ಜ್ಞಾನ, ವಿಜ್ಞಾನ ಸಮ್ಮಿಳಿತವಾದರೆ ಜೀವನದಲ್ಲಿ ಹೊಸಬೆಳಕು

-67ffea0c87b14
Published on
ಭಾರತ ದೇಶದಲ್ಲಿ ನಾವು ಮೊದಲು ಏನು ಹೇಳುತ್ತಿದ್ದೆವು? ಮೊದಲು ನೀವು ಅನುಭವ ಪಡೆಯಿರಿ, ಧ್ಯಾನ ಮಾಡಿ, ಯೋಗ ಮಾಡಿ, ಜಪ ಮಾಡಿ. ನಂತರ ನಂಬಿಕೆಯು ಉಂಟಾಗುತ್ತದೆ ಎಂದು. ಪಾಶ್ಚಿಮಾತ್ಯ ದೇಶದಲ್ಲಿ, ಮೊದಲು ನೀವು ನಂಬಿರಿ, ಆಮೇಲೆ ನಿಮಗೆ ಯಾವುದೋ ಒಂದು ದಿನ ಅನುಭವ ಉಂಟಾಗುತ್ತದೆ ಎನ್ನುತ್ತಾರೆ.

ಆದ್ದರಿಂದಲೇ ನೋಡಿ ಪಾಶ್ಚಿಮಾತ್ಯ ದೇಶಗಳಲ್ಲಿ ಅನಾದಿಕಾಲದಿಂದ ವಿಜ್ಞಾನ ಹಾಗೂ ಧರ್ಮಕ್ಕೆ ಯಾವಾಗಲೂ ಜಗಳ ಆಗುತ್ತಲೇ ಇತ್ತು. ಆದರೆ ಭಾರತದಲ್ಲಿರುವ ನಮ್ಮ ಪದ್ಧತಿಯೇ ವೈಜ್ಞಾನಿಕವಾದದ್ದು. ಆದ್ದರಿಂದ ವಿಜ್ಞಾನ ಹಾಗೂ ಧರ್ಮಕ್ಕೆ ಯಾವಾಗಲೂ ಜಗಳವೇ ಇಲ್ಲ.

ನಮ್ಮ ದರ್ಶನ ಶಾಸ್ತ್ರ್ತದಲ್ಲಿ ನೋಡಿ: ಮೊದಲನೆಯ ಮೂರು ದರ್ಶನ ಶಾಸ್ತ್ರ್ತಳು ನ್ಯಾಯ, ವೈಶೇಷಿಕ ಹಾಗೂ ಸಾಂಖ್ಯ. ಈ ಮೂರೂ ವಿಜ್ಞಾನದ ಪರವೇ ಆಗಿದೆ. ನಂತರ ಬರುವುದು ಯೋಗ. ಅದೂ ವಿಜ್ಞಾನದ ಪರವಾಗಿದೆ. ನಂತರ ಪೂರ್ವ ಮೀಮಾಂಸ, ಉತ್ತರ ಮೀಮಾಂಸ. ನಮ್ಮ ಷಡ್ ದರ್ಶನಗಳೆಲ್ಲವೂ ನಮ್ಮ ವಿಜ್ಞಾನಕ್ಕೆ ಹೊಂದಿಕೊಂಡಿವೆ. ವೇದಾಂತ ತತ್ತ್ವಳನ್ನು, ಗ್ರಂಥಗಳನ್ನು ಅಧ್ಯಯನಮಾಡಿದರೆ, ಐನ್​ಸ್ಟೀನ್ ಓದಿದ ಹಾಗೆ ಅನ್ನಿಸುತ್ತದೆ. ವಿಜ್ಞಾನಕ್ಕೂ, ಅಧ್ಯಾತ್ಮಕ್ಕೂ ಇಲ್ಲಿ ಯಾವ ರೀತಿಯ ಜಗಳವೂ ಇಲ್ಲ. ‘ವಿಜ್ಞಾನಮಯೋ ಯಂ ಪುರುಷಾರ್ಥ’ ಎಂದರೆ, ನಿಮ್ಮ ಅನುಭವದಿಂದ ಜ್ಞಾನವನ್ನು ಪಡೆದುಕೊಳ್ಳಿ, ಬೇರೆಯವರು ಹೇಳುವುದು, ಕೇಳುವುದರಿಂದ ಮಾತ್ರ ಅಲ್ಲ, ಕೇಳಿದ್ದನ್ನು ಮನನ ಮಾಡಿ, ಮನನ ಮಾಡಿದ್ದನ್ನು ನಿಧಿಧ್ಯಾಸ ಮಾಡಿ, ನಿಮ್ಮದಾಗಿಸಿಕೊಳ್ಳಿ ಎಂದು ಹೇಳುತ್ತಾ ಬಂದಿದ್ದೇವೆ.

