಲ್ಲಿ 5 ಮತ್ತು 8 ನೇ ತರಗತಿಗಳಲ್ಲಿ ನಿಯಮಿತ ವಾರ್ಷಿಕ ಪರೀಕ್ಷೆ ಪರಿಚಯಿಸಲಾಯಿತು. ಒಂದು ವೇಳೆ ವಿದ್ಯಾರ್ಥಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಹೆಚ್ಚುವರಿ ತರಬೇತಿ ನೀಡಿ ಮತ್ತೊಂದು ಪರೀಕ್ಷೆ ನಡೆಸಬೇಕು. ಮರು ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದರೆ, ಆ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಬಹುದು ಎಂಬ ನಿಯಮವಿದೆ. ಈ ನಿಯಮವನ್ನು ಸರ್ಕಾರವು ಅನುಷ್ಠಾನ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮೌಲ್ಯಾಂಕನ ನಡೆಸುವಲ್ಲಿಯೂ ಸುಪ್ರೀಂಕೋರ್ಟ್​ನಲ್ಲಿ ತನ್ನ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಇದರ ನೇರ ಪರಿಣಾಮ ರಾಜ್ಯಪಠ್ಯಕ್ರಮ ಮಕ್ಕಳ ಕಲಿಕೆ ಮೇಲೆ ಬೀರುತ್ತಿದೆ ಎನ್ನುತ್ತಾರೆ ಖಾಸಗಿ ಶಾಲಾ ಆಡಳಿತ ಮಂಡಳಿ (ಕ್ಯಾಮ್್ಸ) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್.

ವರದಿಯಲ್ಲೇನಿದೆ?

. 2019ರ ವಾರ್ಷಿಕ ಶೈಕ್ಷಣಿಕ ವರದಿ ತಲ್ಲಣ

. 2ನೇ ಕ್ಲಾಸ್ ಶೇ.27 ಮಕ್ಕಳಷ್ಟೇ ಚುರುಕು

. ಶೇ.41 ಮಕ್ಕಳಿಗೆ ಸಂಕಲನ ಗೊತ್ತಿರುವುದು

. ಶೇ.30 ಮಕ್ಕಳಷ್ಟೇ ವ್ಯವಕಲನ ಮಾಡುತ್ತಾರೆ

. ಕನ್ನಡ ಲಿಪಿ ಕರಗತ ಮಾಡಲು ವರ್ಷಗಳೇ ಬೇಕು

ಕಾರಣಗಳೇನು?

. ಮಕ್ಕಳ ಕಲಿಕೆ ಮತ್ತು ಪರೀಕ್ಷಾ ನಿಯಮ ವೈಫಲ್ಯತೆ

. ಹಂತಹಂತವಾಗಿ ಅನುಷ್ಠಾನ ಮಾಡದಿರುವುದು

. ಹೀಗೆ ಮಾಡಿದಲ್ಲಿ ಮಕ್ಕಳ ಪರೀಕ್ಷೆ ಭಯ ಮಾಯ

. ಎಷ್ಟರ ಮಟ್ಟಿಗೆ ಕಲಿತಿದ್ದಾರೆ ಎಂಬ ಮೌಲ್ಯಮಾಪನ ಆಗಲಿ

. ಇದ್ಯಾವುದೂ ಮಾಡದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ಎಡವಟ್ಟು

ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸಲು ಸರ್ಕಾರ ಈ ಶೈಕ್ಷಣಿಕ ವರ್ಷದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಹಾಗೆಯೇ, ಮೌಲ್ಯಾಂಕನ ವಿಷಯ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

| ರಿತೇಶ್​ಕುಮಾರ್ ಸಿಂಗ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net