ಸಮಾಜಕ್ಕೆ ಸಂಕಷ್ಟ ಒದಗಿದಾಗ ವೀರಭದ್ರರಾಗಬೇಕು: ರಾಘವೇಂದ್ರ

Veerabhadra jayanti
ನಗರದ ಚೌಕಿ ಮಠದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಪ್ರದೀಪ್ ಕಂಕನಾಡಿ, ಬಿ.ಶಿವರಾಜ್, ಎಸ್.ಎಸ್.ಜ್ಯೋತಿಪ್ರಕಾಶ್, ಎಚ್.ಸಿ.ಯೋಗೇಶ್, ವೀರೇಶ್ ಗೌಡ, ಬಳ್ಳೆಕೆರೆ ಸಂತೋಷ ಇದ್ದರು.
Published on

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜ ಮತ್ತು ಉಪ ಪಂಗಡಗಳು ಒಂದಾಗಬೇಕು. ಸಮಾಜಕ್ಕೆ ಸಂಕಷ್ಟ ಒದಗಿದಾಗ ಎಲ್ಲರೂ ವೀರಭದ್ರರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಚೌಕಿ ಮಠದ ಆವರಣದಲ್ಲಿ ಶುಕ್ರವಾರ ಶಿವಮೊಗ್ಗ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ವೀರಭದ್ರ ದೇವರು ದುರ್ಬಲರಿಗೆ ಶಕ್ತಿ ಕೊಡುವವನು. ವೀರಭದ್ರ ದೇವರ ಹೆಸರೇ ರೋಮಾಂಚನಗೊಳಿಸುತ್ತದೆ ಎಂದರು.

ನಮ್ಮ ಸಮಾಜ ಕೂಡ ಶ್ರದ್ಧಾ ಭಕ್ತಿಯಿಂದ ವೀರಭದ್ರ ದೇವರಿಗೆ ನಡೆದುಕೊಳ್ಳುತ್ತದೆ. ಸಮಾಜದ ಸಂಘಟನೆ ಇನ್ನಷ್ಟು ಬೆಳೆಯಬೇಕು. ಸಮುದ್ರದ ರೀತಿಯಲ್ಲಿ ಎಲ್ಲರೂ ಒಂದಾಗಬೇಕು. ಅನೇಕ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳನ್ನು ಒಡೆಯಲು ನೋಡುತ್ತಿದೆ. ಆದರೂ ಕೂಡ ಸಮಾಜ ಒಂದಾಗಿ ನಿಲ್ಲುತ್ತದೆ ಎಂಬ ಆಶಯ ನನಗಿದೆ ಎಂದರು.
ವೇದಿಕೆ ಜಿಲ್ಲಾ ಕಾರ‍್ಯಾಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯ ವೀರಶೈವ ಲಿಂಗಾಯತ ಸಮಾಜ ಒಂದಾಗಿತ್ತು. ರಾಜಕೀಯ ಉದ್ದೇಶದಿಂದ ಕೆಲವರು ಲಿಂಗಾಯತ ಸಮಾಜವನ್ನು ಬೇರ್ಪಡಿಸಲು ಹೊರಟರು. ೯೫ ವರ್ಷದ ಶಾಮನೂರು ಶಿವಶಂಕರಪ್ಪನವರು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಆದರೆ, ನಮ್ಮ ಸಮಾಜವನ್ನು ಒಗ್ಗೂಡಿಸಿದ ಜಾತ್ಯಾತೀತ ಗುರುಗಳಾದ ಸಿರಿಗೆರೆ ಶ್ರೀಗಳು ಮರಿಸ್ವಾಮಿಗಳನ್ನು ನೇಮಿಸಬೇಕೆಂದು ಪಟ್ಟು ಹಿಡಿಯುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ನಮ್ಮ ಸಮಾಜ ಪ್ರಬಲವಾಗಿದ್ದರೂ ಸಂಘಟನೆಯಲ್ಲಿ ಹಿಂದುಳಿದಿದ್ದೇವೆ ಎಂಬ ಕಾರಣಕ್ಕೆ ಯುವಕರೆಲ್ಲ ಸೇರಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹುಟ್ಟುಹಾಕಿದ್ದಾರೆ. ಇದನ್ನು ಬೆಳೆಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ ರುದ್ರಾಭಿಷೇಕ ಮತತು ಖ್ಯಾತ ಚಿತ್ರ ಕಲಾವಿದ ಡಾ. ಆರ್.ಎಸ್. ರಾಜೇಶ್ ಅವರಿಂದ ಹುಮಾಯೂನ್ ಹರ್ಲಾಪುರ್ ತಂಡದವರ ವಚನಗಳ ಭಾವಕ್ಕೆ ಚಿತ್ರ ಮತ್ತು ಶಿಲ್ಪವೈಭವ ಎಂಬ ಆಕರ್ಷಕ ಕಾರ್ಯಕ್ರಮ ನಡೆಯಿತು.
ವೇದಿಕೆಯ ಅಧ್ಯಕ್ಷ ಶಿವರಾಜ್ ಬಿ. ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ, ಪ್ರಮುಖರಾದ ಆಯನೂರು ಮಂಜುನಾಥ್, ಹೆಚ್.ಸಿ.ಯೋಗೀಶ್, ಸಿ.ಪಿ.ಈರೇಶ್ ಗೌಡ್ರು, ರುದ್ರಮುನಿ ಸಜ್ಜನ್, ಬಳ್ಳೆಕೆರೆ ಸಂತೋಷ್, ಶಾರದಾ ಜಯ್ಯಣ್ಣ, ಅನಿತಾ ರವಿಶಂಕರ್, ರಾಜಶೇಖರ್, ಅಂಜಿ ರುದ್ರೇಶ್ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net