ನಮ್ಮ ಧರ್ಮದ ಮೂಲಕ್ಕೆ ನಾವು ಹೋಗಬೇಕಾಗಿದೆ. ಮೂಲದಲ್ಲಿ ವಿಜ್ಞಾನವೇ ತುಂಬಿಕೊಂಡಿದೆ. ಆದ್ದರಿಂದಲೇ ಭಾರತ ದೇಶದಲ್ಲಿ ಗಣಿತಶಾಸ್ತ್ರ, ಜ್ಯೋತಿಷ, ಜೀವಶಾಸ್ತ್ರ, ಆರ್ಯುವೇದ ಶಾಸ್ತ್ರ್ತ ಯೋಗ -ಹೀಗೆ ಹಲವಾರು ವಿಜ್ಞಾನಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಮನುಷ್ಯನಿಗೆ ಕೊಟ್ಟು ಹೋಗಿದ್ದಾರೆ.

ಈ ಸುಲಭ ಸೂತ್ರಗಳನ್ನೆಲ್ಲ ನೋಡಿದರೆ, ರೇಖಾಗಣಿತ, ತ್ರಿಕೋನ ಮಿತಿ ಗಣಿತ ಎಲ್ಲವೂ ಅದರಲ್ಲಿ ತುಂಬಿಕೊಂಡಿದೆ. ನಮ್ಮ ಕಲ್ಪಸೂತ್ರಗಳು, ಧರ್ಮಸೂತ್ರಗಳು ಇವೆಲ್ಲವೂ ದೂರದೃಷ್ಟಿಯ ವಶದಿಂದ ಮಾಡಲ್ಪಟ್ಟಿವೆ. ಜಾತಿ ಹಾಗೂ ಮೌಡ್ಯ ಪದ್ಧತಿಗಳನ್ನು ನಾವು ಇಟ್ಟುಕೊಳ್ಳುವುದನ್ನು ಬಿಟ್ಟು, ಪುಸ್ತಕಕ್ಕೆ ಬರೀ ಪೂಜೆ ಮಾಡುವುದನ್ನು ಬಿಟ್ಟು, ಅರಿಶಿನ, ಕುಂಕುಮ, ಗೆಜ್ಜೆವಸ್ತ್ರ ಹಾಕುವುದು...ಹೀಗೆ ಮಾಡುತ್ತಾ ಇದ್ದೇವೆ. ಎಲ್ಲೋ ಮಧ್ಯದಲ್ಲಿ ವೈಜ್ಞಾನಿಕ ದೃಷ್ಟಿಯಿಂದ ನೋಡುವುದು ಲೋಪವಾಯಿತು. ನಾವು ಅದನ್ನು ಪುನರುಜ್ಜೀವನಗೊಳಿಸಬೇಕು.

ಇನ್ನೊಂದು ವಿಷಯದ ಬಗ್ಗೆ ನಾವು ಗಮನ ಕೊಡಬೇಕು. ಒಂದು ಧಾರ್ವಿುಕ ತತ್ತ್ವ ಮತ್ತು ಇನ್ನೊಂದು ರೂಢಿ. ರೂಢಿಯಿಂದ ಬರುವ ಕೆಲವನ್ನು ಅಳವಡಿಸಿಕೊಂಡು ಬಂದಿರುತ್ತೇವೆ. ಇದಕ್ಕೆ ಧರ್ಮದಲ್ಲಿ, ಧರ್ಮದ ಆಚರಣೆಯಲ್ಲಿ ಯಾವ ತರಹದ ಸಂಬಂಧವೂ ಇರುವುದಿಲ್ಲ. ಆಧ್ಯಾತ್ಮದಲ್ಲಿ ಯಾವ ತರಹದ ಸಂಬಂಧವೂ ಇಲ್ಲ. ಈಗ ಕುಂಕುಮ ಹಚ್ಚಬೇಕಾದರೆ ಎರಡು ಸಲ ಹಚ್ಚಬೇಕು, ಮೂರು ಸಲ ಹಚ್ಚಬೇಕು, ನಾಲ್ಕುಸಲ ಹಚ್ಚಬೇಕು, ಇದು ಸುಮ್ಮನೆ ರೂಢಿ. ಇದಕ್ಕೆ ಯಾವ ಶಾಸ್ತ್ರದ ಆಧಾರವೂ ಇಲ್ಲ. ಗೆಜ್ಜೆ ವಸ್ತ್ರ ಮಾಡುವುದನ್ನು ನಾವು ಒಂದು ರೀತಿಯ ರೂಢಿಯಾಗಿ ಮಾಡಿಕೊಂಡು ಬರುತ್ತಿದ್ದೇವೆ. ಅದನ್ನು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎನ್ನುವುದನ್ನು ರೂಢಿ ಎನ್ನುತ್ತೇವೆ. ಇದಕ್ಕೂ ಧರ್ಮದ, ಗ್ರಂಥದ ಯಾವ ಆಧಾರವೂ ಇಲ್ಲ. ಕೆಲವೆಲ್ಲವೂ ಪದ್ಧತಿಯಿಂದ ಬಂದುಬಿಟ್ಟಿದೆ. ಅದು ಸಂಸ್ಕೃತಿಗೆ ಸಂಬಂಧಪಟ್ಟಿದ್ದು.

ಈ ಎರಡರ ಮಧ್ಯೆ ವಿಶ್ಲೇಷಣೆ ಮಾಡಬೇಕು. ಕೆಲವು ಸಲ ಈ ರೂಢಿ, ಪದ್ಧತಿಯಿಂದ ಬಂದಿರುವುದರಲ್ಲಿ ಮೌಢ್ಯ ಇರಬಹುದು, ಮೂಢ ನಂಬಿಕೆಗಳು ಬಂದಿರಬಹುದು. ಈ ರೀತಿಯ ರೂಢಿಗಳಿಂದ, ಪದ್ಧತಿಗಳಿಂದ ಸಮಾಜಕ್ಕೆ ದೊಡ್ಡ ಆಘಾತ ಆಗುತ್ತದೆ. ಅಸ್ಪೃ್ಯತೆಯೂ ಇಂತಹ ಒಂದು ರೂಢಿ. ಇದಕ್ಕೆ ಯಾವ ಶಾಸ್ತ್ರ್ತ ಆಧಾರವೂ ಇಲ್ಲ. ಮತ್ತೆ ಮಡಿ, ಮೈಲಿಗೆಯಲ್ಲಿ ಒಬ್ಬರಿಗೊಬ್ಬರು ದ್ವೇಷ ಮಾಡಿಕೊಳ್ಳುತ್ತ ಹೋಗುವುದು, ಪ್ರಾಣಿಗಳನ್ನು ಬಲಿಕೊಡುವುದು, ಕೋಳಿ, ಕುರಿ ಇವುಗಳನ್ನೆಲ್ಲ ಬಲಿಕೊಡುವುದು. ಇವೆಲ್ಲವೂ ರೂಢಿಗಳಿಂದ ಉಂಟಾಗಿದೆ.

ನಾವು ಪ್ರಗತಿಶೀಲರಾಗಿದ್ದೇವೆ. ಪ್ರಗತಿಶೀಲರಾದವರು ಧರ್ಮವನ್ನು ಅಲ್ಲಗೆಳೆಯುತ್ತಾರೆ. ಆಗ ಅವರು ಏನು ಮಾಡುತ್ತಾರೆ? ಅದರಲ್ಲಿ ಇರುವ ಒಳ್ಳೆಯದನ್ನು ಬಿಟ್ಟುಬಿಡುತ್ತಾರೆ. ಧಾರ್ವಿುಕರಾಗಿರುವ ವ್ಯಕ್ತಿಯು ಪ್ರಗತಿಶೀಲರಾಗಿರುವುದು ಕಡಿಮೆಯಾಗಿ ಕಾಣಿಸುತ್ತದೆ. ಪ್ರಗತಿಶೀಲರು ಮತ್ತು ಧಾರ್ವಿುಕರೂ ಆಗಿರುವುದು ಅತೀ ಕಡಿಮೆಯಾಗಿ ಕಾಣಿಸುತ್ತದೆ. ಈ ಎರಡೂ ಸೇರಿರಬೇಕು. ಪ್ರಗತಿಶೀಲರಾದ ಧಾರ್ವಿುಕ ವ್ಯಕ್ತಿಯು ಮಾತ್ರ ಈ ಸಮಾಜದಲ್ಲಿರುವ ಸಂಕಟವನ್ನು ದೂರ ಮಾಡಲು ಸಾಧ್ಯ. ಜ್ಞಾನ, ವಿಜ್ಞಾನ ಎರಡನ್ನೂ ಜೊತೆಯಲ್ಲೇ ಸೇರಿಸಿಕೊಂಡು ಹೋಗಬೇಕು. ಆಗ ಜೀವನದಲ್ಲಿ ಹೊಸ ಬೆಳಕು, ಹೊಸ ಉತ್ಸಾಹ, ಹೊಸ ಹುರುಪು, ಎಲ್ಲವೂ ಸಿಗುತ್ತದೆ. (ಪ್ರತಿಕ್ರಿಯಿಸಿ: instagram@gurudev.kannada )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net